ಒಂದೇ ಫ್ರೇಮ್‌ನಲ್ಲಿ ಚಿರು ಪುತ್ರ, ಕಮಲ್ ಪುತ್ರಿ ಹಾಗೂ ಶ್ರೀದೇವಿ ಪುತ್ರಿ; ಗೆದ್ದವರು ಯಾರು?
ಮೆಗಾಸ್ಟಾರ್ ಚಿರಂಜೀವಿ, ತಮಿಳು ನಟ ಕಮಲ್ ಹಾಸನ್ ಹಾಗೂ ದಿವಂಗತ ನಟಿ ಶ್ರೀದೇವಿ ಭಾರತೀಯ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಈಗ ಅವರ ಮಕ್ಕಳ ಜಮಾನ ನಡೀತಿದೆ. ಆದರೆ ಇವತ್ತಿಗೂ ಕಮಲ್ ಹಾಗೂ ಚಿರು ಬಹುಬೇಡಿಕೆಯ ನಟರಾಗಿ ಗುರ್ತಿಸಿಕೊಂಡಿದ್ದಾರೆ.
ಚಿರಂಜೀವಿ ಪುತ್ರ ರಾಮ್‌ಚರಣ್, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಹಾಗೂ ಕಮಲ್ ಪುತ್ರಿ ಶ್ರುತಿ ಹಾಸನ್ ಒಂದೇ ಹಾಡಿನಲ್ಲಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಪೆದ್ದಿ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಹೆಜ್ಜೆ ಹಾಕಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಮುಂದಿನ ವಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರಲಿದೆ.

ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. 'ದೇವರ' ಬಳಿಕ ತೆಲುಗಿನಲ್ಲಿ ಇದು ಆಕೆಯ ಎರಡನೇ ಸಿನಿಮಾ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಈಗಾಗಲೇ 3 ಹಾಡುಗಳು ಹೊರಬಂದು ಹಿಟ್ ಲಿಸ್ಟ್ ಸೇರಿದೆ. 'ಹೆಲ್ಲಾಲ್ಲಲ್ಲೊ' ಎಂದು ಶುರುವಾಗುವ ಬಿಂದಾಸ್ ಸಾಂಗ್ ಅಭಿಮಾನಿಗಳ ಮನಗೆದ್ದಿದೆ. ಭಾರೀ ಸೆಟ್ ಹಾಕಿ ಶೂಟ್ ಮಾಡಲಾಗಿದೆ. ಶ್ರುತಿ ಹಾಸನ್ ಈ ಹಾಡಿಗೆ ರಾಮ್‌ಚರಣ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಒಂದು ಹಂತದಲ್ಲಿ ಜಾನ್ವಿ ಕಪೂರ್ ಕೂಡ ಇಬ್ಬರಿಗೆ ಸಾಥ್ ನೀಡಿದ್ದಾರೆ. ಒಂದೇ ಫ್ರೇಮ್‌ನಲ್ಲಿ ಮೂವರು ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ.
ಶ್ರುತಿ ಹಾಸನ್ ಒಳ್ಳೆ ಡ್ಯಾನ್ಸರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ಜಾನ್ವಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಶ್ರೀದೇವಿ ಪುತ್ರಿ ಮುಂದೆ ಕಮಲ್ ಪುತ್ರಿ ಡಲ್ ಆಗಿಬಿಟ್ಲು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ರಾಮ್‌ಚರಣ್ ಎಡಭಾಗದಲ್ಲಿ ಜಾನ್ವಿ ಬದ್ಲು ಶ್ರುತಿ ಇದ್ದಿದ್ರೆ ಹೈಲೆಟ್ ಆಗ್ತಿದ್ಲು. ಶ್ರೀದೇವಿ ಪುತ್ರಿ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ಹಾಗಾಗಿ ಶ್ರುತಿ ಕಳೆದು ಹೋದಂತೆ ಕಾಣುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಮೂವರು ಸ್ಟಾರ್ಸ್ ಮಕ್ಕಳು ಒಟ್ಟಿಗೆ ಹೀಗೆ ತೆರೆ ಹಂಚಿಕೊಂಡಿರುವುದು ವಿಶೇಷ.
ಈಗಾಗಲೇ 'ಹೆಲ್ಲಾಲ್ಲಲ್ಲೊ' ಸಾಂಗ್ 50 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ತೆಲುಗು ವರ್ಷನ್ 25 ಮಿಲಿಯನ್‌ಗಿಂತ ಹೆಚ್ಚು ವೀವ್ಸ್ ಸಾಧಿಸಿದೆ. ಹಿಂದಿ ಸಾಂಗ್ 11 ಮಿಲಿಯನ್ ವೀವ್ಸ್ ಸಾಧಿಸಿರುವುದು ವಿಶೇಷ. ಎ. ಆರ್ ರಹಮಾನ್ ಟ್ಯೂನ್‌ಗೆ ಅನಂತ್ ಶ್ರೀರಾಮ್ ಸಾಹಿತ್ಯ ಬರೆದಿದ್ದು ರಕ್ಷಿತಾ ಸುರೇಶ್ ಹಾಡಿದ್ದಾರೆ. ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿರುವುದು ವಿಶೇಷ. ಚಿತ್ರಕ್ಕೆ ಕನ್ನಡದಲ್ಲಿ ಸಂಭಾಷಣೆ ಕೂಡ ರಚಿಸಿದ್ದಾರೆ.
'ಪೆದ್ದಿ' ಚಿತ್ರದಲ್ಲಿ 90ರ ದಶಕದ ಕಥೆ ಹೇಳಲಾಗ್ತಿದೆ. ಹಳ್ಳಿಯ ಕ್ರಿಕೆಟಿಗ, ಕುಸ್ತಿ ಪೈಲ್ವಾನ್ ಆಗಿ ರಾಮ್‌ಚರಣ್ ನಟಿಸಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಜಗಪತಿ ಬಾಬು ಹಾಗೂ ಕನ್ನಡ ನಟ ತಾರಕ್ ಪೊನ್ನಪ್ಪ ಕೂಡ ತಾರಾಗಣದಲ್ಲಿದ್ದಾರೆ. 'ಉಪ್ಪೆನ' ಸಿನಿಮಾ ಬಳಿಕ ಬುಚ್ಚಿಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
'ಎವಡು' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದರು. ಆದರೆ ಇದೀಗ 'ಪೆದ್ದಿ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮಾತ್ರ ಚರಣ್ ಜೊತೆ ಹೆಜ್ಜೆ ಹಾಕಿದ್ದಾರೆ. ಅದಕ್ಕಾಗಿ ಭಾರೀ ಸಂಭಾವನೆ ಕೂಡ ಪಡೆದುಕೊಂಡಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications