ವಿಜಯ್ ದೇವರಕೊಂಡ ಚಿತ್ರಕ್ಕೆ ಸಿಕ್ತಿಲ್ಲ ನಾಯಕಿ ; ರಶ್ಮಿಕಾ ಸ್ನೇಹಿತನ ಚಿತ್ರವನ್ನ ರಿಜೆಕ್ಟ್ ಮಾಡಿದ ಶ್ರೀಲೀಲಾ..!
ಪೂರ್ವಜನ್ಮದಲ್ಲಿ ಪುಣ್ಯ ಮಾಡಿದ್ದರಷ್ಟೇ ವಿಜಯ್ ದೇವರಕೊಂಡಗೆ ನಾಯಕಿಯಾಗುವ ಸುವರ್ಣ ಅವಕಾಶ ಸಿಗುತ್ತೆ ಅನ್ನುವ ಮಾತು, ಆರು ವರ್ಷದ ಹಿಂದೆ ಚಾಲ್ತಿಯಲ್ಲಿತ್ತು. ವಿಜಯ್ ದೇವರಕೊಂಡ ಸ್ಟಾರ್ ಡಂ ಆಗ ಹಾಗೇ ಇತ್ತು ಕೂಡ. ತಮ್ಮ ಚಿತ್ರಕ್ಕೆ ನಾಯಕಿ ಯಾರಾಗಬೇಕೆಂದು, ಖುದ್ದು ವಿಜಯ್ ದೇವರಕೊಂಡ ನಿರ್ಧಾರ ಮಾಡ್ತಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ಒಂದ್ಕಾಲದಲ್ಲಿ.. ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿದ್ದವರೆಲ್ಲ ಈಗ ದೇವರಕೊಂಡ ಮನೆ ಇರುವ ದಿಕ್ಕಿನ ಕಡೆ ಕಾಲು ಕೂಡ ಇಡ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಅನ್ನುವಂತೆ.. ವಿಜಯ್ ದೇವರಕೊಂಡ ಚಿತ್ರದಿಂದ ಶ್ರೀಲೀಲಾ ಹೊರ ನಡೆದಿದ್ದಾರೆ ಅನ್ನುವ ಸುದ್ದಿ ಪಕ್ಕದ ಆಂಧ್ರದೆಲ್ಲೆಡೆ ಕೇಳಿ ಬರುತ್ತಿದೆ.
ಹೌದು.. ನಿಮಗೆ ಗೊತ್ತಿರಲಿ.. ದಿ ಫ್ಯಾಮಿಲಿ ಸ್ಟಾರ್ ಚಿತ್ರದ ಮೂಲಕ ವಿಜಯ್ ದೇವರಕೊಂಡ ಸೋಲಿನ ಸರಣಿ ಮುಂದುವರೆದಿದೆ. ಕುಂಟುತ್ತ, ತೆವಳುತ್ತಾ ಚಿತ್ರ 15 ಕೋಟಿಯನ್ನ ಗಳಿಸಿದೆ. ಆದರೂ ವಿಜಯ್ ದೇವರಕೊಂಡ ಇಂದಲ್ಲ.. ನಾಳೆ.. ಮೈ ಕೊಡವಿ ಎದ್ದು ನಿಲ್ಲುತ್ತಾರೆ ಅನ್ನುವ ಭರವಸೆ ಅಲ್ಲಿನ ಕೆಲ ನಿರ್ದೇಶಕ.. ನಿರ್ಮಾಪಕರಲ್ಲಿ ಇದೆ. ಈ ಕಾರಣಕ್ಕೆ.. ಸೋತು ಬಸವಳಿದ ವಿಜಯ್ ದೇವರಕೊಂಡ ಕಾಲ್ ಶೀಟ್‌ನ ಪಡೆದು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಆ ಪೈಕಿ ಗೌತಮ್ ತಿನ್ನನೂರಿ ಕೂಡ ಒಬ್ಬರು. ವಿಶೇಷ ಅಂದರೆ ಈ ಸಿನಿಮಾದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೇನು ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಲಿದೆ. ಆದರೆ.. ನಾಯಕಿ ಮಾತ್ರ ಸಿಕ್ತಿಲ್ಲ. ಶ್ರೀಲೀಲಾ ಒಪ್ತಿಲ್ಲ.

ಹೌದು, ಅಸಲಿಗೆ ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರಕ್ಕೆ ಶ್ರೀಲೀಲಾ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಈಗ ದಿ ಫ್ಯಾಮಿಲಿ ಸ್ಟಾರ್ ಚಿತ್ರದ ನಂತರ ಶ್ರೀಲೀಲಾ ವರಸೆ ಬದಲಾಗಿದೆ ಅನ್ನುವ ಮಾತು ಹೈದ್ರಾಬಾದ್ ನಲ್ಲಿ ಕೇಳಿ ಬರುತ್ತಿದೆ. ಡೇಟ್ಸ್ ಹೊಂದಾಣಿಕೆಯಾಗದ ಕಾರಣ, ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ ಅನ್ನುವ ಸುದ್ದಿ ಇದೆ.
ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರೀಲೀಲಾಗೆ ಈಗ ಜ್ಞಾನೋದಯವಾಗಿದೆ. ಸಿಕ್ಕ..ಸಿಕ್ಕ.. ಸಿನಿಮಾ ಮಾಡುತ್ತಾ ಹೋದರೆ ರಶ್ಮಿಕಾ ಮಂದಣ್ಣ ತಲುಪಿದ ಜಾಗಕ್ಕೆ ತಲುಪಲು ಸಾಧ್ಯವಾಗಲ್ಲ ಅನ್ನುವುದು ಮನವರಿಕೆಯಾಗಿದೆ. ಹೀಗಾಗಿಯೇ ಅಳೆದು ತೂಗಿ ಚಿತ್ರವನ್ನ ಈಗ ಶ್ರೀಲೀಲಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ಟಾಲಿವುಡ್ ನಲ್ಲಿ ವ್ಯಕ್ತವಾಗುತ್ತಿದೆ. ವಿಜಯ್ ದೇವರಕೊಂಡ ಚಿತ್ರವನ್ನ ರಿಜೆಕ್ಟ್ ಮಾಡಲು ಇದೇ ಪ್ರಮುಖ ಕಾರಣವೆಂಬ ಮಾತು ರಾಮೋಜಿ ರಾವ್ ಫಿಲ್ಮ್ ಸಿಟಿಯ ಸುತ್ತ ಮುತ್ತ ಕೇಳಿ ಬರುತ್ತಿದೆ.

ಹೀಗಾಗಿಯೇ ಶ್ರೀಲೀಲಾ ಬದಲು ಇದೀಗ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಮಮಿತಾ ಬೈಜು ಬಂದಿದ್ದಾರೆ ಅನ್ನುವ ಮಾತು ಅಂತೆ-ಕಂತೆಯ ಸಂತೆಯಲ್ಲಿ ಹರಡಿದೆ. ಅಂದ್ಹಾಗೇ ಮಮಿತಾ ಬೈಜು.. ಬೇರೆ ಯಾರು ಅಲ್ಲ. ಬದಲಿಗೆ ಮಲಯಾಳಂನ ಬ್ಲಾಕ್ ಬಸ್ಟರ್ ಸಿನಿಮಾ ಪ್ರೇಮಲು ಚಿತ್ರದ ನಾಯಕಿ. ಪ್ರೇಮಲು ನಂತರ ಮಮಿತಾಗೆ ಚಿನ್ನದ ಬೆಲೆ ಬಂದಿದೆ. ಮೊನ್ನೆವರೆಗೆ ರಶ್ಮಿಕಾ.. ಶ್ರೀಲೀಲಾ.. ನಾಮ ಸ್ಮರಣೆಯನ್ನ ಮಾಡ್ತಿದ್ದ ಪಡ್ಡೆ ಹುಡುಗರು ಈಗ ಮಮಿತಾ ಬೈಜು ಕನಸನ್ನ ಕಾಣುತ್ತಿದ್ದಾರೆ. ಈ ಕಾರಣಕ್ಕೆ.. ಸದ್ಯಕ್ಕೆ ಚಾಲ್ತಿಯಲ್ಲಿರುವ ನಟಿಯ ಮೂಲಕ ವಿಜಯ್ ದೇವರಕೊಂಡ ವೃತ್ತಿ ಬದುಕಿಗೆ ಮರುಚಾಲನೆ ನೀಡುವ ಕಾರ್ಯಕ್ರಮವನ್ನ ನಿರ್ದೇಶಕ ಗೌತಮ್ ತಿನ್ನನೂರಿ ಹಮ್ಮಿಕೊಳ್ಳುತ್ತಿದ್ದಾರೆ ಅನ್ನುವ ಅನುಮಾನ ಅನೇಕರನ್ನ ಈಗ ಕಾಡುತ್ತಿದೆ.

ಒಟ್ನಲ್ಲಿ ಆರೇಳು ವರ್ಷದ ಹಿಂದೆ ಖ್ಯಾತಿಯ ತುತ್ತ ತುದಿಯನ್ನ ತಲುಪಿದ್ದ ವಿಜಯ್ ದೇವರಕೊಂಡ, ಇವತ್ತು ನೆಲಕ್ಕೆ ಕುಸಿದಿದ್ದಾರೆ. ನಾಯಕಿಯಾಗಲು ನಾ ಮುಂದು.. ತಾ ಮುಂದು.. ಎಂದು ಪೈಪೋಟಿ ನಡೆಯುತ್ತಿದ್ದ ಜಾಗದಲ್ಲಿ ಈಗ ನಾಯಕಿಯರ ಬರವನ್ನ ವಿಜಯ್ ದೇವರಕೊಂಡ ಎದುರಿಸುತ್ತಿದ್ದಾರೆ. ನಿಜಕ್ಕೂ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಮಮಿತಾ ಬೈಜು ನಾಯಕಿನಾ..? ಉತ್ತರ ಸದ್ಯದಲ್ಲಿ ಗೊತ್ತಾಗಲಿದೆ. ಮುಹೂರ್ತದ ಸಮಯದಲ್ಲಿಯೇ ಶ್ರೀಲೀಲಾ ಚಿತ್ರದಿಂದ ಹೊರ ನಡೆದಿದ್ದೇಕೆ..? ಎಂಬ ಪ್ರಶ್ನೆಗೂ ಸ್ಪಷ್ಟವಾದ ಉತ್ತರ ಸಿಗಲಿದೆ.


Click it and Unblock the Notifications











