twitter
    For Quick Alerts
    ALLOW NOTIFICATIONS  
    For Daily Alerts

    ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಎಂಬ ಸರಸ್ವತಿ ಪುತ್ರ

    By ರವೀಂದ್ರ ಕೊಟಕಿ
    |

    ಭಾರತೀಯ ಸಿನಿಮಾ ರಂಗದಲ್ಲಿ ಚಿತ್ರ ಸಾಹಿತಿಗಳು 'ಪದ್ಮಶ್ರೀ' ಪಡೆದದ್ದು ತೀರ ವಿರಳ ಮತ್ತು ಅಪರೂಪ. ಅಂತಹ ಒಂದು ವಿರಳ ಮತ್ತು ಅಪರೂಪದ ಸಾಲಿಗೆ ಸೇರಿದವರು 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ.

    deep-rooted ಚಿತ್ರ ಸಾಹಿತಿಗಳಲ್ಲಿ ಅಗ್ರಗಣ್ಯರು 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ. 'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ ಹೆಸರು ತೆಲುಗು ಚಲನಚಿತ್ರ ಸಾಹಿತ್ಯರಂಗದಲ್ಲಿ ಅಜರಾಮರ. ನಿನ್ನೆ ಮಧ್ಯಾಹ್ನ ಭೌತಿಕವಾಗಿ ಈ ಜಗತ್ತಿನಿಂದ ದೂರವಾದ 'ಸಿರಿವೆನ್ನೆಲ' ತಮ್ಮ ಅಪಾರವಾದ ಸಾಹಿತ್ಯದ ಮೂಲಕ ಇಂದಿಗೂ ಕೂಡ ಜನಸಾಮಾನ್ಯರ ಮಧ್ಯೆ ಜೀವಂತವಾಗಿದ್ದಾರೆ. ಶಿಷ್ಟ ಸಾಹಿತ್ಯದಿಂದ ಹಿಡಿದು ಯುವಕರ ನಾಚಿಸುವಂತಹ ಸಾಹಿತ್ಯದವರೆಗೂ ಅನೇಕ ತರದ ಸಾಹಿತ್ಯ ಕುಸುಮಗಳು ಅವರ ಕಲಂನಿಂದ ಜಾರಿ ಬಂದಿವೆ. 'ಸಿರಿವೆನ್ನೆಲ' ಚಿತ್ರದ ಮೂಲಕ ಬೆಳ್ಳಿತೆರೆಗೆ ಚಿತ್ರಸಾಹಿತಿಯಾಗಿ ಬಂದ ಸೀತಾರಾಮಶಾಸ್ತ್ರಿಗಳು ಕೊನೆಯವರೆಗೂ ಸಾಹಿತ್ಯದ ಸಿರಿವೆನ್ನೆಲ (ಬೆಳದಿಂಗಳು) ಉಣಬಡಿಸಿದರು.

    'ಸಿರಿವೆನ್ನೆಲ' ಚಿತ್ರದ 'ವಿಧಾತ ತಲುಪುನ ಪ್ರಭವಿಂಚಿನದಿ ಅನಾದಿ ಜೀವನ ವೇದಂ ಓಂ...'

    ಇಂದ ಹಿಡಿದು ಮುಂಬರುವ ಎಸ್. ಎಸ್. ರಾಜಮೌಳಿ ಅವರ 'RRR' ಚಿತ್ರದ 'ದೋಸ್ತಿ....'ಹಾಡಿನವರೆಗೆ ಸುಮಾರು 3 ಸಾವಿರ ಹಾಡುಗಳನ್ನು ಬರೆದಿದ್ದಾರೆ. ಏಕಕಾಲಕ್ಕೆ ಕೆ. ವಿಶ್ವನಾಥ್ ಅಂತಹ ಲಲಿತಕಲೆಗಳ ಮೇಲಿನ ಅಪಾರ ಆಸಕ್ತ ನಿರ್ದೇಶಕನ ಜೊತೆಯಲ್ಲಿ ಆಧ್ಯಾತ್ಮಿಕ ಸಾರದ ಸಾಹಿತ್ಯ ಬರೆಯುತ್ತಲೇ, ಇನ್ನೊಂದಡೆ ಪರಮ ನಾಸ್ತಿಕನಾದ ರಾಮ್ ಗೋಪಾಲ್ ವರ್ಮಾ ಆಸ್ಥಾನ ಕವಿಯಾಗಿ ಮಿಂಚಿದವರು ಶಾಸ್ತ್ರಿಗಳು. ಸಹಜವಾದ ಪದ ಸಾಹಿತ್ಯದ ಲಾಲಿತ್ಯದೊಂದಿಗೆ ಕಾವ್ಯಬರೆಯುವ ಶಾಸ್ತ್ರಿಗಳು ಪ್ರತಿ ಹಾಡಿಗೊಂದು ಘನತೆ ಮತ್ತು ಗೌರವವನ್ನು ಕೊಟ್ಟವರು. ಸರಳ ಭಾಷೆಯಲ್ಲಿ ಬರೆದರೂ, ಕಾವ್ಯಾತ್ಮಕವಾಗಿ ಬರೆದರೂ ಅದರೊಳಗೊಂದು ಸಾಹಿತ್ಯ ಮೌಲ್ಯವನ್ನು ಶಾಸ್ತ್ರಿಗಳ ಸಾಹಿತ್ಯದಿಂದ ನಾವು ಕಾಣುತ್ತೇವೆ.

    'ಸಿರಿವೆನ್ನೆಲ' ಸೀತಾರಾಮಶಾಸ್ತ್ರಿ ಅವರು ಬರೆದ ಪ್ರತಿ ಹಾಡು ಕೂಡ ಒಂದು ರೀತಿಯಲ್ಲಿ ಆಳವಾದ ಅರ್ಥ ಗಂಭೀರತೆಯನ್ನು ಹೊಂದಿರುವಂತಹ ಹಾಡುಗಳು. ಕೆಲವು ಹಾಡುಗಳಂತೂ ಕೇವಲ ಹಾಡುಗಳಾಗಿ ಮಾತ್ರವಲ್ಲದೆ,ಸಾಹಿತ್ಯಕವಾಗಿ,ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಕೂಡ ಕಾಡುತ್ತವೆ. ಹೀಗೆ ಸಾಹಿತ್ಯಗಳನ್ನು ಚಿಂತನೆಗೆ ಕೂಡ ದೂಡಿದಂತಹ ಒಂದು ಹಾಡು ಸ್ವರ್ಣಕಮಲಂ ಚಿತ್ರದಲ್ಲಿನ 'ಶಿವಪೂಜಕು ಚಿವುರಿಂಚಿನ..'

    ನಿದ್ರೆ ಮಾಡಲು ಬಿಡದ ನಾಕು ಸಾಲುಗಳು

    ನಿದ್ರೆ ಮಾಡಲು ಬಿಡದ ನಾಕು ಸಾಲುಗಳು

    ಸ್ವರ್ಣಕಮಲಂ ಚಿತ್ರದಲ್ಲಿನ ಪ್ರತಿ ಹಾಡು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಒಂದು ಅದ್ಬುತವಾದ ಕಲಾಕೃತಿಗಳು. ರಾಷ್ಟ್ರಪ್ರಶಸ್ತಿ ವಿಜೇತ ಸ್ವರ್ಣಕಮಲಂ ಚಿತ್ರದಲ್ಲಿನ ಎಲ್ಲಾ ಹಾಡುಗಳನ್ನು ಕೂಡ ಶಾಸ್ತ್ರಿಗಳೇ ಬರೆದಿದ್ದು. 'ಶಿವಪೂಜಕು...' ಹಾಡಿನ ಬಗ್ಗೆ ಸಾಹಿತ್ಯ ವಲಯದಲ್ಲಿ ಅಪಾರವಾದ ಚರ್ಚೆ ನಡೆದಿತ್ತು. ಆ ಹಾಡಿನ ಸಾಹಿತ್ಯದ ಒಳಾರ್ಥಗಳ ಬಗ್ಗೆ ಸಾಹಿತ್ಯವಲಯ ದಿಗ್ಬ್ರಾಂತ ವಾಗಿತ್ತು. ಅದರಲ್ಲೂ ಒಂದು ಚರಣ ಎರಡರಲ್ಲಿ ಬರುವ ನಾಲ್ಕು ಸಾಲುಗಳು ವಿಶೇಷವಾಗಿ ಅನೇಕರು ಚರ್ಚೆ ಮಾಡಿದ್ದಾರೆ.

    'ತನ ವೇಳ್ಳೇ ಸಂಕಳ್ಳೈ ಕದಲಲೇನಿ ಮೊಕ್ಕಲಾ

    ಆಮನಿಕೈ ಎದುರು ಚೂಸ್ತೂ ಆಗಿಪೋಕು ಎಕ್ಕಡಾ

    ಅವಧಿ ಲೇನಿ ಅಂದಮುಂದಿ ಅವನಿಕಿ

    ನಲುದಿಕ್ಕುಲಾ...'

    ಸಿನಿಮಾ ಸಾಹಿತ್ಯ ಎರಡು ಬಗೆ

    ಸಿನಿಮಾ ಸಾಹಿತ್ಯ ಎರಡು ಬಗೆ

    ಸಿನಿಮಾ ಸಾಹಿತ್ಯ ತೆಗೆದುಕೊಂಡರೆ ಅಲ್ಲಿ ಮುಖ್ಯವಾಗಿ ಎರಡು ವಿಧವಿದೆ.ಒಂದು: ಇಷ್ಟದ ಸಾಹಿತ್ಯ, ಎರಡು: ಕಷ್ಟದ ಸಾಹಿತ್ಯ. ಯಾವುದು ಸುಲಭವಾಗಿ ಕಂಠಪಾಠವಾಗಿ ಬಿಡುತ್ತದೋ ಅದು ಇಷ್ಟದ ಸಾಹಿತ್ಯ. ಮತ್ತೆ ಈ ಇಷ್ಟ ಸಾಹಿತ್ಯದಲ್ಲಿ ಎರಡು ವಿಧಗಳಿವೆ. ಒಂದು: ಇನ್‌ಸ್ಟಂಟ್ ಕಾಫಿ ತರ ಸಿನಿಮಾ ಬಿಡುಗಡೆಯ ಕಾಲಘಟ್ಟದಲ್ಲಿ ಜನರ ನಾಲಿಗೆಯ ಮೇಲೆ ನಲಿದು ಮಾಯವಾಗುವುದು. ಎರಡು: ಎವರ್ ಗ್ರೀನ್ ಸಾಹಿತ್ಯವಾಗಿ ಮುಂದಿನ ಪೀಳಿಗೆಗೂ ದಾಟುವುದು. ಈ ಇಷ್ಟದ ಸಾಹಿತ್ಯಕ್ಕೆ ಮಿತಿಯಿದೆ. ಹೌದು, ಅದು ಕೇಳುವುದ್ದಕ್ಕೆ ಇಂಪು, ಇಷ್ಟವೂ ಆಗಬಹುದು. ಆದರೆ (ಕೆಲವು ಸಂದರ್ಭದಲ್ಲಿ ಅದು ಕಾಡಲೂ ಬಹುದು) ಬದುಕಿನ ಒಳಾರ್ಥಗಳನ್ನು, ಜೀವನ ಪ್ರೀತಿಯನ್ನು, ಸಾಮಾಜಿಕ ಚಿಂತನೆಯನ್ನು ಉದ್ದೀಪನಗೊಳಿಸುವುದಿಲ್ಲ. ಸಮಾಜದ ಚಿಂತನೆಯ ಒಳಾರ್ಥಗಳನ್ನು ಬೇಧಿಸುವ ಶಕ್ತಿ ಇರುವುದಿಲ್ಲ. ಅದೇ ಕಷ್ಟದ ಹಾಡು, ಅದು ಸುಲಭವಾಗಿ ಅರ್ಥವಾಗುವುದಿಲ್ಲ ಇಲ್ಲ ಒಳಸುಳಿಗಳನ್ನು ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ಭಾವುಕತೆ ಮಾತ್ರವಲ್ಲ ಒಂದು ಜೀವನದ ಪಯಣ, ಸಮಾಜವನ್ನು ಪ್ರಶ್ನಿಸುವ ನೈತಿಕತೆ, ಸಂಸ್ಕತಿಗಳ ಎಲೆ ಮೀರುವ ತವಕ ಒಂದಾ ಎರಡಾ ಹಲವು ಆಯಾಮಗಳು ಕಷ್ಟದ ಹಾಡುಗಳು ತುಂಬಿಕೊಂಡು ಬರುತ್ತದೆ. ಇಲ್ಲಿ ಕಷ್ಟದ ಸಾಹಿತ್ಯ ಅಂದರೆ ದುಃಖಭರಿತವವಾದ ಅಥವಾ ವಿಷಾದವೆಂದಲ್ಲ, ಕಷ್ಟವೆಂದರೆ ಸುಲಭಕ್ಕೆ ಅರ್ಥವಾಗದೆ, ಮತ್ತೆ, ಮತ್ತೆ ಸಾಹಿತ್ಯದ ಮೇಲೆ ಮನಸ್ಸುನೆಟ್ಟರೆ ಮಾತ್ರ ಅರ್ಥವಾಗುವ ಸಾಲುಗಳು. ಇಂತಹ ಸಾಲುಗಳು ಕಷ್ಟವಾಗಿದ್ರೂ ಇಷ್ಟವಾಗುವುದು ಅದರ ಸಹಜ ಸೌಂದರ್ಯದ ರಸದಿಂದ.

    ಜನಪ್ರಿಯ ಹಾಡುಗಳಷ್ಟೇ ಸಾಕೆ?

    ಜನಪ್ರಿಯ ಹಾಡುಗಳಷ್ಟೇ ಸಾಕೆ?

    ಸಾಹಿತ್ಯ ಸರಳವಾಗಿರಬೇಕು, ಅದು ಶ್ರೀಸಾಮಾನ್ಯನಿಗೂ ತಲುಪಬೇಕು. ಇದನ್ನು ಬಿಟ್ಟು ಅರ್ಥವಾಗದ ಅಕ್ಷರಗಳಿಂದ ಏನು ಪ್ರಯೋಜನ? ಬರೀ ಪಾಂಡಿತ್ಯ ಪ್ರದರ್ಶನ ಅಂತ ಕೊಂಕು ಮಾತಗಳು ಈ ಕಷ್ಟದ ಗೀತೆಗಳ ಕಡೆಗೆ ಸದಾ ಇದ್ದಿದ್ದೆ. ಇಷ್ಟದ ಹಾಡುಗಳು ನಿಮಗೆ ಸಾಹಿತ್ಯದ ಆಯಾಮಗಳನ್ನು ಎಷ್ಟರಮಟ್ಟಿಗೆ ಪರಿಚಯಿಸುತ್ತದೆಂತ? ಅಂತ ಪ್ರಶ್ನಿಸಿಕೊಂಡು ನೋಡಿ. ಹೌದು ಕಷ್ಟವಾದ ಅಥವಾ ಕಠಿಣವಾದ ಪದಜಾಲದಿಂದ ಅಕ್ಷರಜ್ಞಾನ ಸಾಮಾನ್ಯನಿಗೆ ದಕ್ಕುತ್ತದೆ. ಸಾಹಿತ್ಯದ ಒಲವು ಹೆಚ್ಚುತ್ತದೆ, ಭಾಷೆಯನ್ನು ಅರಿವು ವ್ಯಕ್ತಿಯ ಉತ್ಕಟ ಅಭಿಮಾನಕ್ಕೆ ಅದು ನೀರೆರದು ಪೋಷಿಸುತ್ತದೆ. ಸಾಹಿತ್ಯ ಸಮಾಜಮುಖಿಯಾಗಿದ್ದಾಗಲೇ ಅದಕ್ಕೆ ಗೌರವ, ಆದರಾಭಿಮಾನ ಸಿಗುವುದು.

    ಕೆ. ವಿಶ್ವನಾಥ್ ಚಿತ್ರಗಳ ಸಾಹಿತ್ಯದ ಇಂಪು ಅದು

    ಕೆ. ವಿಶ್ವನಾಥ್ ಚಿತ್ರಗಳ ಸಾಹಿತ್ಯದ ಇಂಪು ಅದು

    ತೆಲುಗಿನಲ್ಲಿ ಕೆ. ವಿಶ್ವನಾಥ್ ನಿರ್ದೇಶನದ ಮೂಡಿಬಂದ ಬಹುತೇಕ ಚಿತ್ರಗಳಲ್ಲಿ ಲಲಿತಕಲೆಗಳೆ ಪ್ರಧಾನವಾಗಿದ್ದ ಕಾರಣಕ್ಕೆ (ಶಂಕರಾಭರಣಂ, ಸ್ವಾತಿಮುತ್ಯಂ, ಸಾಗರಸಂಗಮಂ, ಸಿರಿವೆನ್ನಲ, ಸಪ್ತಪದಿ, ಶ್ರುತಿಲಯಾಲು) ಅವರು ಇಷ್ಟದ ಅಥವಾ ಜನಪ್ರಿಯ ಸಾಹಿತ್ಯದ ಕಡೆಗೆ ಅವರು ಒಲವು ಇರಿಸಿಕೊಂಡಿರಲಿಲ್ಲ. ಪ್ರತಿಯೊಂದು ಹಾಡು ಕಥೆ ಹಿಂದಿನ, ಮುಂದಿನ ನಿರೂಪಣೆಗೆ ಅನುಸಾರವಾಗಿ ಬಂದುಹೋಗುತ್ತದೆ. ಹೀಗಾಗಿ ಅಲ್ಲಿ ಸಾಹಿತ್ಯದ ಪಾತ್ರವೂ ದೊಡ್ಡದಾಗಿರುತ್ತದೆ. ಇವರ ಆಸ್ಥಾನ ಕವಿಗಳಾದ ಕೂಡ (ವೇಟೂರಿ) ಸುಂದರರಾಮಮೂರ್ತಿ, ಸಿನಾರೆ (ಸಿ. ನಾರಾಯಣರೆಡ್ಡಿ), 'ಸಿರಿವೆನ್ನಲ' ಸೀತಾರಾಮಶಾಸ್ತ್ರಿ ಸಾಹಿತ್ಯದಲ್ಲಿ ಅಪತ್ರಿಮವಾದ ಸಾಹಿತ್ಯ ಸಾಹಸವನ್ನು ಮರೆಯುತ್ತಿದ್ದರು. 'ನಿನಗೆ ಅರ್ಥವಾಗದೆ ಹೋದರೆ ನಷ್ಟವಿಲ್ಲ, ನಿನಗೆ ಅಗತ್ಯವೆನ್ನಿಸಿದರೆ ಅದರ ಅರ್ಥವನ್ನು ಹುಡುಕಿಕೋ' ಅನ್ನುವ ತತ್ವ ವಿಶ್ವನಾಥ್ ರವರದು ಕಠಿಣವಾದ ಪಾದಜಾಲವಿದ್ದರೂ ಕೇಳುವುದ್ದಕ್ಕೆ ಮಾತ್ರ ಇಂಪು, ಅದರ ಚಿತ್ರಕರಣ ಕಣ್ಣಿಗೆ ತಂಪು, ಒಟ್ಟಲ್ಲಿ ಒಂದು ಸೊಂಪಾದ ಸಾಹಿತ್ಯ-ಸಂಗೀತದ ವಾಗ್ದೇವಿ ಕುಸುಮದಂತೆ ಅವರ ಚಿತ್ರದಲ್ಲಿನ ಪ್ರತಿ ಹಾಡು ಇಂದಿಗೂ ಕೂಡ ಅಜರಾಮರವಾಗಿವೆ.ಅಂತಹ ಹಾಡುಗಳಲ್ಲಿ ಅತ್ಯಂತ ಪ್ರಮುಖವಾದ ಹಾಡುಗಳಲ್ಲಿ ಒಂದಾದ 'ಸ್ವರ್ಣಕಮಲಂ' ಚಿತ್ರದಲ್ಲಿನ 'ಶಿವ ಪೂಜಕು ಚಿವುರಿಂಚಿನ ಸಿರಿಸಿರಿಮುವ್ವ...' ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಗಳ ಅದ್ಭುತವಾದ ಕಾವ್ಯ ಚಿಂತನೆಗೆ ಕೈಗನ್ನಡಿ ಹಿಡಿಯುತ್ತದೆ.

    ಆ ನಾಲ್ಕು ಸಾಲುಗಳಲ್ಲಿ ಅಡಗಿದೆ ಜೀವನದ ಅರ್ಥ...

    ಆ ನಾಲ್ಕು ಸಾಲುಗಳಲ್ಲಿ ಅಡಗಿದೆ ಜೀವನದ ಅರ್ಥ...

    ಈ ಹಾಡಿನ ಆರಂಭದ ಬಗ್ಗೆ ಒಂದು ಸಣ್ಣ ವಿವರಣೆ. ಇಲ್ಲಿ ನಾಯಕ, ನಾಯಕಿಯಲ್ಲಿ ಅಡಗಿರುವ ಕಲಾವಿದೆಯನ್ನು ಹೊರಹೊಮ್ಮಿಸುವ ಪ್ರಯತ್ನದಲ್ಲಿ ಇರುತ್ತಾನೆ. ಆದರೆ ನಾಯಕಿಗೆ ಕಲೆ ಅದೊಂದು ವ್ಯರ್ಥವಾದ ಜೀವನಕ್ರಮವೆಂಬ ಭಾವನೆ. ಇಲ್ಲಿ ಸಾಹಿತ್ಯದ ಮೇಲಾಟ ಕಲೆ, ಕಲೆಗೆ ಮೀರಿದ ಬದುಕಿನ ಮಧ್ಯೆ ಒಂದು ತಿಕ್ಕಾಟದ ಚಿತ್ರಣ.

    ''ತನ ವೇಳ್ಳೇ ಸಂಕಳ್ಳೈ ಕದಲಲೇನಿ ಮೊಕ್ಕಲಾ

    ಆಮನಿಕೈ ಎದುರು ಚೂಸ್ತೂ ಆಗಿಪೋಕು ಎಕ್ಕಡಾ

    ಅವಧಿ ಲೇನಿ ಅಂದಮುಂದಿ ಅವನಿಕಿ

    ನಲುದಿಕ್ಕುಲಾ... ''

    ಇದರರ್ಥಕ್ಕೆ ಬಂದರೆ ತನ್ನ ಬೆರೆಳು (ಬೇರು)ಗಳಿಂದಲ್ಲೇ ಬಂಧಿಸಲಪಟ್ಟ ಗಿಡ ಮುಂದಕ್ಕೆ ಚಲಿಸಲಾಗದೆ, ಇರುವ ಕಡೆಯಿಂದಲ್ಲೇ ವಸಂತನಿಗಾಗಿ, ಹೊಸಚೈತ್ರಕ್ಕಾಗಿ ಎದುರು ನೋಡುತ್ತಿರುತ್ತದೆ. ಅದೇ ಭೂಮಿಗೆ ಕಾಲಾತೀತವಾದ ಅಂದ-ಆಕರ್ಷಣೆ, ರಸ, ಶೃಂಗಾರ ನಾಲ್ಕುದಿಕ್ಕಗಳಲ್ಲಿಯೂ ಇದೇ. ಇದನ್ನು ನೋಡಬೇಕಾದರೆ ಬಂಧನದಿಂದ ಮುಕ್ತವಾಗಬೇಕಾಗಿದೆ. ಇದನ್ನೇ ಯೋಚಿಸಿ ನೋಡಿದಾಗ ಹೌದು ನಾವೆಲ್ಲಾ ಒಂದಲ್ಲಾ ಒಂದು ಬಂಧನ ಬೇರುಗಳಿಂದ ಬಂಧಿಸಲಪಟ್ಟಿದ್ದೀವಿ. ಅದನ್ನು ಮೀರಲಾರದೇ ವಸಂತದ ಅನ್ವೇಷಣೆಯಲ್ಲಿ ಜೀವಿಸುತ್ತಿದ್ದೀವಿ. ಈ ಬಂಧನದ ಮಿತಿಯನ್ನು ದಾಟಿ ನೋಡದೇ ಹೋದರೆ ಹೊಸದಿಕ್ಕು, ದಿಗಂತದ ಅನುಭವ ದಕ್ಕುವುದಾದ್ದರೂ ಹೇಗೆ? ಧರ್ಮ ಒಂದು ಬೇರು, ಅದನ್ನು ಮೀರದೆ ಹೋದರೆ ಸತ್ಯದ ಅನುಭವ ಹೇಗೆ ದಕ್ಕುತ್ತದೆ? ಸಂಸ್ಕøತಿ ಒಂದು ಬೇರು, ಇದನ್ನು ಮೀರದೆ ಸಾಂಸ್ಕೃತಿಕತೆಯ ಅರಿವು ಹೇಗೆ ಮೂಡುತ್ತದೆ? ದೇಶ ಒಂದು ಬೇರು ಇದನ್ನು ದಾಟದೇ ವಿಶ್ವದ ಅರಿವು ಹೇಗೆ ಬೆಳೆಯುತ್ತದೆ?ಕಷ್ಟದ ಸಾಹಿತ್ಯ ಹೀಗೆ ಬೇರಿನ ಬಂಧನದಿಂದ ಮುಕ್ತವಾಗಿ ನಾನು ಜಗತ್ತಿನಲ್ಲಿ ಏನು ನೋಡಬಹುದು ಅಂತ ಯೋಚಿಸುವುದ್ದಕ್ಕೆ ಪ್ರೇರಿಪಿಸುತ್ತಿದೆ. ಇದಕ್ಕಿಂತ ಸಾಹಿತ್ಯಕ್ಕೆ ಇನ್ನೇನು ಬೇಕು?

    ಸಿರಿವೆನ್ನೆಲ ಶಾಪಗ್ರಸ್ತ ಋಷಿ: ತ್ರಿವಿಕ್ರಮ್ ಶ್ರೀನಿವಾಸ್

    ಸಿರಿವೆನ್ನೆಲ ಶಾಪಗ್ರಸ್ತ ಋಷಿ: ತ್ರಿವಿಕ್ರಮ್ ಶ್ರೀನಿವಾಸ್

    ತೆಲುಗಿನ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ವಿಕ್ರಂ ಶ್ರೀನಿವಾಸ್ ಅವರು ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರಿಗೆ ಹತ್ತಿರ ಬಂದು ಕೂಡ ಹೌದು. ಒಂದಾನೊಂದು ಸಂದರ್ಭದಲ್ಲಿ ಅವರು ಸೀತಾರಾಮಶಾಸ್ತ್ರಿ ಗಳ ಬಗ್ಗೆ ಮಾತನಾಡುತ್ತಾ " ಸೀತಾರಾಮಶಾಸ್ತ್ರಿಗಳು ವಾಸ್ತವದಲ್ಲಿ ಮನುಷ್ಯ ಜಾತಿಗೆ ಸಂಬಂಧಿಸಿದ ವ್ಯಕ್ತಿಯಲ್ಲ. ಅವರ ಜ್ಞಾನ, ಪಾಂಡಿತ್ಯ, ವಿಚಾರ ಇದೆಲ್ಲವನ್ನು ನೀವು ಅವಲೋಕಿಸಿದರೆ ಯಾವುದೋ ಶಾಪಗ್ರಸ್ತ ಋಷಿಯೊಬ್ಬ ಭೂಮಿಗೆ ಬಂದು ಜನಿಸಿದಂತೆ ಕಾಣುತ್ತದೆ.ಅವರ ಜನ್ಮದಿಂದ ಅವರ ಸುತ್ತ ಬದುಕುತ್ತಿರುವ ನಾವೆಲ್ಲರೂ ಧನ್ಯರಾಗಿದ್ದೇವೆ" ಅಂತ ಭಾವುಕವಾಗಿ ನುಡಿದಿದ್ದರು. "ಸಿರಿವೆನ್ನೆಲ ಚಿತ್ರದಲ್ಲಿನ ವಿಧಾತ ತಲುಪನ' ಹಾಡಿನ ಬರುವ ಎರಡು ಸಾಲುಗಳಾದ

    "ಪ್ರಾಗ್ದಿಸ ವೀಣಿಯ ಪೈನಾ...

    ದಿನಕರ ಮಯೂಕಾ ತಂತುಲನ ಪೈನಾ"

    ಇದರ ಅರ್ಥ ತಿಳಿಯುವುದಕ್ಕಾಗಿ ತೆಲುಗು ನಿಘಂಟುಗಳಿಗೆ ಮೊರೆಹೋದೆ. ಒಂದು ಹಾಡು ಅರ್ಥವಾಗುವಂತೆ ಬರೆಯುವ ಅಗತ್ಯವಿಲ್ಲ, ಆದರೆ ಅದನ್ನು ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿಸುವಂತೆ ಸಾಹಿತ್ಯ ಬರೆಯಬಲ್ಲವರು ಸಿರಿವೆನ್ನೆಲ" ಎನ್ನುತ್ತಾರೆ ತ್ರಿವಿಕ್ರಮ್ ಶ್ರೀನಿವಾಸ್.

    English summary
    Sirivennela Seetharama Sastry: a writer who expressed his radical views of society and romance based poerty in to the same breath, sastry garu is a true lenged. who enriched Telugu cinema literature with versatile and top class lyrics.
    Wednesday, December 1, 2021, 15:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X