For Quick Alerts
  ALLOW NOTIFICATIONS  
  For Daily Alerts

  ಅರೆ ಜೀವವಾಗಿರುವ ಶಿವಶಂಕರ್‌ ಮಾಸ್ಟರ್‌ಗೆ ಸೋನು ಸೂದ್ ನೆರವಿನ ಹಸ್ತ

  |

  ಸೋನು ಸೂದ್ ತಮ್ಮ ಸಿನಿಮಾದಿಂದಲ್ಲ ಬದಲಿಗೆ ಮಾನವೀಯತೆಯಿಂದ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದವರು. ಕೊರೊನಾ ಸಮಯದಲ್ಲಿ ಸೋನು ಸೂದ್ ಮಾಡಿದ ಸೇವೆಗೆ ಪ್ರತಿಯಾಗಿ ಜನ ಅವರನ್ನು 'ಮಸೀಯಾ' (ದೇವರು) ಎಂದು ಕರೆದಿದ್ದಾರೆ.

  ಸಾಮಾನ್ಯ ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುವ ಸೋನು ಸೂದ್ ಇನ್ನು ತಮ್ಮದೇ ಚಿತ್ರರಂಗದ ಸದಸ್ಯರು ಸಮಸ್ಯೆಯಲ್ಲಿದ್ದಾರೆಂದರೆ ನಿರ್ಲಕ್ಷಿಸುತ್ತಾರೆಯೇ. ಸಹಾಯ ಹಸ್ತ ಖಂಡಿತ ಚಾಚುತ್ತಾರೆ.

  ತೆಲುಗು, ತಮಿಳಿನ ಜನಪ್ರಿಯ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್ ಕೊರೊನಾಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರಿಗೆ ಮಾತ್ರವೇ ಅಲ್ಲದೆ ಅವರ ಕುಟುಂಬ ಸದಸ್ಯರಿಗೂ ಕೊರೊನಾ ಸೋಂಕು ತಗುಲಿದೆ. ಕುಟುಂಬದವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.


  ಶಿವಶಂಕರ್ ಸ್ಥಿತಿಯ ಬಗ್ಗೆ ವಂಶಿ ಕಾಕ ಎಂಬುವರು ಟ್ವೀಟ್ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದರು. ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ''ನಾನು ಈಗಾಗಲೇ ಶಿವ ಶಂಕರ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವನ್ನು ನೀಡುತ್ತಿದ್ದೇನೆ. ಅವರ ಜೀವ ಉಳಿಸಲು ನನ್ನ ಕೈಲಾದ ಸಹಾಯ ಮಾಡುತ್ತೇನೆ'' ಎಂದಿದ್ದಾರೆ.

  ಶಿವಶಂಕರ್ ಶ್ವಾಸಕೋಶಕ್ಕೆ ಕೋವಿಡ್‌ನಿಂದ ಹಾನಿಯಾಗಿದ್ದು ವೈದ್ಯರು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಶಿವಶಂಕರ್ ಅವರ ದೊಡ್ಡ ಮಗನಿಗೂ ಕೋವಿಡ್ ಆಗಿದ್ದು, ಅವರ ಆರೋಗ್ಯ ಪರಿಸ್ಥಿತಿಯೂ ಗಂಭೀರವಾಗಿದೆ. ಮನೆಯ ಇನ್ನಿಬ್ಬರು ಸದಸ್ಯರಿಗೂ ಕೋವಿಡ್ ಆಗಿದ್ದು ಅವರು ಕ್ವಾರಂಟೈನ್ ಆಗಿದ್ದಾರೆ. ಎಲ್ಲರನ್ನೂ ಕಿರಿಯ ಮಗ ಅಜಯ್ ಕೃಷ್ಣ ಮಾತ್ರವೇ ನೋಡಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಆರ್ಥಿಕ ಸಹಾಯಕ್ಕೆ ಕುಟುಂಬ ಮನವಿ ಮಾಡಿದೆ.

  ಶಿವಶಂಕರ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಜನಪ್ರಿಯ ನೃತ್ಯ ನಿರ್ದೇಶಕ. ಈವರೆಗೆ ಸುಮಾರು 800 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕೆಲವು ಅತ್ಯುತ್ತಮ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

  'ಮಗಧೀರ' ಸಿನಿಮಾದ 'ಧೀರ ಧೀರ ಧೀರ ಮನಸಾಗಲೇದುರಾ...' ಹಾಡಿಗೆ ಮಾಡಿದ್ದ ನೃತ್ಯ ನಿರ್ದೇಶನಕ್ಕೆ ಶಿವಶಂಕರ್‌ಗೆ ರಾಷ್ಟ್ರಪ್ರಶಸ್ತಿ ದಕ್ಕಿದೆ. ಕನ್ನಡತಿ ಛಾಯಾಸಿಂಗ್, ಧನುಶ್ ಒಟ್ಟಿಗೆ ಕುಣಿದಿದ್ದ 'ಮನ್ಮತ ರಾಜ' ಹಾಡಿಗೆ ಇವರೇ ನೃತ್ಯ ನಿರ್ದೇಶನ ಮಾಡಿದ್ದರು. ಚಿರಂಜೀವಿ ಡ್ಯಾನ್ಸ್ ಸ್ಟಾರ್ ಆಗಿ ಗುರುತು ಪಡೆದುಕೊಂಡ ಹಲವು ಸಿನಿಮಾಗಳಿಗೆ ಶಿವಶಂಕರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

  ಈಗಿನ ಜನಪ್ರಿಯ ನೃತ್ಯ ನಿರ್ದೇಶಕ ಮತ್ತು ನಟ ರಾಘವ್ ಲಾರೆನ್ಸ್‌ಗೆ ಗುರು ಸಹ ಆಗಿರುವ ಶಿವಶಂಕರ್ ತಮಿಳು ಹಾಗೂ ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದ್ದಾರೆ. ಮಹಿಳೆಯರಂತೆ ಮಾತನಾಡುವ, ನಡೆಯುವ ಅವರ ಹಾವ ಭಾವ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತಿತ್ತು.

  English summary
  Actor Sonu Sood helping dance master Shiva Shankar and his family. Shiva Shankar affected from COVID 19 he is in hospital now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X