ಮೌಳಿ ಚಿತ್ರಕ್ಕೆ ಪ್ರಿಯಾಂಕಾಗೆ ಭಾರೀ ಸಂಭಾವನೆ; ಈ ಹಣದಲ್ಲಿ ಒಂದು ಸಿನಿಮಾ ನಿರ್ಮಿಸಬಹುದು
ಮಹೇಶ್ ಬಾಬು ಹಾಗೂ ಎಸ್. ಎಸ್ ರಾಜಮೌಳಿ ಕ್ರೇಜಿ ಕಾಂಬಿನೇಷನ್ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಕೂಡ ಆರಂಭವಾಗಿ ಎನ್ನಲಾಗ್ತಿದೆ. ಅಧಿಕೃತವಾಗಿ ಚಿತ್ರತಂಡದಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಚಿತ್ರದ ನಾಯಕಿಯಾಗಿ ಪ್ರಿಯಾಂಕ ಚೋಪ್ರಾ ಆಯ್ಕೆ ಆಗಿದ್ದಾರೆ.
ಹೊಸ ವರ್ಷದ ಸಂಭ್ರಮದಲ್ಲೇ SSMB 29 ಸಿನಿಮಾ ಮುಹೂರ್ತ ನೆರವೇರಿತ್ತು. ಆದರೆ ಈ ಬಗ್ಗೆ ಚಿತ್ರತಂಡ ತುಟಿಕ್ ಪಿಟಿಕ್ ಎನ್ನಲಿಲ್ಲ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಾಜಮೌಳಿ ಮುಂದಿನ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇತ್ತೀಚೆಗೆ ಸಣ್ಣ ವೀಡಿಯೋ ಬಿಟ್ಟು ಪರೋಕ್ಷವಾಗಿ ಚಿತ್ರದ ಬಗ್ಗೆ ಜಕ್ಕಣ್ಣ ಅಪ್‌ಡೇಟ್ ಕೊಟ್ಟಿದ್ದರು. ಅವರ ಪೋಸ್ಟ್‌ಗೆ ಮಹೇಶ್ ಹಾಗೂ ಪಿಗ್ಗಿ ಕೂಡ ಪ್ರತಿಕ್ರಿಯಿಸಿದ್ದರು.

ಕೀನ್ಯಾದಲ್ಲಿ ಚಿತ್ರದ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಅಂದಾಜು 1000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ SSMB 29 ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಹಾಲಿವುಡ್ ಸಂಸ್ಥೆ ಜೊತೆಗೂ ಒಪ್ಪಂದ ಮಾಡಿಕೊಂಡು ಸಿನಿಮಾ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಿಯಾಂಕ ಚೋಪ್ರಾ ಈಗಾಗಲೇ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಹಾಗಾಗಿ ಆಕೆಯನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
SSMB 29 ಆಕ್ಷನ್ ಅಡ್ವೆಂಚರಸ್ ಸಿನಿಮಾ. ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ಸಾಗಲಿದೆ. ಇಂಡಿಯಾನಾ ಜೋನ್ಸ್ ಮಾದರಿಯ ಸಿನಿಮಾ ಇದು. ಮಹೇಶ್ ಬಾಬು ಹೊಸ ಅವತಾರದಲ್ಲಿ ತೋರಿಸುವ ಪ್ರಯತ್ನ ನಡೀತಿದೆ. ಮದುವೆ ಬಳಿಕ ಪಿಗ್ಗಿ ಯೂಎಸ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಇತ್ತೀಚೆಗೆ ಆಕೆ ಹೈದರಾಬಾದ್‌ಗೂ ಬಂದಿದ್ದರು. ವೀಸಾ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೂ(ಚಿಲ್ಕೂರ್ ಬಾಲಾಜಿ ದೇವಸ್ಥಾನ) ಭೇಟಿ ನೀಡಿದ್ದರು. ಆದಷ್ಟು ಬೇಗ ಮಹೇಶ್-ಮೌಳಿ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗುವ ನಿರೀಕ್ಷೆಯಿದೆ.
ರಾಜಮೌಳಿ ಚಿತ್ರಗಳಿಗೆ ಕೆಲಸ ಮಾಡುವ ತಂಡವೇ SSMB 29 ಚಿತ್ರಕ್ಕೂ ಕೆಲಸ ಮಾಡಲಿದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಇರಲಿದೆ. ಪೃಥ್ವಿರಾಜ್ ಸುಕುಮಾರನ್ ಸಹ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಯಾವುದನ್ನು ಚಿತ್ರತಂಡ ಕನ್ಫರ್ಮ್ ಮಾಡಿಲ್ಲ. ಚಿತ್ರಕ್ಕೆ ಪ್ರಿಯಾಂಕ ಚೋಪ್ರಾ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದನ್ನು ಕೇಳಿ ಕೆಲವರು ಹುಬ್ಬೇರಿಸಿದ್ದಾರೆ.

1000 ಕೋಟಿ ರೂ. ಬಜೆಟ್ ಸಿನಿಮಾ ಎನ್ನುತ್ತಿದ್ದಾರೆ. ಅದೇ ನಿಜವಾಗಿದ್ದರೆ ಪ್ರಿಯಾಂಕ ಕ್ರೇಜ್‌ಗೆ ತಕ್ಕಂತೆ 30 ಕೋಟಿ ರೂ. ಕೊಡುವುದರಲ್ಲಿ ಅಚ್ಚರಿ ಏನಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಚಿತ್ರಕ್ಕಾಗಿ ಮಹೇಶ್ ಬಾಬು ಹಾಗೂ ರಾಜಮೌಳಿ ತಲಾ 100 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆಯುವ ಸಾಧ್ಯತೆಯಿದೆ. ಇನ್ನು ಪ್ರಿಯಾಂಕಗೆ ಕೊಡುವ ಸಂಭಾವನೆಯಲ್ಲಿ ಒಂದು ಭರ್ಜರಿ ಆಕ್ಷನ್ ಸಿನಿಮಾ ನಿರ್ಮಿಸಬಹುದು ಎಂದು ಕೆಲವರು ಲೆಕ್ಕ ಹಾಕುತ್ತಿದ್ದಾರೆ. ನಟಿಯರ ವಿಚಾರಕ್ಕೆ ಬಂದರೆ ಇದು ಹೊಸ ದಾಖಲೆಯೇ ಸರಿ.
ಕೆ. ಎಲ್ ನಾರಾಯಣ ಎಂಬುವವರು SSMB 29 ಚಿತ್ರ ಬಂಡವಾಳ ಹೂಡುತ್ತಿದ್ದಾರೆ. 10 ವರ್ಷಗಳ ಹಿಂದೆಯೇ ರಾಜಮೌಳಿ ಜೊತೆ ಸಿನಿಮಾ ಮಾಡುವ ಬಗ್ಗೆ ಮಹೇಶ್ ಬಾಬು ಹೇಳಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಅಂತೂ ಇಂತೂ ಇಬ್ಬರೂ ಒಟ್ಟಿಗೆ ಸೇರಿ ಒಂದೇ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ. 'RRR' ಸಿನಿಮಾ ನೋಡಿ ಜೇಮ್ಸ್ ಕ್ಯಾಮರೂನ್ ಸಹ ಮೆಚ್ಚಿದ್ದರು. ಹಾಗಾಗಿ ಈ ಬಾರಿ ಜಕ್ಕಣ್ಣ ಟಾರ್ಗೆಟ್ ಹಾಲಿವುಡ್ ಆಡಿಯನ್ಸ್ ಎನ್ನಲಾಗ್ತಿದೆ.


Click it and Unblock the Notifications











