Made In India: 'ಮೇಡ್ ಇನ್ ಇಂಡಿಯಾ' ಎಂದು ಭಾರತೀಯ ಸಿನಿಮಾದ ಬಯೋಪಿಕ್ ಘೋಷಿಸಿದ ಎಸ್‌ಎಸ್ ರಾಜಮೌಳಿ
ಭಾರತೀಯ ಸಿನಿಮಾ ರಂಗಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಆರ್‌ಆರ್‌ಆರ್ (RRR), ಬಾಹುಬಲಿ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಈಗ ಭಾರತೀಯ ಸಿನಿಮಾದ ಬಯೋಪಿಕ್ ದೇಶದ ಜನರ ಮುಂದಿಡಲು ಹೊರಟಿದ್ದಾರೆ. ರಾಜಮೌಳಿ ಸದ್ಯ ಹೊಸ ಸಿನಿಮಾ ಘೋಷಿಸಿದ್ದಾರೆ.
ಎಸ್‌ಎಸ್ ರಾಜಮೌಳಿ ಮತ್ತೊಂದು ಮಹಾಕಾವ್ಯವನ್ನು ಸಿನಿರಸಿಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗದ ಕಥೆಯನ್ನು ಹೇಳುವ ಸಿನಿಮಾವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದು, ಸಿನಿಮಾಕ್ಕೆ 'ಮೇಡ್ ಇನ್ ಇಂಡಿಯಾ' ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಈ ಬಯೋಪಿಕ್ ಅನ್ನು ರಾಜಮೌಳಿ ಅವರ ಪುತ್ರ ಎಸ್‌ಎಸ್ ಕಾರ್ತಿಕೇಯ ಮತ್ತು ವರುಣ್ ಗುಪ್ತಾ ನಿರ್ಮಿಸಿದ್ದಾರೆ. ಚಿತ್ರಕ್ಕೆ ನಿತಿನ್ ಕಕ್ಕರ್ ಆಕ್ಷನ್ ಕಟ್ ಹೇಳಲಿದ್ದಾರೆ.

ಮೇಡ್ ಇನ್ ಇಂಡಿಯಾ ಶೀರ್ಷಿಕೆ ಟೀಸರ್ ಅನ್ನು ರಾಜಮೌಳಿ ಮಂಗಳವಾರ ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ 'ಹುಟ್ಟು ಮತ್ತು ಬೆಳವಣಿಗೆಯನ್ನು ಸಿನಿಮಾ ಹೇಳಲಿದೆ ಎಂದು ಟೀಸರ್‌ನಲ್ಲಿ ತಿಳಿಸಲಾಗಿದೆ. ಚಿತ್ರಕ್ಕೆ ಮತ್ತೊಬ್ಬರು ನಿರ್ದೇಶನ ಮಾಡಲಿದ್ದಾರೆ. ರಾಜಮೌಳಿ ಅವರಿಗೆ ಸದ್ಯಕ್ಕೆ ಸಿನಿಮಾ ನಿರ್ದೇಶನ ಮಾಡುವ ಯೋಚನೆ ಇಲ್ಲ.
'ಮೇಡ್ ಇನ್ ಇಂಡಿಯಾ'
ಹೊಸ ಸಿನಿಮಾ ಘೋಷಣೆ ಬಗ್ಗೆ ಸಸ್ಪೆನ್ಸ್ ಮತ್ತು ಹೈಪ್ ಕ್ರಿಯೇಟ್ ಮಾಡಿದ ನಂತರ, ನಿರ್ದೇಶಕ ಎಸ್‌ಎಸ್ ರಾಜಮೌಳಿ ಟ್ವಿಟರ್‌ನಲ್ಲಿ ಶೀರ್ಷಿಕೆ ಟೀಸರ್ ಹಂಚಿಕೊಂಡಿದ್ದಾರೆ. "ನಾನು ಮೊದಲು ಇದರ ನರೇಷನ್ ಕೇಳಿದಾಗ, ಎಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನು ಭಾವನಾತ್ಮಕವಾಗಿ ಅಲುಗಾಡಿಸಿತು. ಬಯೋಪಿಕ್ ಮಾಡುವುದೇ ಒಂದು ಕಠಿಣ. ಆದರ ಜೊತೆಗೆ ಭಾರತೀಯ ಸಿನಿಮಾದ ಪಿತಾಮಹನ ಬಗ್ಗೆ ಕಲ್ಪಿಸಿಕೊಳ್ಳುವುದು ಇನ್ನೂ ಹೆಚ್ಚು ಸವಾಲಿನ ಸಂಗತಿಯಾಗಿದೆ. ಆದರೆ, ನಮ್ಮ ಹುಡುಗರು ಸಿದ್ಧರಾಗಿದ್ದಾರೆ .ಅಪಾರವಾದ ಹೆಮ್ಮೆಯಿಂದ, ಮೇಡ್ ಇನ್ ಇಂಡಿಯಾ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಮೇಡ್ ಇನ್ ಇಂಡಿಯಾ ಚಿತ್ರದ ತಾರಾಗಣ ಇನ್ನೂ ನಿರ್ಧಾರವಾಗಿಲ್ಲ. ಚಿತ್ರವನ್ನು ನಿರ್ದೇಶಿಸಲಿರುವ ನಿತಿನ್ ಕಕ್ಕರ್ ಅವರು ಈ ಹಿಂದೆ ಫಿಲ್ಮಿಸ್ತಾನ್ (2012), ಮಿತ್ರನ್ (2018), ನೋಟ್‌ಬುಕ್ (2019), ಜವಾನಿ ಜಾನೆಮನ್ (2020) ಮತ್ತು ರಾಮ್ ಸಿಂಗ್ ಚಾರ್ಲಿ (2020) ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇನ್ನು ಬಂಡವಾಳ ಹೂಡುತ್ತಿರುವ ಎಸ್‌ಎಸ್ ಕಾರ್ತಿಕೇಯ ಅವರ ಮೊದಲ ನಿರ್ಮಾಣದ ಸಿನಿಮಾ. ಈ ಹಿಂದೆ ತಮ್ಮ ತಂದೆಯ ಕೊನೆಯ ಹಿಟ್ ಸಿನಿಮಾ ಆರ್‌ಆರ್‌ಆರ್‌ನಲ್ಲಿ ಲೈನ್ ಪ್ರೊಡ್ಯೂಸರ್ ಎಂದು ಗುರುತಿಸಿಕೊಂಡಿದ್ದರು.

ಇಲ್ಲಿ ಗಮನಿಸಿಬೇಕಿರೋದು ದಾದಾಸಾಹೇಬ್ ಫಾಲ್ಕೆ ಅವರನ್ನು 'ಭಾರತೀಯ ಸಿನಿಮಾದ ಪಿತಾಮಹ' ಎಂದು ಕರೆಯಲಾಗುತ್ತದೆ. ದಾದಾಸಾಹೇಬ್ ಫಾಲ್ಕೆ ಅವರು 1913 ರಲ್ಲಿ ರಾಜಾ ಹರಿಶ್ಚಂದ್ರ ಎಂಬ ಹೆಸರಿನ ಮೊದಲ ಭಾರತೀಯ ಚಲನಚಿತ್ರವನ್ನು ನಿರ್ಮಿಸಿದ್ದರು. ಅವರು 27 ಕಿರುಚಿತ್ರಗಳನ್ನು ಮಾಡಿದರು ಎಂದು ವರದಿಯಾಗಿದೆ. ಸುಮಾರು ಎರಡು ದಶಕಗಳ ಕಾಲ ಚಲನಚಿತ್ರ ನಿರ್ದೇಶಕರಾಗಿ ಅವರ ವೃತ್ತಿಜೀವನದಲ್ಲಿ 90 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದರು.
'ಕಲ್ಕಿ 2898 AD'ಯಲ್ಲಿ ರಾಜಮೌಳಿ ಅತಿಥಿ?
ಸದ್ಯ ಸಿನಿಮಾದಿಂದ ವಿರಾಮ ಪಡೆದುಕೊಂಡಿರುವ ಎಸ್ ಎಸ್ ರಾಜಮೌಳಿ, ಶೀಘ್ರದಲ್ಲೇ ಮಹೇಶ್ ಬಾಬು ಅವರ ಮುಂಬರುವ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸವನ್ನು ಪ್ರಾರಂಭಿಸುತ್ತಾರೆ. ಈ ನಡುವೆ ರಾಜಮೌಳಿ ಪ್ರಭಾಸ್ ಅವರ 'ಕಲ್ಕಿ 2898 AD' ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ವದಂತಿಗಳಿವೆ. ಈ ಹಿಂದೆ ರಾಜಮೌಳಿ 'ಬಾಹುಬಲಿ: ದಿ ಬಿಗಿನಿಂಗ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ಅವರು ತಮ್ಮ ಚಲನಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಮತ್ತು ಕೆಲವು ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.
ಆದಾಗ್ಯೂ, 'ಕಲ್ಕಿ 2898 AD' ನಲ್ಲಿ ರಾಜಮೌಳಿ ಅವರ ಅತಿಥಿ ಪಾತ್ರದ ಬಗ್ಗೆ ಅಧಿಕೃತ ದೃಢೀಕರಣವನ್ನು ಇನ್ನೂ ಮಾಡಬೇಕಾಗಿದೆ.


Click it and Unblock the Notifications










