ಮೌಳಿ ಚಿತ್ರಕ್ಕಾಗಿ ದೇಹ ಹುರಿಗಟ್ಟಿದ ಮಹೇಶ್ ಬಾಬು, ಹೊಸ ಲುಕ್‌ನಲ್ಲಿ ಟಾಲಿವುಡ್ ಪ್ರಿನ್ಸ್ ಖದರ್
'RRR' ಬಳಿಕ ರಾಜಮೌಳಿ ಪ್ಯಾನ್ ವರ್ಲ್ಡ್ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಹೀರೊ ಆಗಿ ಮಹೇಶ್ ಬಾಬು ನಟಿಸುವುದು ಪಕ್ಕಾ ಆಗಿದೆ. 'ಗುಂಟೂರು ಖಾರಂ' ಸಿನಿಮಾ ಬಳಿಕ ಮಹೇಶ್ ಬಾಬು ವಿದೇಶಕ್ಕೆ ತೆರಳಿದ್ದರು. ಇದೀಗ ಟಾಲಿವುಡ್ ಪ್ರಿನ್ಸ್ ಹೊಸ ಲುಕ್ ವೈರಲ್ ಆಗುತ್ತಿದೆ. ಇದು ಮೌಳಿ ಚಿತ್ರಕ್ಕಾಗಿ ಮಹೇಶ್ ಬಾಬು ಅವತಾರ ಎನ್ನಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ಟೀಶರ್ಟ್, ಜೀನ್ಸ್ ತೊಟ್ಟು ಮುಖಕ್ಕೆ ಮಾಸ್ಕ್ ಧರಿಸಿ ಮಹೇಶ್ ಬಾಬು ಕಾಣಿಸಿಕೊಂಡಿರುವಂತೆ ಫೋಟೊವೊಂದು ವೈರಲ್ ಆಗುತ್ತಿದೆ. ಜಕ್ಕಣ್ಣ ಚಿತ್ರಕ್ಕಾಗಿ ದೇಹ ಹುರಿಗೊಳಿಸಿ ಮಹೇಶ್ ಬಾಬು ಈ ರೀತಿ ಆಗಿದ್ದಾರೆ ಎಂದು ಚರ್ಚೆ ನಡೀತಿದೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ SSMB29 ಅಂತ್ಲೇ ಚಿತ್ರವನ್ನು ಕರೆಯಲಾಗುತ್ತಿದೆ. ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಈಗಾಗಲೇ ತೆರೆಮರೆಯಲ್ಲಿ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಸ್ಟಾರ್ ಕಾಸ್ಟ್ ಬಗ್ಗೆಯೂ ಚರ್ಚೆ ನಡೀತಿದೆ. 'ಗುಂಟೂರು ಖಾರಂ' ಸಿನಿಮಾ ರಿಲೀಸ್ ಬೆನ್ನಲ್ಲೇ ಮಹೇಶ್ ಬಾಬು ಒಂಟಿಯಾಗಿ ಜರ್ಮನಿ ಪ್ರವಾಸ ಕೈಗೊಂಡಿದ್ದರು.
10 ದಿನಗಳಿಂದ ಮಹೇಶ್ ಬಾಬು ಜರ್ಮನಿಯಲ್ಲಿ ಉಳಿದುಕೊಂಡಿದ್ದಾರೆ. ಜರ್ಮನಿಯ ಬಾಡೆನ್ ಎನ್ನುವಲ್ಲಿ ಟಾಲಿವುಡ್ ಪ್ರಿನ್ಸ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಾಡೆನ್ ಎನ್ನುವ ಪ್ರ್ಯಾಂತ್ಯದಲ್ಲಿ ಉಳಿದುಕೊಂಡಿದ್ದು ಇತ್ತೀಚೆಗೆ ಡಾಕ್ಟರ್ ಹ್ಯಾರಿ ಕೋನಿಂಗ್ ಭೇಟಿ ಮಾಡಿದ್ದರು. ಆತ ಬಾಡಿ ಫಿಟ್ನೆಸ್‌ಗೆ ಸಂಬಂಧಿಸಿದ ಡಾಕ್ಟರ್ ಆಗಿದ್ದಾರೆ. ಇಬ್ಬರು ಬ್ಲ್ಯಾಕ್ ಫಾರೆಸ್ಟ್‌ನಲ್ಲಿ ಟ್ರೆಕ್ಕಿಂಗ್ ಮಾಡಿದ್ದಾರೆ ಎನ್ನಲಾಗಿತ್ತು. ರಾಜಮೌಳಿ ಚಿತ್ರಕ್ಕಾಗಿ ದೇಹ ಹುರಿಗೊಳಿಸಲು ಮಹೇಶ್ ಬಾಬು ಜರ್ಮನಿಗೆ ತೆರಳಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಡಾಕ್ಟರ್ ಹ್ಯಾರಿ ಕೋನಿಂಗ್ ಜೊತೆ ಬ್ಲ್ಯಾಕ್ ಫಾರೆಸ್ಟ್‌ನಲ್ಲಿ ಟ್ರೆಕ್ಕಿಂಗ್ ಮಾಡುತ್ತಿರುವುದಾಗಿ ಮಹೇಶ್ ಬಾಬು ಫೋಟೊಗಳನ್ನು ಶೇರ್ ಮಾಡಿದ್ದರು. ಇದೆಲ್ಲದರ ಬೆನ್ನಲ್ಲೇ ಇದೀಗ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗ್ತಿದೆ. ಇದು ಒರಿಜಿನ್ ಫೋಟೊನಾ? ಅಥವಾ AI ಫೋಟೊನಾ? ಎನ್ನುವ ಅನುಮಾನ ಕೆಲವರದ್ದು.
ಏಪ್ರಿಲ್ 9ರಂದು ರಾಜಮೌಳಿ ಹಾಗೂ ಮಹೇಶ್ ಬಾಬು ಕ್ರೇಜಿ ಕಾಂಬಿನೇಷನ್ ಸಿನಿಮಾ ಶುರುವಾಗುವ ಬಗ್ಗೆ ಸುಳಿವು ಸಿಗುತ್ತಿದೆ. 3 ವರ್ಷಗಳ ಕಾಲ ಈ ಚಿತ್ರಕ್ಕಾಗಿ ಟಾಲಿವುಡ್ ಪ್ರಿನ್ಸ್ ಮೀಸಲಿಟ್ಟಿದ್ದಾರೆ ಎನ್ನಲಾಗ್ತಿದೆ. ಜಕ್ಕಣ್ಣ ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. SSMB29 ಕಥೆ ಬೇರೆ ಬೇರೆ ದೇಶಗಳಲ್ಲಿ ನಡೆಯಲಿದೆ. 'ಇಂಡಿಯಾನ ಜೋನ್ಸ್' ಮಾದರಿಯ ಆಕ್ಷನ್ ಅಡ್ವೆಂಚರಸ್ ಸಿನಿಮಾ ಇದು ಎನ್ನುವ ಮಾತುಗಳು ಕೇಳಿಬರ್ತಿದೆ.
ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ SSMB29 ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. 1000 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುವ ಬಗ್ಗೆ ಚರ್ಚೆ ನಡೀತಿದೆ. ಇದಕ್ಕಾಗಿ ಹಾಲಿವುಡ್ ಸಂಸ್ಥೆ ಜೊತೆ ರಾಜಮೌಳಿ ಕೈಜೋಡಿಸುವ ಊಹಾಪೋಹ ಇದೆ. ಚಿತ್ರದಲ್ಲಿ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ರಾಜಮೌಳಿ ನಿರ್ದೇಶನದ 'RRR' ಸಿನಿಮಾ 2 ವರ್ಷಗಳ ಹಿಂದೆ ದಾಖಲೆ ಬರೆದಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಅದೇ ಕಾರಣಕ್ಕೆ ಈ ಬಾರಿ ಅದಕ್ಕಿಂತ ದೊಡ್ಡ ಪ್ರಾಜೆಕ್ಟ್‌ಗೆ ಮೌಳಿ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications











