ಎನ್‌ಟಿಆರ್-ನೀಲ್ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್, ಆದರೆ ಈ ಬಾರಿ ಪ್ಲಾನ್ ಚೇಂಜ್ ಆಗಲ್ಲ ತಾನೇ..?
ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಹಣ ಮತ್ತು ವರ್ಷಗಳಿಗೆ ಲೆಕ್ಕ ಇಡದೇ ಚಿತ್ರ ಮಾಡಿ ಗೆದ್ದು ಭಾರತದೆಲ್ಲೆಡೆ ಹೆಸರು ಮಾಡಿದವರು ಪ್ರಶಾಂತ್ ನೀಲ್. ಉಗ್ರಂ ಎಂಬ ಒಂದೇ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡಿದ ಪ್ರಶಾಂತ್ ನೀಲ್ ಕೆ.ಜಿ.ಎಫ್ ಚಿತ್ರದ ಮೂಲಕ ಭಾರತದ ಸ್ಟಾರ್ ಡೈರೆಕ್ಟರ್ ಲಿಸ್ಟ್‌ಗೆ ಸೇರಿದರು. ತಮ್ಮದೇ ಆದ ಅಭಿಮಾನಿ ಬಳಗವನ್ನು ಕೂಡ ಸಂಪಾದಿಸಿದರು.
ಇವರ ಪ್ರಭೆ ಹೇಗಿದೆ ಅಂದರೆ ಸೌತ್ ಇಂಡಿಯಾದಲ್ಲಿ ರಾಜಮೌಳಿ ಅವರನ್ನು ಹೊರತು ಪಡಿಸಿದರೆ ಯಾರಾದರೂ ಶ್ರೇಷ್ಠ ನಿರ್ದೇಶಕ ಇದ್ದರೆ ಅದು ಪ್ರಶಾಂತ್ ನೀಲ್ ಮಾತ್ರ ಅನ್ನುವ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪೂರಕವಾಗಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿರುವ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿಯೇ ಬಿಡಾರ ಹೂಡಿದ್ದಾರೆ. ಅಲ್ಲಿನ ಸ್ಟಾರ್‌ಗಳಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಆ ಪೈಕಿ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಕೂಡ ಒಂದು.

ಕೆಲ ದಿನಗಳ ಹಿಂದೆಯಷ್ಟೇ ಈ ಚಿತ್ರದ ಚಿತ್ರೀಕರಣ ಶುರುವಾಗಿದೆ. ಎರಡು ಹಂತದ ಚಿತ್ರೀಖರಣ ಕೂಡ ಮುಗಿದಿದ್ದು ಸದ್ಯ ಪ್ರಶಾಂತ್ ನೀಲ್ ಮತ್ತವರ ತಂಡ ಕರ್ನಾಟಕದ ಹಲವಡೆ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದೆ. ಇದರ ನಡುವೆ ಖುಷಿಯ ಸಮಾಚಾರವನ್ನು ಹಂಚಿಕೊಂಡಿರುವ ಚಿತ್ರತಂಡ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.
ಹೌದು, ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಕಾಂಬಿನೇಶನ್‌ನ ಈ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು ಮುಂದಿನ ವರ್ಷ ಜೂನ್ 25ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಣ ಮೈತ್ರಿ ಮೂವಿ ಮೇಕರ್ಸ್ ಇಂದು ಹೇಳಿದೆ. ಸಹಜವಾಗಿ ಈ ಸುದ್ದಿ ಕೇಳಿ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಇನ್ನು ಕೆಲವರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇನ್ನು 14 ತಿಂಗಳು ಕಾಯಬೇಕಲ್ಲ ಎಂದು ಗೊಣಗಲು ಶುರು ಮಾಡಿದ್ದಾರೆ.
ಇನ್ನು ಪ್ರಶಾಂತ್ ನೀಲ್ ಸಿನಿಮಾ ಅಂದರೆ ಅದು ಪಂಚವಾರ್ಷಿಕ ಯೋಜನೆ. ತಮ್ಮ ಚಿತ್ರವನ್ನು ಹೇಳಿದ ಸಮಯಕ್ಕೆ ನೀಲ್ ಬಿಡುಗಡೆ ಮಾಡುವುದಿಲ್ಲ ಎಂಬ ಪ್ರೀತಿ ತುಂಬಿದ ತಕರಾರು ಇವರ ಅಭಿಮಾನಿಗಳದ್ದು. ಸಲಾರ್ ಇದಕ್ಕೆ ಅತ್ಯುತ್ತಮ ಉದಾಹರಣೆ.
ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿ ಪ್ರಶಾಂತ್ ನೀಲ್ ಆ ನಂತರ ಡಿಸೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದರು.ಇನ್ನು ಕೆ.ಜಿ.ಎಫ್ 2 ಚಿತ್ರ ಕೂಡ 2021ರ ಅಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರವನ್ನು ಏಪ್ರಿಲ್ 14 2022ರಂದು ಬಿಡುಗಡೆ ಮಾಡಲಾಯ್ತು. ಆಗ ಬಿಡುಗಡೆಗೆ ಕೊರೊನಾ ಕಾರಣವಾಗಿತ್ತು ಎನ್ನುವುದು ಬೇರೆ ವಿಷಯವಾದರು, ಪ್ರಶಾಂತ್ ನೀಲ್‌ಗೆ ತಮ್ಮ ಕೆಲಸದಿಂದ ಬೇಗ ತೃಪ್ತಿ ಸಿಗುವುದಿಲ್ಲ ಎನ್ನುವ ಮಾತು ಅಷ್ಟೇ ಸತ್ಯ. ಕೊನೆ ಕ್ಷಣದವರೆಗೆ ಚಿತ್ರಕ್ಕೆ ತಲೆ ಕೆಡಿಸಿಕೊಳ್ಳುತ್ತಲೇ ಇರುತ್ತಾರೆ ಪ್ರಶಾಂತ್ ನೀಲ್.
ಹೀಗಾಗಿ ಎನ್‌ಟಿಆರ್ ಮತ್ತು ನೀಲ್ ಜೋಡಿಯ ಈ ಚಿತ್ರ ಅಂದುಕೊಂಡ ದಿನದಂದು ಬಿಡುಗಡೆಯಾಗುತ್ತಾ ಎನ್ನುವ ಅನುಮಾನ ಈಗಿಂದನೇ ಅನೇಕರನ್ನು ಕಾಡುತ್ತಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಶಾಂತ್ ನೀಲ್ ಮುಂದೂಡದೆ ಇರಲಿ ಎನ್ನುವ ಪ್ರಾರ್ಥನೆಯನ್ನು ಜ್ಯೂ.ಎನ್.ಟಿ.ಆರ್ ಅವರ ಭಕ್ತಗಣ ಮಾಡುತ್ತಿದೆ.
ಅಂದ್ಹಾಗೇ ಈ ಚಿತ್ರವನ್ನು ಪ್ರಶಾಂತ್ ನೀಲ್ ಘೋಷಿಸಿ ನಾಲ್ಕು ವರ್ಷಗಳಾಗಿವೆ. ಆದರೂ ಕೂಡ ಈ ಚಿತ್ರದ ಹೆಸರೇನು ಎನ್ನುವುದು ಇನ್ನು ಪ್ರಶಾಂತ್ ನೀಲ್ ಹೇಳಿಲ್ಲ. ಜ್ಯೂ.ಎನ್.ಟಿ.ಆರ್ ಕೂಡ ಸುಳಿವು ನೀಡಿಲ್ಲ. ಆದರೆ ಈಗ ಈ ಪ್ರಶ್ನೆಗೆ ಉತ್ತರ ಸಿಗುವ ಕಾಲ ಸನ್ನಿಹಿತವಾದಂತೆ ಇದೆ. ಜ್ಯೂ.ಎನ್.ಟಿ.ಆರ್ ಅವರ ಹುಟ್ಟುಹಬ್ಬದ { ಮೇ 20 } ಪ್ರಯುಕ್ತ ಚಿತ್ರದ ಹೆಸರನ್ನು ಚಿತ್ರತಂಡ ರಿವೀಲ್ ಮಾಡುವ ಸಾಧ್ಯತೆ ಇದೆ. ಅವತ್ತೇ ಚಿತ್ರದ ಚಿಕ್ಕ ಟೀಸರ್ ಕೂಡ ಹೊರ ಬರುವ ನಿರೀಕ್ಷೆ ಇದೆ.
ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಹೀಗೆ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಭುವನ್ ಗೌಡ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ಧಾರೆ ಎನ್ನುವ ಸುದ್ದಿ ಇದೆ.


Click it and Unblock the Notifications











