ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು; ನಟಿ ಶ್ರೀಲೀಲಾ ಮುಕ್ತ ಮಾತು
ಋತುಚಕ್ರ ಅಥವಾ ಪೀರಿಯಡ್ಸ್ ಪ್ರತಿ ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಇದು ಮಹಿಳೆಯ ಆರೋಗ್ಯದ ಸಂಕೇತ ಕೂಡ ಹೌದು. ಋತುಚಕ್ರ ಬಗ್ಗೆ ಮುಕ್ತವಾಗಿ ಮಾತನಾಡುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಬಹುಭಾಷಾ ನಟಿ ಶ್ರೀಲೀಲಾ ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸಾಯಿ ಪಲ್ಲವಿ ಸೇರಿದಂತೆ ಕೆಲ ನಟಿಯರು ತಮ್ಮ ಋತುಚಕ್ರದ ಬಗ್ಗೆ ಸಂದರ್ಶನಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಶ್ರೀಲೀಲಾ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ವೇಳೆ ತಮ್ಮ ಸ್ಫೂರ್ತಿದಾಯಕ ಮಾತುಗಳ ಮೂಲಕ ಶ್ರೀಲೀಲಾ ಗಮನ ಸೆಳೆದರು. ಚಿತ್ರೀಕರಣದ ವೇಳೆ ಪೀರಿಯಡ್ಸ್ ಕಾರಣಕ್ಕೆ ಸಮಸ್ಯೆ ಎದುರಿಸಿದ ಸಂದರ್ಭ ಇದ್ಯಾ ಎನ್ನುವ ಪ್ರಶ್ನೆಗೆ ಶ್ರೀಲೀಲಾ ಉತ್ತರಿಸಿದ್ದಾರೆ.

ಬೆಂಗಳೂರು ಬೆಡಗಿ ಮಾತನಾಡಿ "ನಾನು ಈವರೆಗೆ ಸಾಕಷ್ಟು ಡ್ಯಾನ್ಸ್ ನಂಬರ್‌ಗಳಿಗೆ ಹೆಜ್ಜೆ ಹಾಕಿದ್ದೀನಿ. ಅದರಲ್ಲಿ ಹಿಟ್ ಸಾಂಗ್ಸ್ ಎಲ್ಲವೂ ನಾನು ಪೀರಿಯಡ್ಸ್ ದಿನಗಳಲ್ಲಿ ಹೆಜ್ಜೆ ಹಾಕಿದ್ದೇ ಆಗಿದೆ. ಅಂತಹ ಸಾಂಗ್ಸ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಪೀರಿಯಡ್ಸ್ ಅನ್ನೋದು ಒಬ್ಬ ಮಹಿಳೆಗೆ ನೆಪ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ. ನಾವು ನಮ್ಮ ಶಾರೀರಿಕ, ಮಾನಸಿಕ ಸಮಸ್ಯೆಗಳನ್ನು ಮೀರಿ ಮುಂದೆ ಸಾಗಬೇಕು. ಪುರುಷನಿಗೆ ಸಮನಾಗಿ ಮಹಿಳೆಯರಿಗೆ ಅವಕಾಶ, ಸಮಾನ ಅಧಿಕಾರ, ಸಮಾನ ಹಕ್ಕು ಕೇಳುವಾಗ, ಪೀರಿಯಡ್ಸ್ ಸಮಸ್ಯೆ ನೆಪವೊಡ್ಡಿ ಹಿಂದೆ ಉಳಿಯುವುದು ಸರೀನಾ? ಮಹಿಳೆಯರಾಗಿ ನಾವು ನಮ್ಮ ಶಾರೀರಿಕ, ಮಾನಸಿಕ ಸಮಸ್ಯೆ ಮೀರಿ ಸಾಗಬೇಕು. ನಮ್ಮನ್ನು ನಾವು ಹುರಿದುಂಬಿಸಿಕೊಳ್ಳಬೇಕು" ಎಂದಿದ್ದಾರೆ.
ಹೇಳಿಕೇಳಿ ಶ್ರೀಲೀಲಾ ವೈದ್ಯೆ. ಇತ್ತೀಚೆಗೆ ಎಂಬಿಬಿಎಸ್ ಮುಗಿಸಿದ್ದಾರೆ. ಆಕೆ ತಾಯಿ ಡಾ. ಸ್ವರ್ಣಲತಾ ಸ್ತ್ರೀರೋಗ ತಜ್ಞೆ. ಹಾಗಾಗಿ ಶ್ರೀಲೀಲಾಗೆ ಇಂತಹ ವಿಷಯಗಳ ಬಗ್ಗೆ ಸ್ಪಷ್ಟ ಅರಿವು ಇದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡದ 'ಕಿಸ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಮುಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರ ಜೊತೆಗೆ ಮಿಂಚಿದರೂ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಇತ್ತೀಚೆಗೆ ತೆರೆಗೆ ಬಂದ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕೂಡ ಹೀನಾಯಾವಾಗಿ ಸೋಲುಂಡಿತ್ತು. ಪವನ್ ಕಲ್ಯಾಣ್ ಜೋಡಿಯಾಗಿ ನಟಿಸಿದ್ದು ಪ್ರಯೋಜನವಾಗಲಿಲ್ಲ.
ಇತ್ತೀಚೆಗೆ ಶ್ರೀಲೀಲಾ ಕನ್ನಡ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಆಕೆಯ ಫೋಕಸ್ ಏನಿದ್ದರೂ ಬಾಲಿವುಡ್, ಟಾಲಿವುಡ್, ಕಾಲಿವುಡ್ ಕಡೆ ಎನ್ನುವಂತಾಗಿದೆ. 'ಪೆಳ್ಳಿಸಂದಡಿ' ಸಿನಿಮಾ ಮೂಲಕ ಕಿಸ್ ಬೆಡಗಿ ಟಾಲಿವುಡ್ ಪ್ರವೇಶಿಸಿದ್ದರು. ಅದಕ್ಕೂ ಮುನ್ನ ತೆಲುಗು ಚಿತ್ರವೊಂದರಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 'ಧಮಾಕ' ಚಿತ್ರದಲ್ಲಿ ಶ್ರೀಲೀಲಾ ಜೋಡಿಯಾಗಿ ಕಮಾಲ್ ಮಾಡಿದ್ದರು. ಬಿಂದಾಸ್ ಡ್ಯಾನ್ಸ್ ಮಾಡಿ ರಂಜಿಸಿದ್ದರು. ಬಳಿಕ ಸಾಲು ಸಾಲು ಅವಕಾಶಗಳು ಸಿಕ್ಕಿದ್ದವು.
ಮಹೇಶ್ ಬಾಬು, ಬಾಲಕೃಷ್ಣ ಹೀಗೆ ತೆಲುಗಿನ ಟಾಪ್ ಹೀರೊಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. 'ಪುಷ್ಪ-2' ಚಿತ್ರದ 'ಕಿಸ್ಸಿಕ್' ಸಾಂಗ್‌ಗೆ ಶ್ರೀಲೀಲಾ ಬಿಂದಾಸ್ ಆಗಿ ಹೆಜ್ಜೆ ಹಾಕಿ ಮೋಡಿ ಮಾಡಿದ್ದರು. ಆ ಮೂಲಕ ಬಾಲಿವುಡ್ ಫಿಲ್ಮ್ ಮೇಕರ್ಸ್ ಕಣ್ಣಿಗೆ ಬಿದ್ದರು.
ಅನುರಾಗ್ ಬಸು ನಿರ್ದೇಶನದ ಚಿತ್ರವೊಂದರಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮತ್ತಷ್ಟು ಹಿಂದಿ ಸಿನಿಮಾ ಸ್ಕ್ರಿಪ್ಟ್ ಕೇಳುತ್ತಿದ್ದಾರೆ. 'ಪರಾಶಕ್ತಿ' ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಆ ಸಿನಿಮಾ ಕೂಡ ಗೆಲ್ಲಲಿಲ್ಲ. ಆದರೂ ಧನುಷ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.


Click it and Unblock the Notifications











