ರಾಜಮೌಳಿ ಕೈಯಲ್ಲಿ ತಗ್ಲಾಕಿಕೊಂಡ ಮಹೇಶ್ ಬಾಬು; ದೇವರೇ ಕಾಪಾಡಬೇಕು!
ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಹೊರಟಿದ್ದಾರೆ. ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಇದು ಮಹೇಶ್ ನಟನೆಯ 29ನೇ ಸಿನಿಮಾ. ಹಾಗಾಗಿ SSMB29 ಎಂದು ಸದ್ಯಕ್ಕೆ ಕರೆಯಲಾಗುತ್ತಿದೆ.
ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ಜಕ್ಕಣ್ಣ ಕಟ್ಟಿಕೊಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಮೌಳಿ ವಿಷನ್, ಮಹೇಶ್ ಬಾಬು ಪರ್ಫಾರ್ಮನ್ಸ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಸಾಧ್ಯತೆಯಿದೆ. ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಕೂಡ ಮುಗಿದಿದೆ.

ಇದು ಗ್ಲೋಬ್ ಟ್ರೊಟಿಂಗ್ ಅಡ್ವೆಂಚರ್ ಸಿನಿಮಾ. ಹಾಗಾಗಿ ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ಸಾಗಲಿದೆ. ತೆಲುಗು ಜೊತೆಗೆ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಶೂಟ್ ಮಾಡುತ್ತಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಕೀನ್ಯಾದಲ್ಲಿ ಒಂದು ಶೆಡ್ಯೂಲ್ ಪ್ಲ್ಯಾನ್ ಮಾಡಿದ್ದು ರಾಜಮೌಳಿ. ಆದರೆ ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ತಂಡ ಅಲ್ಲಿಗೆ ಹೋಗದಿರಲು ತೀರ್ಮಾನಿಸಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಸಿನಿಮಾ ಚಿತ್ರೀಕರಣ ತಡವಾಗಿ ತೆರೆಗೆ ಬರುವುದು ಮತ್ತಷ್ಟು ತಡವಾಗುವ ಸುಳಿವು ಸಿಗುತ್ತಿದೆ. ಚಿತ್ರದ ಬಗ್ಗೆ ರಾಜಮೌಳಿ ಈವರೆಗೆ ಅಧಿಕೃತವಾಗಿ ಮಾತನಾಡಿಲ್ಲ. ಹೊಸ ವರ್ಷದ ಸಂಭ್ರಮದಲ್ಲೇ ಹೈದರಾಬಾದ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದರು. ಆ ಬಗ್ಗೆ ಕೂಡ ಯಾವುದೇ ಮಾಹಿತಿ ಹೊರಗೆ ಬರಲಿಲ್ಲ.

ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಒಂದು ಸಣ್ಣ ಶೆಡ್ಯೂಲ್ ಮುಗಿಸಿ ಬಳಿಕ ಒರಿಸ್ಸಾದಲ್ಲಿ ಒಂದು ವಾರ ಚಿತ್ರೀಕರಣ ಮಾಡಲಾಗಿತ್ತು. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಸ್ಟಂಟ್ಸ್ ಬಗ್ಗೆ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಚಿತ್ರದಲ್ಲಿ ಮಹೇಶ್ ಬಾಬು ಯಾವುದೇ ಡ್ಯೂಪ್ ಇಲ್ಲದೇ ಖುದ್ದಾಗಿ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ.
ನಿರ್ದೇಶಕ ರಾಜಮೌಳಿ ಮಿ. ಪರ್ಫೆಕ್ಷನಿಸ್ಟ್ ಎಂದೇ ಎಲ್ಲರಿಗೂ ಪರಿಚಿತ. ತಾವು ಅಂದುಕೊಂಡಂತೆ ಸಿನಿಮಾ ಬರಬೇಕು ಎನ್ನುವುದು ಅವರ ಹಠ. ಅದೇ ಅವರ ಸಿನಿಮಾಗಳ ಸಕ್ಸಸ್ ಸೀಕ್ರೆಟ್ ಕೂಡ. ಇದೇ ಕಾರಣಕ್ಕೆ ಅವರ ಸಿನಿಮಾಗಳಲ್ಲಿ ನಟಿಸುವವರು ಬಹಳ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಅವರ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರು ಮಾತನಾಡಿರುವುದನ್ನು ನೋಡಿದ್ದೇವೆ. ಈಗ ಮಹೇಶ್ ಬಾಬು ಅಭಿಮಾನಿಗಳಿಗೆ ಅದೇ ಆತಂಕ ತಂದಿದೆ.
ಜಕ್ಕಣ್ಣ ತಮ್ಮ ಸಿನಿಮಾಗಳ ಚಿತ್ರೀಕರಣಕ್ಕೂ ಮುನ್ನ ಒಂದಷ್ಟು ತಾಲೀಮು ನಡೆಸುತ್ತಾರೆ. ವರ್ಕ್‌ಶಾಪ್ ಮಾಡಿ ಕಲಾವಿದರಿಂದ ರಿಹರ್ಸಲ್ ಮಾಡಿಸುತ್ತಾರೆ. ಯಾವುದೇ ಸೀನ್ ಆಗಿದ್ದರೂ ತಮಗೆ ಅನ್ನಿಸಿದಂತೆ ಬರಲೇಬೇಕು ಎಂದು ಪಟ್ಟು ಹಿಡಿಯುತ್ತಾರೆ. ಅದಕ್ಕಾಗಿ ಎಷ್ಟೇ ಟೇಕ್ ಆದರೂ ಸರಿ ಬಿಡಲ್ಲ. ಇದೇ ಕಾರಣಕ್ಕೆ ಜಕ್ಕಣ್ಣ ಸಿನಿಮಾಗಳು ತೆರೆಗೆ ಬರುವುದು ತಡವಾಗುತ್ತದೆ.
'ನಾಟು ನಾಟು' ಸಾಂಗ್‌ನಲ್ಲಿ ತಾರಕ್ ಹಾಗೂ ಚರಣ್ ಇಬ್ಬರೂ ಒಂದೇ ಸಮ ಡ್ಯಾನ್ಸ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಈ ವಿಚಾರವನ್ನು ಸ್ವತಃ ಜ್ಯೂ. ಎನ್‌ಟಿಆರ್ ಸಂದರ್ಶನಗಳಲ್ಲಿ ಹೇಳಿದ್ದರು. ನಾವು ಎಷ್ಟೇ ಚೆನ್ನಾಗಿ ಮಾಡಿದ್ರು ರಾಜಮೌಳಿಗೆ ಸಮಾಧಾನವೇ ಇರುತ್ತಿರಲಿಲ್ಲ ಎಂದಿದ್ದರು. ಮೌಳಿ ಅಷ್ಟರಮಟ್ಟಿಗೆ ಕಟ್ಟುನಿಟ್ಟು.
SSMB29 ಒಂದು ಅಡ್ವೆಂಚರಸ್ ಸಿನಿಮಾ. ಹಾಗಾಗಿ ಸಾಕಷ್ಟು ಆಕ್ಷನ್ ಸನ್ನಿವೇಶಗಳಿರುತ್ತವೆ. ಸಾಮಾನ್ಯವಾಗಿ ಸಿನಿಮಾಗಳನ್ನು ರಿಸ್ಕಿ ಸ್ಟಂಟ್ಸ್ ಮಾಡುವಾಗ ಡ್ಯೂಪ್ ಬಳಸುತ್ತಾರೆ. ಅವರಂತೆ ಕಾಣುವ ಕಲಾವಿದರಿಂದ ಅಂತಹ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಾರೆ. ರಾಜಮೌಳಿ ಸಿನಿಮಾಗಳಲ್ಲಿ ಕೂಡ ಇದು ನಡೆದಿದೆ. ಆದರೆ ಸಾಧ್ಯವಾದಷ್ಟು ನಾಯಕ ನಟರಿಂದಲೇ ಸ್ಟಂಟ್ಸ್ ಮಾಡಿಸಲು ಜಕ್ಕಣ್ಣ ಪ್ರಯತ್ನಿಸುತ್ತಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ಕೂಡ ಇದೇ ನಿಯಮ ಮುಂದುವರೆಸಿದ್ದಾರೆ.
ರಾಜಮೌಳಿ ಸಿನಿಮಾಗಳಲ್ಲಿ ಸ್ಟಂಟ್ಸ್ ಎಷ್ಟು ರಿಸ್ಕ್ ಇರುತ್ತದೆ ಎನ್ನುವುದು ಗೊತ್ತೇಯಿದೆ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸ್ಟಾರ್ ನಟರು ನಟಿಸುವಾಗ ನೋಡುವವರಿಗೆ ಆತಂಕವಾಗುತ್ತದೆ. ಮಹೇಶ್ ಬಾಬು ವಯಸ್ಸು 50 ವರ್ಷ ಆಗ್ತಾ ಬಂತು. ಈ ವಯಸ್ಸಲ್ಲಿ ಲೈವ್ ಸ್ಟಂಟ್ಸ್ ಎಂದರೆ ಅಭಿಮಾನಿಗಳಿಗೆ ಭಯವಾಗದೇ ಇರದು. ಸೋಶಿಯಲ್ ಮೀಡಿಯಾದಲ್ಲಿ ಇದೇ ಚರ್ಚೆ ನಡೀತಿದೆ.


Click it and Unblock the Notifications











