ಚಿತ್ರಮಂದಿರದ ಒಳಗೆ ನುಗ್ಗಿದ ಹಾವುಗಳು; ಸಿಬ್ಬಂದಿ ಕಂಗಾಲು, ವೀಡಿಯೋ ವೈರಲ್
ಮಳೆಗಾಲದಲ್ಲಿ ಹಾವುಗಳ ಸುಳಿದಾಟ ಹೆಚ್ಚಾಗುತ್ತದೆ. ಹಾವುಗಳು ವಾಸಿಸುವ ಪೊಟರೆ, ಬಿಲಗಳಲ್ಲಿ ನೀರು ತುಂಬುವ ಕಾರಣ ಅವು ಬೆಚ್ಚಗಿನ ವಾತಾವರಣ ಅಥವಾ ಒಣ ಪ್ರದೇಶ ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುವುದು ಸರ್ವೇ ಸಾಮಾನ್ಯ. ಹಳ್ಳಿ ಭಾಗದಲ್ಲಿ ಮಳೆಗಾಲಕ್ಕೂ ಮುನ್ನವೇ ಹಾವುಗಳ ಸುಳಿದಾಟ ಶುರುವಾಗುತ್ತದೆ.
ನಗರದ ಪ್ರದೇಶಗಳಲ್ಲಿ ಈಗ ಹಾವುಗಳ ಸಂಖ್ಯೆ ಕಮ್ಮಿ ಆಗಿದೆ. ಮೊದಲಿನಂತೆ ಮನೆಗೆ ಗೇಟು, ಕಾಂಪೌಡ್, ರಸ್ತೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳಲ್ಲ. ನಿಜ ಹೇಳಬೇಕು ಅಂದರೆ ಹಾವುಗಳ ಸಂತತಿ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ. ಅದರಲ್ಲೂ ಕಾಂಕ್ರಿಟ್ ಕಾಡಿನಲ್ಲಿ ಅವುಗಳಿಗೆ ವಾಸಕ್ಕೆ ಯೋಗ್ಯವಾದ ವಾತಾವರಣ ಇಲ್ಲ. ಇದೀಗ ಚಿತ್ರಮಂದಿರಕ್ಕೆ ಹಾವುಗಳು ನುಗ್ಗಿರುವ ಘಟನೆ ನಡೆದಿದೆ.

ವಿಶಾಲವಾದ ಚಿತ್ರಮಂದಿರಕ್ಕೆ ಹಾವು ನುಗ್ಗಿದರೆ ಹುಡುಕುವುದು ಕಷ್ಟ. ಮೊದಲೇ ಹಾವು ಕಂಡರೆ ಜನ ಓಡಿಹೋಗುತ್ತಾರೆ. ಅಂಥಾದ್ದರಲ್ಲಿ ಚಿತ್ರಮಂದಿರದ ಒಳಗೆ ಕಂಡರೆ ಪರಿಸ್ಥಿತಿ ಹೇಗಿರಬೇಡ. ಇನ್ನು ಚಿತ್ರಮಂದಿರಗಳಲ್ಲಿ ನೂರಾರು ಜನ ಒಮ್ಮೆ ಕೂತು ಸಿನಿಮಾ ವೀಕ್ಷಿಸುತ್ತಾರೆ. ಸದಾ ಕತ್ತಲೆ ತುಂಬಿರುವ ಜಾಗ ಅದು. ಸಾಲದ್ದಕ್ಕೆ ಸೀಟಿನ ಕೆಳಗೆ ಹಾವು ಬಂದು ಸೇರಿಕೊಂಡರೆ ಗೊತ್ತಾಗುವುದು ಕಷ್ಟ.
ಹೈದರಾಬಾದ್ ಸಂಧ್ಯಾ ಚಿತ್ರಮಂದಿರದ ಟಿಕೆಟ್ ಕೌಂಟರ್ ಬಳಿ ಎರಡು ಹಾವುಗಳು ಕಂಡುಬಂದಿದೆ. ಸಿಬ್ಬಂದಿ ಟಿಕೆಟ್ ಪಡೆದು ಪ್ರೇಕ್ಷಕರನ್ನು ಚಿತ್ರಮಂದಿರದ ಒಳಕ್ಕೆ ಬಿಡುತ್ತಿದ್ದ ವೇಳೆ ಅವರ ಕಣ್ಣಿಗೆ 2 ದೊಡ್ಡ ಹಾವುಗಳು ಕಂಡಿವೆ. ಕೂಡಲೇ ಬೆಚ್ಚಿಬಿದ್ದ ಸಿಬ್ಬಂದಿ ಹಾವುಗಳ ಸಂರಕ್ಷರನ್ನು ಕರೆಸಿದ್ದಾರೆ. ಅವರು ಬಂದು ಅವುಗಳನ್ನು ಹಿಡಿದುಕೊಂಡು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಥಿಯೇಟರ್ ಹಾಲ್ ಒಳಗೆ ಹಾವು ನುಸುಳಿದ್ಯಾ? ಎಂದು ಪರಿಶೀಲಿಸಿದ್ದಾರೆ.
ಸಿಬ್ಬಂದಿ ಬ್ಯಾಟರಿ ಹಿಡಿದು ಚಿತ್ರಮಂದಿರದ ಒಳಗೆ ಸುತ್ತಾಡಿ ನೋಡಿದ್ದಾರೆ. ಎಲ್ಲೂ ಹಾವುಗಳು ಕಾಣಿಸಲಿಲ್ಲ. ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ಪದೇ ಪದೆ ಚಿತ್ರಮಂದಿರ ಬಳಿ ಹಾವುಗಳು ಕಾಣಿಸಿಕೊಳ್ಳುತ್ತವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಅಂದಹಾಗೆ 'ಪುಷ್ಪ'-2 ಸಿನಿಮಾ ರಿಲೀಸ್ ವೇಳೆ ಈ ಚಿತ್ರಮಂದಿರ ಬಹಳ ಚರ್ಚೆ ಹುಟ್ಟಾಕ್ಕಿತ್ತು. ಚಿತ್ರದ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಮಗ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುವಂತಾಯಿತು. ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್ 1 ಕೋಟಿ ರೂ, ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಹಾಗೂ ಮೈತ್ರಿ ಮೂವಿ ಮೇಕರ್ಸ್ 50 ರೂ. ಪರಿಹಾರ ಕೊಟ್ಟಿದ್ದರು.
ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ತೆರೆಗೆ ಬಂದಿತ್ತು. ಆದರೆ ಅದಕ್ಕಿಂತ ಒಂದು ದಿನ ಮುಂದೆ ಸಾಕಷ್ಟು ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿತ್ತು. ಅಂದು ಹೈದರಾಬಾದ್ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಫ್ಯಾಮಿಲಿ ಸಮೇತ ಹೋಗಿದ್ದಾರೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಒಮ್ಮೆಲೆ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಾಗ ಕಾಲ್ತುಳಿತ ಸಂಭವಿಸಿತ್ತು. ಈ ಸಂಬಂಧ ದೂರು ದಾಖಲಾಗಿ ವಿವಾದ ಭುಗಿಲೆದ್ದಿತ್ತು. ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಒಂದು ದಿನ ಜೈಲು ವಾಸ ಅನುಭವಿಸಿ ಬೇಲ್ ಪಡೆದು ಹೊರಬಂದಿದ್ದರು.
ಕಳೆದ 40 ವರ್ಷಗಳಿಂದ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಅಭಿಮಾನಿಗಳ ಸಂಭ್ರಮಾಚರಣೆಗೆ ಹೇಳಿಮಾಡಿಸಿದ ಥಿಯೇಟರ್ ಎಂದೇ ಹೆಸರಾಗಿದೆ. ಕಾಲ್ತುಳಿತ ಘಟನೆ ನಡೆಯುವುದಕ್ಕೂ ಮುನ್ನ 20 ಬಾರಿ ಅಲ್ಲು ಅರ್ಜುನ್ ಅದೇ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಒಂದ್ಕಾಲದಲ್ಲಿ 1500 ಜನ ಒಮ್ಮೆಲೆ ಸಿನಿಮಾ ನೋಡಲು ಅವಕಾಶ ಇತ್ತು. ಬಳಿಕ 300 ಸೀಟ್‌ಗಳನ್ನು ಕಡಿತಗೊಳಿಸಲಾಗಿತ್ತು.


Click it and Unblock the Notifications











