"ಇಷ್ಟಾದ್ರೂ ದರ್ಶನ್ ಬೆಂಬಲಿಸುವ ಸುಮಲತಾಗೆ ನಾಚಿಕೆ ಆಗಲ್ವಾ?"; ಕೃಷ್ಣ ಕುಮಾರಿ ಹೇಳಿಕೆ ವೈರಲ್
ದರ್ಶನ್- ಪವಿತ್ರಾ ಗೌಡ ರಿಲೇಷನ್‌ಶಿಪ್ ಹಾಗೂ ರೇಣುಕಾಸ್ವಾಮಿ ಪ್ರಕರಣ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ರೇಣುಕಾಸ್ವಾಮಿ ಹ* ಪ್ರಕರಣವಂತೂ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆತ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದು ಬಳಿಕ ಆತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟಿದ್ದು ಈ ವೇಳೆ ಆತನ ಪ್ರಾಣಪಕ್ಷಿ ಹಾರಿಹೋಗಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.
ದರ್ಶನ್ ರೀತಿಯ ಖ್ಯಾತ ನಟ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಂಧನವಾಗಿದ್ದು ದೊಡ್ಡದಾಗಿ ಸುದ್ದಿ ಆಯಿತು. 141 ದಿನಗಳ ಕಾಲ ದರ್ಶನ್ ಜೈಲುವಾಸ ಅನುಭವಿಸಿ ಕೊನೆಗೆ ಜಾಮೀನು ಪಡೆದು ಹೊರ ಬಂದಿದ್ದಾರೆ. ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಸಹ 170 ದಿನ ಜೈಲಿನಲ್ಲಿ ಇರುವಂತಾಯಿತು. ಸದ್ಯ ಆಕೆಗೂ ಜಾಮೀನು ಸಿಕ್ಕಿದೆ.

ಕೆಲ ದಿನಗಳ ಹಿಂದೆ ತಮ್ಮಿಬ್ಬರ ರಿಲೇಷನ್‌ಶಿಪ್ ಬಗ್ಗೆ ಸ್ವತಃ ಪವಿತ್ರಾ ಗೌಡ ಸ್ಪಷ್ಟನೆ ನೀಡಿದ್ದರು. ಅದಾಗಿ ಕೆಲವೇ ತಿಂಗಳಲ್ಲಿ ರೇಣುಕಾಸ್ವಾಮಿ ಪ್ರಕರಣ ಬಯಲಿಗೆ ಬಂದಿತ್ತು. ಪವಿತ್ರಾ ಗೌಡಗಾಗಿ ರೇಣುಕಾಸ್ವಾಮಿಯನ್ನು ಅಪಹರಿಸಿ ಬುದ್ದಿ ಕಲಿಸಲು ದರ್ಶನ್ ಮುಂದಾಗಿದ್ದರು ಎನ್ನುವ ಆರೋಪ ಇದೆ. ಆದರೆ ಇನ್ನು ಪ್ರಕರಣದ ಅಂತಿಮ ತೀರ್ಪು ಹೊರ ಬಂದಿಲ್ಲ. ಪೊಲೀಸರು 3991 ಪುಟಗಳ ಶಾರ್ಜ್‌ಶೀಟ್ ಕೂಡ ಸಲ್ಲಿಸಿದ್ದಾರೆ.
ಸದ್ಯ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ತೆಲಂಗಾಣದ ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಅವರದ್ದು ಅದೆಂಥಹ ಸಂಬಂಧ? ಇಷ್ಟೆಲ್ಲಾ ಆದರೂ ಆತನನ್ನು ಬೆಂಬಲಿಸುತ್ತಿರುವ ಸುಮಲತಾ ಅಂಬರೀಶ್‌ಗೆ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ. ಟ್ರೀ ಮೀಡಿಯಾ ಡಿಜಿಟಲ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕೃಷ್ಣ ಕುಮಾರಿ ಮಾತನಾಡಿದ್ದಾರೆ.

"ಕಾನೂನಿನ ಮೇಲೆ ಜನರಿಗೆ ಭಯ ಕಮ್ಮಿ ಆಗಿದೆ. ಹಣ ಇರುವವರು ಈ ರೀತಿ ಭಾವಿಸುವುದರಿಂದ ಈ ರೀತಿ ಆಗುತ್ತಿದೆ. ನಾನು ತಪ್ಪು ಮಾಡಿದರೆ ಏನೆಲ್ಲಾ ಸಮಸ್ಯೆ ಆಗುತ್ತದೆ ಎನ್ನುವ ಭಯ ಜನರಿಗಿಲ್ಲ. ನಮಗೆ ಯಾರು ಏನು ಮಾಡುತ್ತಾರೆ? ಎನ್ನುವ ಭಂಡ ಧೈರ್ಯದಿಂದ ಜನ ಈ ರೀತಿ ಮಾಡುತ್ತಿದ್ದಾರೆ" ಎಂದು ಕೃಷ್ಣ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
"ಬಂಧನ ಆಗುತ್ತಿದ್ದಂತೆ ಪೊಲೀಸರ ಮುಂದೆ ಆರೋಪಿಗಳು ಎಲ್ಲಾ ವಿಚಾರ ಒಪ್ಪಿಕೊಳ್ಳುತ್ತಾರೆ. ಆದರೆ ಆ ಹೇಳಿಕೆಗೆ ಬೆಲೆ ಇರಲ್ಲ. ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿ ವಾದ ನಡೆದಾಗಲೇ ಅದಕ್ಕೆ ಬೆಲೆ. ಹಾಗಾಗಿ ಬಚಾವಾಗಬಹುದು ಬಿಡು ಎಂದು ಭಾವಿಸುತ್ತಾರೆ. ವಿವಾಹೇತರ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಕೆಲವರು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ರೇಣುಕಾಸ್ವಾಮಿ ಪ್ರಕರಣದ ವಿಚಾರದ ಬಗ್ಗೆ ಮಾತನಾಡಿರುವ ಕೃಷ್ಣ ಕುಮಾರಿ "ದರ್ಶನ್ ಹಾಗೂ ಪವಿತ್ರಾ ಗೌಡ ಇಷ್ಟು ದಿನ ಜೈಲಿನಲ್ಲಿ ಇದ್ದು ಬಂದು ಮತ್ತೆ ಒಟ್ಟಿಗೆ ಇರಬೇಕು ಎಂದುಕೊಳ್ಳುತ್ತಾರೆ ಅಂದ್ರೆ ಅದಕ್ಕೆ ಏನು ಹೇಳುವುದು. ತನ್ನ ಪತಿ ಜೈಲಿನಿಂದ ಹೊರ ಬರಬೇಕು ಎಂದು ವಿಜಯಲಕ್ಷ್ಮಿ ನಡೆಸಿದ ಹೋರಾಟಕ್ಕೆ ಏನು ಬೆಲೆಯಿದೆ" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ದರ್ಶನ್ ಅಂತಹವನಲ್ಲ, ಆತನನ್ನು ಕಂಕುಳಲ್ಲಿ ಎತ್ತಿಕೊಂಡು ಕೈತುತ್ತು ತಿನ್ನಿಸುತ್ತೇನೆ ಎಂದು ಹೇಳುವ ಸುಮಲತಾ ಮಾತಿಗೆ ಅರ್ಥ ಇದ್ಯಾ? ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳ ಜೊತೆ ವಿವಾಹೇತರ ಸಂಬಂಧ ಇಟ್ಕೊ, ಸಹಜೀವನ ಮಾಡು, ಈ ಬಗ್ಗೆ ಮಾತನಾಡಿದವರನ್ನು ಸಾಯ್ಸು, ಜೈಲಿಗೆ ಹೋಗಿ ಬಂದಮೇಲೆ ಮತ್ತೆ ಸಹಜೀವನ ನಡೆಸಿ ಎನ್ನುತ್ತಾರಾ? ಅದೇ ಆಕೆಯ ಉದ್ದೇಶ ಆಗಿದ್ದರೆ ಅದಕ್ಕಿಂತ ಹೀನಾಯ ವಿಚಾರ ಮತ್ತೊಂದಿಲ್ಲ" ಎಂದು ಕೃಷ್ಣ ಕುಮಾರಿ ಹೇಳಿದ್ದಾರೆ.


Click it and Unblock the Notifications











