ರಾಯಚೂರು ಮೂಲದ ರಾಜಮೌಳಿಗೆ ಕನ್ನಡ ಅಂದ್ರೆ ಅಸಡ್ಡೆನಾ?
ತಮ್ಮ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದವರು ಎಸ್. ಎಸ್ ರಾಜಮೌಳಿ. 'ಛತ್ರಪತಿ', 'ಮಗಧೀರ', 'ಈಗ', 'ಬಾಹುಬಲಿ' ಸರಣಿ ಹಾಗೂ 'RRR' ಸಿನಿಮಾ ಮೂಲಕ ಅದ್ಭುತಗಳನ್ನು ಸೃಷ್ಟಿಸಿದವರು ಜಕ್ಕಣ್ಣ. ರಾಯಚೂರು ಮೂಲದ ಮೌಳಿಗೆ ಕನ್ನಡ ಅಂದರೆ ಅಷ್ಟಕ್ಕಷ್ಟೆ ಎನ್ನುವ ಆರೋಪವೂ ಇದೆ.
ನಿರ್ದೇಶಕ ರಾಜಮೌಳಿ ತಂದೆ, ತಾಯಿ ಆಂಧ್ರ ಮೂಲದವರಾಗಿದ್ದರು ಕೆಲ ವರ್ಷಗಳು ಕರ್ನಾಟಕದಲ್ಲಿ ನೆಲೆಸಿದ್ದರು. ರಾಯಚೂರು ಜಿಲ್ಲೆಯ ಹಿರೇ ಕೊಟ್ನೆಕಲ್‌ನಲ್ಲಿ ಮೌಳಿ ಹುಟ್ಟಿದ್ದು. ಹಾಗಾಗಿ ತಂದೆ ವಿಜಯೇಂದ್ರ ಪ್ರಸಾದ್ ಹಾಗೂ ರಾಜಮೌಳಿಗೆ ಕನ್ನಡ ಭಾಷೆ ಕೂಡ ಗೊತ್ತು. ಅವರು ಕನ್ನಡ ಸಿನಿಮಾಗಳನ್ನು ಕಾಪಿ ಮಾಡುತ್ತಾರೆ ಎನ್ನುವ ಆರೋಪ ಕೂಡ ಇದೆ. ರಾಜಮೌಳಿಗೆ ಕನ್ನಡ ಅಂದರೆ ಅಭಿಮಾನ ಇಲ್ಲ, ತಮ್ಮ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಮಾತ್ರ ನಾನು ರಾಯಚೂರಿನವನು ಎಂದು ಹೇಳಿಕೊಳ್ಳುತ್ತಾರೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆರೋಪಿಸಿದ್ದರು.

ಕನ್ನಡದ ಬಗ್ಗೆ ರಾಜಮೌಳಿಗೆ ಯಾಕಿಷ್ಟು ತಾತ್ಸಾರ ಎನ್ನುವ ಚರ್ಚೆ ಮತ್ತೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜಕ್ಕಣ್ಣ ನಿರ್ದೇಶನದ 'ಬಾಹುಬಲಿ'-1 ಸಿನಿಮಾ 10 ವರ್ಷ ಪೂರೈಸಿದೆ. ಇದೇ ಸಂಭ್ರಮದಲ್ಲಿ ಸರಣಿ ಸಿನಿಮಾಗಳನ್ನು ಒಂದು ಮಾಡಿ ಮರುಬಿಡುಗಡೆ ಮಾಡುವುದಾಗಿ ಬಗ್ಗೆ ಚಿತ್ರತಂಡ ಘೋಷಿಸಿದೆ. ಅಕ್ಟೋಬರ್ 31ಕ್ಕೆ 5 ಗಂಟೆಗಳ ಸಂಪೂರ್ಣ ಕತೆಯ ಸಿನಿಮಾ ಮತ್ತೆ ತೆರೆಗೆ ಬರಲಿದೆ. ಆದರೆ ಕನ್ನಡಕ್ಕೆ ಸಿನಿಮಾಡ ಡಬ್ ಆಗಿ ಬರುತ್ತಿಲ್ಲ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ ಮೌಳಿಗೆ ಕನ್ನಡ ಅಂದ್ರೆ ಅಸಡ್ಡೆ ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ.
10 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಹಾಗಾಗಿ 'ಬಾಹುಬಲಿ' ಸರಣಿ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಂದಿರಲಿಲ್ಲ. 4 ಭಾಷೆಗಳಲ್ಲಿ ಮಾತ್ರ ಸಿನಿಮಾ ಬಿಡುಗಡೆ ಆಗಿತ್ತು. ಆದರೂ ಸೂಪರ್ ಹಿಟ್ ಹಿಟ್ ಸೇರಿತ್ತು. ಅದೇ ಕಾರಣಕ್ಕೆ ಈಗ ಚಿತ್ರತಂಡ ಡಬ್ ಮಾಡಿಲ್ಲ. ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಡಬ್ ಮಾಡಿ ತೆರೆಗೆ ತರಲು ಮುಂದಾಗಿದೆ.
ಆಗ ಡಬ್ಬಿಂಗ್‌ಗೆ ಅವಕಾಶ ಇರಲಿಲ್ಲ ಸರಿ. ಈಗ ಅವಕಾಶ ಇದೆ ಅಲ್ಲವೇ? ಕನ್ನಡಕ್ಕೆ ಡಬ್ ಮಾಡಿ ಬಿಡಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಿರ್ದೇಶಕ ರಾಜಮೌಳಿ ಗಮನಕ್ಕೆ ಈ ವಿಚಾರ ಬಂದಿದ್ಯಾ? ಇಲ್ವಾ? ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
2015ರ ಜುಲೈ 10ರಂದು 'ಬಾಹುಬಲಿ'-1 ಸಿನಿಮಾ ಬಿಡುಗಡೆ ಆಗಿತ್ತು. ಮಾಹಿಷ್ಮತಿ ಸಾಮ್ರಾಜ್ಯ, ಬಾಹುಬಲಿ ಹಾಗೂ ಬಲ್ಲಾಳದೇವ ನಡುವಿನ ವೈರತ್ವದ ಕಥೆ ಸಿನಿರಸಿಕರಿಗೆ ಇಷ್ಟವಾಗಿತ್ತು. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಮೊದಲ ಭಾಗ ನಿರ್ಮಾಪಕರಿಗೆ ಲಾಭ ತಂದು ಕೊಡಲಿಲ್ಲ. ಆದರೆ ಸೀಕ್ವೆಲ್ ಬ್ಲಾಕ್‌ಬಸ್ಟರ್ ಹಿಟ್ ಆಗಿ ಬಂಗಾರದ ಬೆಳೆ ತೆಗೆದಿತ್ತು. ಇದೀಗ ಎರಡೂ ಚಿತ್ರಗಳನ್ನು ಒಟ್ಟಿಗೆ ನೋಡುವ ಅವಕಾಶವನ್ನು ಚಿತ್ರತಂಡ ಮಾಡಿಕೊಡುತ್ತಿದೆ.
ಎರಡೂ ಸಿನಿಮಾಗಳನ್ನು ಸೇರಿಸಿ 3 ಗಂಟೆಗಳಾಗಿ ಎಡಿಟ್ ಮಾಡಿ ಮರುಬಿಡುಗಡೆ ಮಾಡುತ್ತಾರೆ ಎನ್ನಲಾಗಿತ್ತು. ಅದಕ್ಕಾಗಿ ಸ್ವತಃ ಜಕ್ಕಣ್ಣ ಸಿನಿಮಾ ಎಡಿಟಿಂಗ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಸಿನಿಮಾ ಒಟ್ಟು ಕಾಲಾವಧಿ 5 ಗಂಟೆಗೂ ಹೆಚ್ಚು ಇರುತ್ತದೆ ಎನ್ನಲಾಗ್ತಿದೆ. ಇನ್ನು 'ಬಾಹುಬಲಿ' ಸಿನಿಮಾ 10 ವರ್ಷ ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಒಂದೆಡೆ ಸೇರಿ ಆಚರಿಸಿದೆ. ಈ ವೇಳೆ ಅನುಷ್ಕಾ ಶೆಟ್ಟಿ, ತಮನ್ನಾ ಗೈರಾಗಿದ್ದರು.


Click it and Unblock the Notifications











