ಜನಾರ್ಧನ ರೆಡ್ಡಿ ಮಗ ಕಿರೀಟಿ ಜೊತೆ ನಟಿಸೋಕೆ ಶ್ರೀಲೀಲಾಗೆ ಭಾರೀ ಸಂಭಾವನೆ
ಕಿರೀಟಿ ಹಾಗೂ ಶ್ರೀಲೀಲಾ ನಟನೆಯ 'ಜ್ಯೂನಿಯರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರ 'ಎಕ್ಕ' ಸಿನಿಮಾ ಜೊತೆಗೆ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ 'ಜ್ಯೂನಿಯರ್' ಆಗಮನವಾಗುತ್ತಿದೆ. ಇತ್ತೀಚೆಗೆ ಬಂದ ಟ್ರೈಲರ್ ಸೂಪರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತೆ ಮಾಡಿದೆ. ಅದಕ್ಕೂ ಮುನ್ನ ಬಂದಿದ್ದ 'ವೈರಲ್ ವಯ್ಯಾರಿ' ಸಾಂಗ್ ಕೂಡ ಸದ್ದು ಮಾಡ್ತಿದೆ.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಆಕ್ಟಿಂಗ್, ಡ್ಯಾನ್ಸ್, ಫೈಟ್ಸ್ ಎಲ್ಲದರಲ್ಲೂ ತರಬೇತಿ ಪಡೆದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಮೊದಲ ಚಿತ್ರದಲ್ಲೇ ಶ್ರೀಲೀಲಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಇತ್ತ ಕನ್ನಡ ಹಾಗೂ ಅತ್ತ ತೆಲುಗು ಚಿತ್ರರಂಗದಲ್ಲಿ 'ಕಿಸ್' ಬೆಡಗಿ ಕ್ರೇಜ್ ಜೋರಾಗಿದೆ.

ತೆಲುಗಿನ ಸ್ಟಾರ್ ನಟರ ಜೊತೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದು ಅಲ್ಲೂ ಕಮಾಲ್ ಮಾಡುವ ಸುಳಿವು ಸಿಕ್ತಿದೆ. ಇನ್ನು 'ಜ್ಯೂನಿಯರ್' ಚಿತ್ರಕ್ಕಾಗಿ ಶ್ರೀಲೀಲಾ 2.50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗುತ್ತಿದೆ. ಕಿರೀಟಿ ಅವರನ್ನು ಬಹಳ ಗ್ರ್ಯಾಂಡ್ ಆಗಿ ಚಿತ್ರರಂಗಕ್ಕೆ ಪರಿಚಯಿಸಬೇಲು ಎನ್ನುವ ಕಾರಣಕ್ಕೆ ಬಹಳ ದೊಡ್ಡದಾಗಿ ಸಿನಿಮಾ ನಿರ್ಮಿಸಲಾಗ್ತಿದೆ. ಯಾವುದೇ ವಿಚಾರದಲ್ಲಿ ರಾಜಿಯಾಗದೇ ಹಣ ಸುರಿಯುತ್ತಿರುವುದು ಗೊತ್ತಾಗುತ್ತಿದೆ.
ವಾರಾಹಿ ಚಲನಚಿತ್ರಂ ಬ್ಯಾನರ್ ಅಡಿಯಲ್ಲಿ ರಜನಿ ಕೊರಪಾಟಿ ಹಾಗೂ ಸಾಯಿ ಕೊರಪಾಟಿ ಬಂಡವಾಳ ಹೂಡಿದ್ದಾರೆ. ರಾಧಾಕೃಷ್ಣ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಚಿತ್ರಕ್ಕಿದೆ. ಇದೊಂದು ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಫ್ಯಾಮಿಲಿ ಸೆಂಟಿಮೆಂಟ್ ಅಂಶಗಳು ಕೂಡ ಚಿತ್ರದಲ್ಲಿದೆ.

ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ, ರಾವ್ ರಮೇಶ್, ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಟ್ರೈಲರ್ ನೋಡಿದರೆ ತೆಲುಗು ಕಮರ್ಷಿಯಲ್ ಸಿನಿಮಾ ಫ್ಲೇವರ್ ಎದ್ದು ಕಾಣುತ್ತಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರಕ್ಕೆ ಕೆ. ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿದೆ. ಸಾಂಗ್ಸ್ ಹಾಗೂ ಟ್ರೈಲರ್‌ನಲ್ಲಿ ಕಿರೀಟಿ ಗಮನ ಸೆಳೆದಿದ್ದಾರೆ.
'ವೈರಲ್ ವಯ್ಯಾರಿ' ಸಾಂಗ್‌ನಲ್ಲಿ ಶ್ರೀಲೀಲಾ ಬಿಂದಾಸ್ ಡ್ಯಾನ್ಸ್ ಮಾಡಿ ಹುಬ್ಬೇರಿಸಿದ್ದಾರೆ. ಬೆಂಗಳೂರು ಬೆಡಗಿ ಒಳ್ಳೆ ಡ್ಯಾನ್ಸರ್. ಈ ಹಿಂದಿನ ಸಿನಿಮಾಗಳಲ್ಲಿ ಕೂಡ ಅದು ರುಜುವಾತಾಗಿದೆ. ಈಕೆಯ ಜೊತೆ ಡ್ಯಾನ್ಸ್ ಮಾಡೋದು ಬಹಳ ಕಷ್ಟ ಎಂದು ಸ್ವತಃ ತೆಲುಗು ನಟ ಮಹೇಶ್ ಬಾಬು ಹೇಳಿದ್ದು ಗೊತ್ತೇಯಿದೆ. ಈಗಾಗಲೇ 'ಆಶಿಕಿ'- 3 ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮತ್ತಷ್ಟು ಹಿಂದಿ ಸಿನಿಮಾ ಕಥೆಗಳನ್ನು ಕೇಳುತ್ತಿದ್ದಾರೆ.
ಸದ್ಯ ತೆಲುಗು ಹಾಗೂ ಹಿಂದಿ ಸಿನಿಮಾಗಳ ಕಡೆ ಶ್ರೀಲೀಲಾ ಫೋಕಸ್ ಮಾಡುತ್ತಿದ್ದಾರೆ. ಹಾಗಾಗಿ 'ಜ್ಯೂನಿಯರ್' ಬಿಟ್ಟರೆ ಕನ್ನಡದಲ್ಲಿ ಮತ್ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಒಪ್ಪಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಟಾಲಿವುಡ್, ಬಾಲಿವುಡ್ ಜೊತೆಗೆ ಇತ್ತ ಕಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡ್ತಿದ್ದಾರೆ.
ಸಿನಿಮಾ ತಾರೆಯರ ಮಕ್ಕಳು, ರಾಜಕೀಯ ನಾಯಕರ ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸದೇನು ಅಲ್ಲ. ಇದೀಗ ಕಿರೀಟಿ ಚಿತ್ರರಂಗದಲ್ಲಿ ಕಮಾಲ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿಯೊಂದಿಗೆ ಬಂದಂತೆ ಕಾಣುತ್ತಿದೆ. ಇದೇ ಶುಕ್ರವಾರ 'ಜ್ಯೂನಿಯರ್' ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಏನು ಎನ್ನುವುದು ಗೊತ್ತಾಗಲಿದೆ.


Click it and Unblock the Notifications











