ನಿರ್ದೇಶಕ ಕೊಟ್ಟಿದ್ದ ಕಾಟ ಬಹಿರಂಗಗೊಳಿಸಿದ ಗಾಯಕಿ ಸುನಿತಾ
ತೆಲುಗಿನ ಖ್ಯಾತ ಗಾಯಕಿ ಸುನಿತಾ ಉಪದ್ರಸ್ತ ಇತ್ತೀಚೆಗೆ ತಮ್ಮ ಮದುವೆಯ ಕಾರಣಕ್ಕೆ ಸುದ್ದಿಯಲ್ಲಿದ್ದರು. ಬಹು ಕಡಿಮೆ ವಯಸ್ಸಿಗೆ ಮದುವೆಯಾಗಿ ಪತಿಯಿಂದ ದೂರಾಗಿ ಬಹುಕಷ್ಟದಿಂದ ಬದುಕು ಕಟ್ಟಿಕೊಂಡಿದ್ದ ಸುನಿತಾ ಅವರಿಗೆ ಅವರ ಮಕ್ಕಳೆ ಮುಂದೆ ನಿಂತು ಇತ್ತೀಚೆಗಷ್ಟೆ ಅದ್ಧೂರಿಯಾಗಿ ಮದುವೆ ಮಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ಸುನಿತಾ ಇತ್ತೀಚೆಗೆ ಲೈವ್ ವಿಡಿಯೋ ಒಂದರಲ್ಲಿ ತೆಲುಗಿನ ನಿರ್ದೇಶಕನೊಬ್ಬ ತಮಗೆ ಕೊಟ್ಟಿದ್ದ ಕಾಟದ ಬಗ್ಗೆ ಮಾತನಾಡಿದ್ದಾರೆ. ಅದು ನನ್ನ ಜೀವನದ ಬಹಳ ಕೆಟ್ಟ ಸಮಯ ಎಂದು ಸಹ ಬಣ್ಣಿಸಿದ್ದಾರೆ.
'ನಾನು ಒಂದು ಡಬ್ಬಿಂಗ್‌ಗಾಗಿ ಸ್ಟುಡಿಯೋಗೆ ಹೋದೆ. ಆ ಸಿನಿಮಾದ ನಿರ್ದೇಶಕ ಮೊದಲೇ ಅಲ್ಲಿದ್ದ. 'ನಾನು ನಿಮ್ಮ ಅಭಿಮಾನಿ' ಎಂದು ಬಹಳ ಪ್ರೀತಿಯಿಂದ ಬರಮಾಡಿಕೊಂಡ. ಆದರೆ ಮುಂದೆ ಆತನ ಕರಾಳ ಮುಖ ತೋರಿಸಿದ' ಎಂದಿದ್ದಾರೆ ಸುನಿತಾ.

'ಬುಜ್ಜಿ', 'ಬಂಗಾರು' ಎನ್ನಲು ಆರಂಭಿಸಿದ: ಸುನಿತಾ
'ಗೌರವದಿಂದ ಮಾತನಾಡುತ್ತಿದ್ದ ಆ ನಿರ್ದೇಶಕ ಕೆಲ ಹೊತ್ತಿನ ಬಳಿಕ 'ಸುನಿತಾ' ಎಂದು ಹೆಸರು ಹಿಡಿದು ಕರೆಯಲು ಆರಂಭಿಸಿದ. ನಾನು ಇರಲಿ ಪರವಾಗಿಲ್ಲವೆಂದು ಸುಮ್ಮನೆ ಇದ್ದೆ. ಕೆಲವೇ ನಿಮಿಷಗಳಲ್ಲಿ 'ಬುಜ್ಜಿ', 'ಬಂಗಾರು' ಎನ್ನಲು ಆರಂಭಿಸಿದ. ಆಗ ನನಗೆ ಅನುಮಾನ ಬರಲು ಆರಂಭವಾಯಿತು' ಎಂದಿದ್ದಾರೆ ಸುನಿತಾ.

ಅದು ನನ್ನ ಜೀವನದ ಕೆಟ್ಟ ದಿನ: ಸುನಿತಾ
'ಸಮಯ ಕಳೆಯುತ್ತಾ ಆತನ ಚೇಷ್ಟೆಗಳು ಹೆಚ್ಚಾಗುತ್ತಾ ಹೋಗುತ್ತಿತ್ತು, ಮುಟ್ಟಿ ಮಾತನಾಡಿಸುವುದು, ಡಬಲ್ ಮೀನಿಂಗ್ ಮಾದರಿ ಮಾತುಗಳು ಹೇಳುವುದು ಹೀಗೆ ಹಲವು ರೀತಿಯಲ್ಲಿ ಆತ ನನಗೆ ಕಾಟ ಕೊಟ್ಟ. ನನಗೆ ವಿಪರೀತ ಭಯ, ಗಾಬರಿ ಆಗಿತ್ತು. ಡಬ್ಬಿಂಗ್ ಅನ್ನು ಆತುರಾತರದಲ್ಲಿ ಮುಗಿಸಿ ಅಲ್ಲಿಂದ ಹೊರಬಂದೆ' ಎಂದಿದ್ದಾರೆ ಸುನಿತಾ.

'ಈವರೆಗೆ ಅವನನ್ನು ನೋಡುವ ಸಂದರ್ಭ ಬರಲಿಲ್ಲ'
'ನನ್ನ ಜೀವನದಲ್ಲಿ ಅದು ಅತ್ಯಂತ ಕೆಟ್ಟ ಘಟನೆ. ನನ್ನ ಪುಣ್ಯಕ್ಕೆ ಇನ್ನೊಮ್ಮೆ ಆ ನಿರ್ದೇಶಕನೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಅಂದಿನ ನಂತರ ಆತನನ್ನು ನೋಡುವ ಸಂದರ್ಭ ಸಹ ಬರಲಿಲ್ಲ. ಈಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ, ಜೊತೆಗೆ ಸಿಟ್ಟು ಸಹ ಬರುತ್ತದೆ' ಎಂದಿದ್ದಾರೆ ಸುನಿತಾ.
Recommended Video

ಇತ್ತೀಚೆಗಷ್ಟೆ ವಿವಾಹವಾದ ಸುನಿತಾ
ಗಾಯಕಿ ಸುನಿತಾ 19 ವರ್ಷಕ್ಕೆ ಮದುವೆ ಆಗಿ ಇಬ್ಬರು ಮಕ್ಕಳನ್ನು ಪಡೆದರು. ನಂತರ ಪತಿ ಕಿರಣ್, ಸುನಿತಾರನ್ನು ಬಿಟ್ಟು ಹೋರಟುಬಿಟ್ಟರು. ಇತ್ತೀಚೆಗಷ್ಟೆ ಅವರ ಇಬ್ಬರು ಮಕ್ಕಳು ಸೇರಿ ಸುನಿತಾ ಅವರಿಗೆ ಉದ್ಯಮಿ ರಾಮಕೃಷ್ಣ ವೀರಪನ್ನೇನಿ ಎಂಬುವರೊಟ್ಟಿಗೆ ಮದುವೆ ಮಾಡಿಸಿದ್ದಾರೆ. ತೆಲುಗಿನಲ್ಲಿ ನೂರಾರು ಹಾಡುಗಳನ್ನು ಹಾಡಿರುವ ಸುನಿತಾಗೆ ಹಲವಾರು ಪ್ರಶಸ್ತಿಗಳು ದೊರಕಿವೆ.


Click it and Unblock the Notifications











