ಕಿಸ್ ಬೆಡಗಿ ಶ್ರೀಲೀಲಾ ಡಿಮ್ಯಾಂಡ್‌ಗೆ ಬೆಚ್ಚಿಬಿದ್ದ ನಿರ್ಮಾಪಕರು..!
'ಈ ಬಣ್ಣದ ಲೋಕನೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿ ಸತ್ಯ ಆದರೆ, ಮಿಕ್ಕ ತೊಂಬತ್ತೊಂಬತ್ತು ಸುದ್ದಿ ಸುಳ್ಳಾಗುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶ್ರೀಲೀಲಾ ಕುರಿತು ಮತ್ತೊಂದು ವಿಚಾರ ಸದ್ಯ ಸದ್ದು ಮಾಡುತ್ತಿದೆ.ಹೌದು, ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿದವರಲ್ಲಿ ಶ್ರೀಲೀಲಾ ಕೂಡಾ ಒಬ್ಬರು ಮತ್ತು ಪ್ರಮುಖರು.
ರಶ್ಮಿಕಾ ಮಂದಣ್ಣ ನಂತರ ಒಂದಾದ ಮೇಲೊಂದರಂತೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆ ಕೂಡ ಇವರದ್ದೇ. ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ.. ಅಬ್ಬಬ್ಬಾ.. ಒಂದಾ, ಎರಡಾ. ಕೇವಲ ಒಂದು-ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದವರು ಇವರು.

ಇಂಥಾ ಶ್ರೀಲೀಲಾ ಈಗ ಬಾಲಿವುಡ್‌ಗೆ ಕೂಡ ಹೋಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಇಷ್ಟೇ ಅಲ್ಲ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರಕ್ಕೂ ಕೂಡ ಶ್ರೀಲೀಲಾ ನಾಯಕಿ. ಇದರ ಜೊತೆ ಇನ್ನೂ ಕೆಲವು ಹಿಂದಿ ಚಿತ್ರಗಳಲ್ಲಿ ಶ್ರೀಲೀಲಾ ಮುಂಬರುವ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದರ ನಡುವೆ ಇದೀಗ ಶ್ರೀಲೀಲಾ ತಮ್ಮ ಸಂಭಾವನೆ ಗಗನಕ್ಕೇರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಪಕ್ಕದ ಹೈದರಾಬಾದ್‌ನಲ್ಲಿ ಸದ್ದು ಮಾಡುತ್ತಿದೆ. ಹೌದು, ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ವಲಸೆ ಹೋದ ನಂತರ ಆರಂಭದಲ್ಲಿ ಶ್ರೀಲೀಲಾ ಚಿತ್ರವೊಂದಕ್ಕೆ ಮೂರರಿಂದ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಿದ್ದರು.
ಆದರೆ ಈಗ ಶ್ರೀಲೀಲಾ ವರಸೆ ಬದಲಾಗಿದೆ. ನಿರ್ಮಾಪಕರ ಬಳಿ ಶ್ರೀಲೀಲಾ ಹೆಚ್ಚಿನ ಡಿಮ್ಯಾಂಡ್ ಮಾಡುತ್ತಿದ್ದು ಚಿತ್ರವೊಂದಕ್ಕೆ 7 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎಂದು ಸಿಯಾಸತ್.ಕಾಮ್ ಸೇರಿ ಹಲವು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ.
ಸದ್ಯ ಶ್ರೀಲೀಲಾ ಅವರ ಈ ಬೇಡಿಕೆ ಟಾಲಿವುಡ್‌ನ ಹಲವು ನಿರ್ಮಾಪಕ ನಿದ್ದೆ ಕೆಡಿಸಿದೆ. ಇದಕ್ಕೆ ಪುರಾವೆ ಎಂಬಂತೆ ಅಖಿಲ್ ಅಕ್ಕಿನೇನಿ ಅಭಿನಯದ ಲೆನಿನ್ ಚಿತ್ರದಿಂದ ಶ್ರೀಲೀಲಾ ಹೊರ ಬರಲು ಕೂಡ ಈ ಸಂಭಾವನೆಯ ವಿಚಾರವೇ ಪ್ರಮುಖವಾದ ಕಾರಣವೆನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ. ಬಾಲಿವುಡ್‌ನಲ್ಲಿ ಸದ್ಯ ಶ್ರೀಲೀಲಾ ಕೇಳಿದಷ್ಟು ಸಂಭಾವನೆಯನ್ನು ಅಲ್ಲಿನ ನಿರ್ಮಾಪಕರು ಕೊಡುತ್ತಿದ್ದಾರೆ ಎಂದು ಕೂಡ ವರದಿಯಾಗಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡೆಕ್ಕನ್ ಕ್ರೋನಿಕಲ್ ಗೆ ತೆಲುಗು ಚಿತ್ರರಂಗದ ನಿರ್ಮಾಪಕರೊಬ್ಬರು ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ. ಶ್ರೀಲೀಲಾ ಸಂಭಾವನೆಯ ಕುರಿತು ಕೇಳಿ ಬರುತ್ತಿರುವ ಸುದ್ದಿ ಶುದ್ದ ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ಮಾಪಕರು ತೆಲುಗು ಚಿತ್ರರಂಗ ತುಂಬಾನೇ ಚಿಕ್ಕದು ಆದರೂ ಕೂಡ ಇಲ್ಲಿ ನಾಯಕಿಯರಿಗೆ ಕೊಡಬೇಕಾದ ಗೌರವವನ್ನು ನಾವು ಕೊಡುತ್ತೇವೆ ಎಂದು ಹೇಳಿದ್ದಾರೆ. ತಮನ್ನಾ.. ಶ್ರೀಲೀಲಾ.. ಶ್ರುತಿ ಹಾಸನ್.. ಮೃಣಾಲ್ ಠಾಕೂರ್.. ಇವರೆಲ್ಲರ ಸಂಭಾವನೆ ಮೂರರಿಂದ ಐದು ಕೋಟಿಯ ಒಳಗಡೆ ಇದೆ ಎಂದು ಹೇಳಿದ್ದಾರೆ.
ಇವರೆಲ್ಲರನ್ನು ಹೋಲಿಸಿಕೊಂಡರೆ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ತುಸು ಹೆಚ್ಚಿದೆ, ಯಾಕೆಂದರೆ ರಶ್ಮಿಕಾ ಮಂದಣ್ಣ ಅವರ ಸಕ್ಸಸ್ ರೇಟ್ ಹೆಚ್ಚಿದೆ ಎಂದು ಹೇಳಿರುವ ಈ ನಿರ್ಮಾಪಕರು ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿಯ ಮೇಲಿದೆ ಅವರನ್ನು ಹೊರತು ಪಡಿಸಿದರೆ ಇಂದಿನ ಬೇರೆ ಯಾವ ನಾಯಕಿಯರ ಸಂಭಾವನೆ 5 ಕೋಟಿಯ ಮೇಲಿಲ್ಲ ಎಂದು ಹೇಳಿದ್ದಾರೆ.
ಸದ್ಯ ಶ್ರೀಲೀಲಾ ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಮತ್ತು ಶಿವಕಾರ್ತಿಕೆಯನ್ ಅಭಿನಯದ ಪರಾಶಕ್ತಿ ಚಿತ್ರದಲ್ಲಿ ಅಭಿನಯಿಸುತ್ತಿದ್ಧಾರೆ. ಇವೆರಡು ಚಿತ್ರಗಳನ್ನು ಹೊರತು ಪಡಿಸಿದರೆ ಮಿಕ್ಕಂತೆ ಶ್ರೀಲೀಲಾ ಗಮನ ಸದ್ಯ ಬಾಲಿವುಡ್‌ನತ್ತ ಇದೆ.


Click it and Unblock the Notifications











