SSMB29: ಮೌಳಿ- ಮಹೇಶ್ ಚಿತ್ರದಲ್ಲಿ ಹೊಸ ಮುಖಗಳು.. ಏಪ್ರಿಲ್‌ನಲ್ಲಿ ಶೂಟಿಂಗ್: ಹೊಸ ಛಾಯಾಗ್ರಾಹಕ ಆಯ್ಕೆ!
ನಿರ್ದೇಶಕ ರಾಜಮೌಳಿ 'RRR' ಬಳಿಕ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಜೊತೆ ಸಿನಿಮಾ ಮಾಡೋದಾಗಿ ಈಗಾಗಲೇ ಘೋಷಿಸಿದ್ದಾರೆ. ಸದ್ಯ ತಂದೆ ವಿಜಯೇಂದ್ರ ಪ್ರಸಾದ್ ಜೊತೆ ಸೇರಿ ಸಿನಿಮಾ ಕತೆಯನ್ನು ತಿದ್ದಿ ತೀಡುತ್ತಿದ್ದಾರೆ. ವರ್ಷಾಂತ್ಯಕ್ಕೆ ಕತೆ ಫೈನಲ್ ಆಗಲಿದ್ದು ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರುವಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ಮಹೇಶ್ ಬಾಬು ಹೀರೊ ಆಗಿ ಆಫ್ರಿಕಾ ಕಾಡಿನ ಹಿನ್ನೆಲೆಯಲ್ಲಿ ಮೌಳಿ ಒಂದು ರೋಚಕ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಸದ್ಯ ಮಹೇಶ್ ಬಾಬು 'ಗುಂಟೂರು ಖಾರಂ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಜೊತೆಗೆ ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಅಡ್ವೆಂಚರ್ಸ್ ಸಿನಿಮಾ ತೆರೆಗೆ ಬರಲಿದೆ.

ಈ ಬಾರಿ ರಾಜಮೌಳಿ ತಮ್ಮ ತಂಡವನ್ನು ಬದಲಿಸುವ ಲೆಕ್ಕಚಾರದಲ್ಲಿ ಇದ್ದಾರೆ ಎನ್ನಲಾಗ್ತಿದೆ. ರಾಜಮೌಳಿ ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ, ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಖಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಮಹೇಶ್ ಬಾಬು ಸಿನಿಮಾಗೆ ತಮ್ಮ ತಂಡವನ್ನು ಬದಲಿಸಲು ಜಕ್ಕಣ್ಣ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಾರಿ ಹಾಲಿವುಡ್ ತಂತ್ರಜ್ಞರನ್ನು ಕರೆತರುವ ಆಲೋಚನೆಯಲ್ಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸೆಂಥಿಲ್ ಜಾಗಕ್ಕೆ ಹೊಸ ಹೆಸರು ಕೇಳಿ ಬರ್ತಿದೆ.
ಸೂಪರ್ ಹಿಟ್ ಸಿನಿಮಾಗಳನ್ನು ಸೆರೆ ಹಿಡಿದ ಪಿ. ಎಸ್ ವಿನೋದ್ ಇದೀಗ ಮೌಳಿ ಚಿತ್ರಕ್ಕೆ ಕೆಲಸ ಮಾಡುತ್ತಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಸೆಂಥಿಲ್ ಕುಮಾರ್ ಸಿನಿಮಾ ನಿರ್ದೇಶನಕ್ಕೆ ಮನಸ್ಸು ಮಾಡಿದ್ದಾರಂತೆ. ಹಾಗಾಗಿ ಮೌಳಿ ಸಿನಿಮಾದಲ್ಲಿ ಕೆಲಸ ಮಾಡಲ್ಲ ಎನ್ನುವ ಚರ್ಚೆಯೂ ನಡೀತಿದೆ. 'ವಿಕ್ರಂ ವೇದ', 'ಅಲಾ ವೈಕುಂಠಪುರಂಲೊ', 'ವಕೀಲ್ ಸಾಬ್', 'ಸೀತಾ ರಾಮಂ' ಸೇರಿದಂತೆ ಹಲವು ಸಿನಿಮಾಗಳಿಗೆ ವಿನೋದ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇನ್ನು 'RRR' ಚಿತ್ರಕ್ಕೆ ಎ. ಶೀಕರ್ ಪ್ರಸಾದ್ ಸಂಕಲನಕಾರರಾಗಿದ್ದರು. ಆದರೆ ಮಹೇಶ್ ಬಾಬು ಚಿತ್ರದಲ್ಲಿ ಸಂಕಲನಕಾರ ಬದಲಾಗುತ್ತಾರೆ ಎನ್ನಲಾಗ್ತಿದೆ.
ಮೌಳಿ ಮುಂದಿನ ಚಿತ್ರಕ್ಕೆ ಪೌರಾಣಿಕ ನಂಟು ಇರುತ್ತದೆ. ಹನುಮಂತನನಿಂದ ಪ್ರೇರಣೆಗೊಂಡು ಮಹೇಶ್ ಬಾಬು ಪಾತ್ರ ಡಿಸೈನ್ ಮಾಡಿದ್ದಾರೆ ಎನ್ನುವ ಗುಸುಗುಸು ಈ ಹಿಂದೆ ಕೇಳಿಬಂದಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಒಟ್ನಲ್ಲಿ ಮೌಳಿ ಬಹಳ ವಿಭಿನ್ನವಾಗಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಾರೆ ಎನ್ನುವುದು ಗೊತ್ತಾಗುತ್ತಿದೆ. ಇಲ್ಲಿನ ನೇಟಿವಿಟಿ ಜೊತೆಗೆ ಹಾಲಿವುಡ್ ಮಂದಿ ಕೂಡ ಮೆಚ್ಚುವಂತಹ ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರೆ.

'RRR' ಸಿನಿಮಾ ಮಾಡಿ ರಾಜಮೌಳಿ ಹಾಲಿವುಡ್ ಫಿಲ್ಮ್ ಮೇಕರ್ಸ್ ಗಮನ ಸೆಳೆದಿದ್ದರು. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಲವರು ಮೌಳಿ ಪ್ರತಿಭೆಯನ್ನು ಕೊಂಡಾಡಿದ್ದರು. ಹಾಗಾಗಿ ಸಹಜವಾಗಿಯೇ ಮುಂದಿನ ಸಿನಿಮಾ ಹಾಲಿವುಡ್ ಸ್ಟ್ಯಾಂಡರ್ಡ್‌ಗೆ ತಕ್ಕನಾಗಿ ಇರುತ್ತದೆ. ಡಿಸ್ನಿ ಹಾಗೂ ಸೋನಿ ಸಂಸ್ಥೆಗಳ ಜೊತೆಗೂ ರಾಜಮೌಳಿ ಚರ್ಚೆ ನಡೆಸುತ್ತಿದ್ದು ಬಹಳ ದೊಡ್ಡಮಟ್ಟದಲ್ಲಿ ಮುಂದಿನ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಈಗಾಗಲೇ ವಿಜಯೇಂದ್ರ ಪ್ರಸಾದ್ ಸಿನಿಮಾ ಕತೆಯ ಬಗ್ಗೆ ಮಾತನಾಡಿದ್ದಾರೆ. ಮಹೇಶ್- ಮೌಳಿ ಸಿನಿಮಾ ಕತೆಯನ್ನು ಮುಂದಿನ ಚಿತ್ರಕ್ಕೆ ಕೊಂಡೊಯ್ಯುವಂತೆ ಕ್ಲೈಮ್ಯಾಕ್ಸ್ ಪ್ಲ್ಯಾನ್ ಮಾಡಿರೋದಾಗಿಯೂ ಹೇಳಿದ್ದರು. ಅಂದರೆ ಚಿತ್ರದ ಸೀಕ್ವೆಲ್ ಕೂಡ ಬರುವ ಸಾಧ್ಯತೆಯಿದೆ ಎಂದಿದ್ದರು. ಇನ್ನು 'RRR' ಬಗ್ಗೆಯೂ ಮಾತನಾಡಿದ್ದರು. ಆ ಚಿತ್ರವನ್ನು ಮೌಳಿ ಬದಲು ಬೇರೆ ಯಾರಾದರೂ ನಿರ್ದೇಶನ ಮಾಡುತ್ತಾರೆ ಎಂದಿದ್ದರು. ಮಹೇಶ್ ಬಾಬು ಸಿನಿಮಾ ಬಳಿಕ ಜಕ್ಕಣ್ಣ ತನ್ನ ಕನಸಿಕ ಮಹಾಭಾರತ ಸಿನಿಮಾ ಮಾಡುತ್ತಾರೆ ಎಂದು ಸುಳಿವು ನೀಡಿದ್ದರು.


Click it and Unblock the Notifications











