ಮುಂದಿನ ಸಿನಿಮಾ ಎಲ್ಲಿಗೆ ಬಂತು? ಜಪಾನ್ ದೇಶದಲ್ಲಿ ಮಾಹಿತಿ ನೀಡಿದ ಜಕ್ಕಣ್ಣ
ಅದ್ಯಾಕೋ ಗೊತ್ತಿಲ್ಲ. ನಿರ್ದೇಶಕ ರಾಜಮೌಳಿ ಒಂದು ಸಿನಿಮಾ ಮಾಡೋಕೆ ನಾಲ್ಕೈದು ವರ್ಷ ವ್ಯಯಿಸುತ್ತಾರೆ. ಅದೇ ಕಾರಣಕ್ಕೆ ಜಕ್ಕಣ್ಣ ಬೇಗ ಸಿನಿಮಾ ಶುರು ಮಾಡಿ, ಶೂಟಿಂಗ್ ಮುಗಿಸಿ ಥಿಯೇಟರ್‌ಗೆ ಬರಬೇಕು ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. 'RRR' ಬಂದೋಗಿ 2 ವರ್ಷ ಕಳೆದರೂ ಮುಂದಿನ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾ ಎಂದು ಈಗಾಗಲೇ ಮೌಳಿ ಹೇಳಿದ್ದಾರೆ. ಆದರೆ ಯಾವಾಗ ಸಿನಿಮಾ ಸೆಟ್ಟೇರುತ್ತೆ? ಯಾವಾಗ ರಿಲೀಸ್? ಎನ್ನುವ ಬಗ್ಗೆ ಖುದ್ದು ಜಕ್ಕಣ್ಣನಿಗೂ ಗ್ಯಾರೆಂಟಿ ಇಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಪದೇ ಪದೆ ಸಿನಿಮಾ ಅಪ್‌ಡೇಟ್ ಕೇಳುತ್ತಿರುತ್ತಾರೆ. ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮೌಳಿ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.

ಹಾಲಿವುಡ್ ರೇಂಜ್ ಹೀರೋ ಮಹೇಶ್ ಬಾಬು ಎಂದು ಅಭಿಮಾನಿಗಳು ಹೇಳುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ಜಕ್ಕಣ್ಣ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. SSMB29 ಕಥೆ ದೇಶ ವಿದೇಶಗಳಲ್ಲಿ ಸಾಗುವಂತೆ ಇರಲಿದೆ. ಬಹುತೇಕ ತಮ್ಮದೇ ತಂಡ ಕಟ್ಟಿಕೊಂಡು ಜಕ್ಕಣ್ಣ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಈಗಾಗಲೇ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದುಕೊಟ್ಟಿದ್ದಾರೆ. 'RRR' ಸಿನಿಮಾ ಜಪಾನ್ ದೇಶದಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಸಿನಿಮಾ ಸ್ಕ್ರೀನಿಂಗ್‌ಗಾಗಿ ನಿರ್ದೇಶಕ ರಾಜಮೌಳಿ ಅಲ್ಲಿಗೆ ಹೋಗಿದ್ದಾರೆ.
ಜಪಾನ್ ಪ್ರೇಕ್ಷಕರು ರಾಜಮೌಳಿಯನ್ನು ನೋಡಿ ಥ್ರಿಲ್ಲಾಗಿದ್ದಾರೆ. ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಇದೇ ವೇಳೆ ಜಕ್ಕಣ್ಣ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. "ಮಹೇಶ್ ಬಾಬು ಜೊತೆಗೆ ಮಾಡಲಿರುವ ಸಿನಿಮಾ ಸ್ಟ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ. ಪ್ರೀ ಪ್ರೊಡಕ್ಷನ್ ವರ್ಕ್ ಈಗಾಗಲೇ ಶುರುವಾಗಿದೆ. ಪ್ರೀ ವಿಷ್ಯುವಲೈಸೇಷನ್ ಕೆಲಸಗಳು ನಡೀತಿದೆ" ಎಂದು ರಾಜಮೌಳಿ ಹೇಳಿದ್ದಾರೆ.
"ಸದ್ಯ ಚಿತ್ರಕ್ಕೆ ಹೀರೊ ಮಾತ್ರ ಆಯ್ಕೆ ಆಗಿದ್ದಾರೆ. ಬೇರೆ ಕಲಾವಿದರ ಆಯ್ಕೆ ಇನ್ನು ಆಗಿಲ್ಲ. ಚಿತ್ರದ ನಾಯಕನ ಹೆಸರು ಮಹೇಶ್ ಬಾಬು. ತೆಲುಗು ನಟ. ಇಲ್ಲಿ ಬಹಳ ಜನಕ್ಕೆ ಆತ ಗೊತ್ತಿರಬಹುದು. ಆತ ಬಹಳ ಹ್ಯಾಂಡ್ಸಮ್. ಆದಷ್ಟು ಬೇಗ ನಾನು ಸಿನಿಮಾ ಮಾಡಿ ಮುಗಿಸುತ್ತೇವೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಆತನನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆ" ಎಂದು ಮೌಳಿ ವಿವರಿಸಿದ್ದಾರೆ.
ಸದ್ಯ ರಾಜಮೌಳಿ ಹೇಳಿಕೆ ವೈರಲ್ ಆಗುತ್ತಿದೆ. ಏಪ್ರಿಲ್‌ನಲ್ಲೇ SSMB29 ಸಿನಿಮಾ ಮುಹೂರ್ತ ಎನ್ನುವ ಗುಸುಗುಸು ಕೂಡ ಟಾಲಿವುಡ್‌ನಲ್ಲಿ ಅಂಗಳದಲ್ಲಿ ಕೇಳಿ ಬರ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಪ್ಲ್ಯಾನಿಂಗ್ ನಡೀತಿದೆ. ಚಿತ್ರಕ್ಕಾಗಿ ಹಾಲಿವುಡ್ ಸ್ಟುಡಿಯೋ ಜೊತೆಗೂ ಒಪ್ಪಂದ ಮಾಡಿಕೊಳ್ಳಲು ರಾಜಮೌಳಿ ನಿರ್ಧರಿಸಿದ್ದಾರೆ.
ಜಪಾನ್‌ಗೆ ಭೇಟಿ ನೀಡಿದ ವೇಳೆ ಅಭಿಮಾನಿಯೊಬ್ಬರು ತಮಗೆ ನೀಡಿದ ಉಡುಗೊರೆ ಬಗ್ಗೆ ನಿರ್ದೇಶಕ ರಾಜಮೌಳಿ ಮಾಹಿತಿ ನೀಡಿದ್ದರು. 83 ವರ್ಷದ ಮಹಿಳಾ ಅಭಿಮಾನಿಯೊಬ್ಬರು ನೀಡಿದ ಉಡುಗೊರೆ ಬಗ್ಗೆ ಟ್ವೀಟ್ ಮಾಡಿದ್ದರು. ಅದರ ವಿಶೇಷತೆಯನ್ನು ವಿವರಿಸಿದ್ದರು.
"ಜಪಾನ್ ದೇಶದಲ್ಲಿ ಓರಿಗಾಮಿ ಕ್ರೇನ್‌ಗಳನ್ನು ತಯಾರಿಸುತ್ತಾರೆ. ತಮ್ಮಗಿಷ್ಟವಾದವರೆ ಒಳ್ಳೆಯದಾಗಲಿ, ಆರೋಗ್ಯ ವೃದ್ಧಿಸಲಿ ಎಂದು ಇದನ್ನು ಉಡುಗೊರೆ ನೀಡುತ್ತಾರೆ. ಈ 83 ವರ್ಷದ ವೃದ್ಧೆ ನಮ್ಮನ್ನು ಆಶೀರ್ವದಿಸಲು ಇಂತಹದ್ದನ್ನು 1000 ತಯಾರಿಸಿದ್ದಾಳೆ. ಅಷ್ಟರಮಟ್ಟಿಗೆ 'RRR' ಚಿತ್ರ ಆಕೆಗೆ ಇಷ್ಟವಾಗಿದೆ. ಉಡುಗೊರೆ ಕೊಟ್ಟು ಆಕೆ ಹೊರಗೆ ಚಳಿಯಲ್ಲಿ ಕಾಯುತ್ತಿದ್ದಳು. ಕೆಲವು ಜ್ಞಾನಪಗಳನ್ನು ಎಂದೂ ಮರಳಿಸಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದರು.


Click it and Unblock the Notifications











