SSMB29; ಮೌಳಿ ಚಿತ್ರಕ್ಕೆ ಮಹೇಶ್ ತಂದೆಯಾಗಿ ತಮಿಳು ನಟ ಆಯ್ಕೆ; ಓಟಿಟಿ ಡೀಲ್ ದಾಖಲೆ!
ಎಸ್. ಎಸ್ ರಾಜಮೌಳಿ ನಿರ್ದೇಶನದ ಪ್ಯಾನ್ ವರ್ಲ್ಡ್ ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಯಾವುದೇ ಸುಳಿವುದು ಕೊಡದೇ ಚಿತ್ರದ ಚಿತ್ರೀಕರಣ ನಡೆಸಲಾಗುತ್ತಿದೆ. ಬಹುಕೋಟಿ ವೆಚ್ಚದದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಚಿತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ.
ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗುತ್ತಿಲ್ಲ. ಈ ಹಿಂದೆ ಹೊಸ ವರ್ಷದ ಸಂಭ್ರಮದಲ್ಲಿ ಹೈದರಾಬಾದ್‌ನಲ್ಲಿ ಸದ್ದಿಲ್ಲದೇ ಮುಹೂರ್ತ ನೆರವೇರಿಸಿ ಚಿತ್ರೀರಣ ಆರಂಭಿಸಲಾಗಿತ್ತು. ಬಳಿಕ ಒರಿಸ್ಸಾದಲ್ಲಿ ಒಂದು ಶೆಡ್ಯೂಲ್ ಮುಗಿಸಿದ್ದರು.

ಇದೀಗ ಮತ್ತೊಂದು ಶೆಡ್ಯೂಲ್ ಚಿತ್ರೀಕರಣಕ್ಕೆ ಜಕ್ಕಣ್ಣ ಪ್ಲ್ಯಾನ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಮಿಳು ನಟ ಚಿಯಾನ್ ವಿಕ್ರಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಕೇಳಿಬರುತ್ತಿತ್ತು. ಅದು ನಟ ಮಹೇಶ್ ಬಾಬು ತಂದೆಯ ಪಾತ್ರ ಎನ್ನಲಾಗ್ತಿದ್ದು ಇದೀಗ ಮಾಧವನ್ ಆಯ್ಕೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ವಿಕ್ರಂ ಒಪ್ಪಿಕೊಳ್ಳದ ಕಾರಣ ಆ ಅವಕಾಶ ಮಾಧವನ್ ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.
ಒಂದ್ಕಾಲದಲ್ಲಿ ಚಾಕಲೇಟ್ ಹೀರೊ ಆಹಿ ಮಿಂಚಿದವರು ಮಾಧವನ್. ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿರುವುದು ಹೆಚ್ಚು. 3 ವರ್ಷಗಳ ಹಿಂದೆ 'ರಾಕೆಟ್ರಿ' ಚಿತ್ರದ ಮೂಲಕ ಕಮಾಲ್ ಮಾಡಿದ್ದರು. ಚಿತ್ರದಲ್ಲಿ ನಂಬಿ ನಾರಾಯಣನ್ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿತ್ತು.

ಮಾಧವನ್ ಈಗ ಹೀರೊ ಆಗಿ ಮಾತ್ರವಲ್ಲ ಪೋಷಕ ಪಾತ್ರಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಇಷ್ಟು ಬೇಗ ನಾಯಕನ ತಂದೆ ಪಾತ್ರದಲ್ಲಿ ನಟಿಸುವುದು ಬೇಡ ಎಂದು ವಿಕ್ರಂ ನಿರ್ಧರಿಸಿ ಚಿತ್ರಕ್ಕೆ ನೋ ಹೇಳಿರಬಹುದು. ಆದರೆ ಮಾಧವನ್ ಆ ಪಾತ್ರ ಒಪ್ಪಿ ನಟಿಸಲು ಅಣಿಯಾಗುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ದಾಖಲೆ ಮೊತ್ತಕ್ಕೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಚರ್ಚೆ ನಡೀತಿದೆ. ಹೇಳಿಕೇಳಿ ಇದು ಪ್ಯಾನ್ ವರ್ಲ್ಡ್ ಸಿನಿಮಾ. ಅದಕ್ಕೆ ತಕ್ಕಂತೆ ಡೀಲ್ ಕುದುರಿಸಿದ್ದಾರೆ. ಇನ್ನು ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಹಾಲಿವುಡ್ ತಂತ್ರಜ್ಞರು ಕೂಡ ಈ ಬಾರಿ ರಾಜಮೌಳಿ ಜೊತೆ ಕೈಜೋಡಿಸುತ್ತಿದ್ದಾರೆ.
ದೇಶ ವಿದೇಶಗಳಲ್ಲಿ ಸಾಗುವ ಸಾಹಸಮಯ ಕಥೆ ಈ ಚಿತ್ರದಲ್ಲಿದೆ. ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಈ ಬಾರಿ ಮೌಳಿ ತಮ್ಮ ತಂಡದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಅದ್ಭುತ ಸಿನಿಮಾ ಕಟ್ಟಿಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.


Click it and Unblock the Notifications











