SSMB29; ಮೌಳಿ- ಮಹೇಶ್ ಸಿನಿಮಾ ಮೇಕಿಂಗ್ ವೀಡಿಯೋ ಲೀಕ್; ಪ್ರಿನ್ಸ್ ಸ್ಟೈಲ್ ಚಿಂದಿ
ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲೇ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದೆ.
ಪ್ಯಾನ್ ಇಂಡಿಯಾ ಬಿಟ್ಟು ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡಲು ಜಕ್ಕಣ್ಣ ಮುಂದಾಗಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿದೆ. ಇದು ಮಹೇಶ್ ಬಾಬು ನಟನೆಯ 29 ಸಿನಿಮಾ. ಹಾಗಾಗಿ ಸದ್ಯಕ್ಕೆ SSMB29 ಎಂದು ಕರೆಯಲಾಗುತ್ತಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಪ್ಲ್ಯಾನ್ ನಡೀತಿದೆ.

ದೊಡ್ಡ ಸಿನಿಮಾಗಳ ಫೋಟೊ, ವೀಡಿಯೋ ಲೀಕ್ ಆಗಿ ಸಂಕಷ್ಟ ಎದುರಾಗುತ್ತಿರುತ್ತದೆ. ಇದೇ ಕಾರಣಕ್ಕೆ ರಾಜಮೌಳಿ ಬಹಳ ಎಚ್ಚರಿಕೆ ವಹಿಸಿದ್ದರು. ಸೆಟ್‌ಗೆ ಯಾರು ಮೊಬೈಲ್ ಕೊಂಡೊಯ್ಯದಂತೆ ಹೇಳಿದ್ದರು. ಕಲಾವಿದರು, ತಂತ್ರಜ್ಞರ ಜೊತೆಗೆ ಈ ಬಗ್ಗೆ ಒಪ್ಪಂದ ಸಹ ಮಾಡಿಕೊಂಡಿದ್ದರು. ಆದರೆ ಅದೆಲ್ಲವನ್ನು ಮೀರಿ ಇದೀಗ ಚಿತ್ರದ ಮೇಕಿಂಗ್ ವೀಡಿಯೋ ವೈರಲ್ ಆಗುತ್ತಿದೆ. ಲಾರಿ ರೀತಿಯ ವಾಹನದಲ್ಲಿ ಕೂತು ಯಾರೂ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವುದು ಗೊತ್ತಾಗುತ್ತಿದೆ.
ವ್ಯಕ್ತಿಯೊಬ್ಬ ವೀಲ್‌ಚೇರ್‌ನಲ್ಲಿ ಕೂತಿದ್ದಾನೆ. ಖಾಸಗಿ ಭದ್ರತಾ ಸಿಬ್ಬಂದಿ ಮಹೇಶ್ ಬಾಬುನ ಹಿಡಿದು ಮುಂದೆ ಕರೆದುಕೊಂಡು ಬರ್ತಾರೆ. ಸೂಪರ್ ಸ್ಟಾರ್ ತನ್ನದೇ ಸ್ಟೈಲ್ ಆಗಿ ನಡೆದು ಬರುವುದನ್ನು ವೀಡಿಯೋದಲ್ಲಿ ನೋಡಬಹುದು. ಮಹೇಶ್ ಬಾಬು ಸ್ಟೈಲ್ ನೋಡಿ ಸಿಂಹ ನಡೆದು ಬಂದಂತೆ ಇದೆ ಎಂದು ಅಭಿಮಾನಿಗಳು ವೀಡಿಯೋ ವೈರಲ್ ಮಾಡುತ್ತಿದ್ದಾರೆ. 'ಟಾಕ್ಸಿಕ್' ರೀತಿಯಲ್ಲೇ ಈ ಚಿತ್ರವನ್ನು ಕೂಡ ರಾಜಮೌಳಿ ತೆಲುಗು ಜೊತೆಗೆ ಇಂಗ್ಲೀಷ್ ಭಾಷೆಗಳಲ್ಲಿ ಚಿತ್ರೀಕರಿಸುತ್ತಿದ್ದಾರೆ ಎನ್ನಲಾಗ್ತಿದೆ. 1000 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ ಸಿನಿಮಾ ಸಿದ್ಧವಾಗುತ್ತದೆ ಎನ್ನುವ ಚರ್ಚೆ ನಡೀತಿದೆ.
'RRR' ಸಿನಿಮಾ ಬಳಿಕ ಬಹಳ ಗ್ಯಾಪ್ ತಗೊಂಡು ಜಕ್ಕಣ್ಣ SSMB29 ಸಿನಿಮಾ ಕಟ್ಟಿ ಕೊಡುತ್ತಿದ್ದಾರೆ. 'RRR' ಸಿನಿಮಾ ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡಿತ್ತು. ಹಾಗಾಗಿ ಹಾಲಿವುಡ್ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿ ಈ ಬಾರಿ ಮೌಳಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ಸಾಗಲಿದೆ. ಇಂಡಿಯಾನಾ ಜೋನ್ಸ್ ರೀತಿಯ ಆಕ್ಷನ್ ಅಡ್ವೆಂಚರ್ಸ್ ಸಿನಿಮಾ ಇದು ಎಂದು ಸ್ವತಃ ರಾಜಮೌಳಿ ಹೇಳಿಕೊಂಡಿದ್ದಾರೆ. ಸದ್ಯ ಒಡಿಸ್ಸಾದ ಕೊರಾಪುಟ್ ಭಾಗದಲ್ಲಿ ಚಿತ್ರೀಕರಣ ನಡೀತಿದೆ ಎಂದು ಹೇಳಲಾಗ್ತಿದೆ.
ಸದ್ಯಕ್ಕೆ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗುವ ಸಾಧ್ಯತೆ ಇಲ್ಲ. ಬಹಳ ದೊಡ್ಡದಾಗಿ ಅದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಟೀಸರ್ ಸಮೇತ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆಯಿದೆ. ಇನ್ನು ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಬಿಟ್ಟು ಬೇರೆ ಯಾರೆಲ್ಲಾ SSMB29 ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ.
ಚಿತ್ರದಲ್ಲಿ ಮಹೇಶ್ ಬಾಬು ಲುಕ್ ಬಗ್ಗೆ ಕೂಡ ಬಹಳ ಕುತೂಹಲ ಮೂಡಿದೆ. ಪಾತ್ರಕ್ಕಾಗಿ ದೇಹ ದಂಡಿಸಿ ಟಾಲಿವುಡ್ ಪ್ರಿನ್ಸ್ ತಯಾರಿ ನಡೆಸಿದ್ದಾರೆ. ಇನ್ನು ಜಕ್ಕಣ್ಣ ಸಿನಿಮಾಗಳಿಗೆ ಖಾಯಂ ಆಗಿ ಕೆಲಸ ಮಾಡುವವರೇ SSMB29 ಚಿತ್ರಕ್ಕೂ ಕೈ ಜೋಡಿಸಿದ್ದಾರೆ. ಹಾಲಿವುಡ್ ಸ್ಟುಡಿಯೋ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿ ಕೂಡ ದೊಡ್ಡದಾಗಿ ಸಿನಿಮಾ ರಿಲೀಸ್ ಮಾಡಲು ಜಕ್ಕಣ್ಣ ಮುಂದಾಗಿದ್ದಾರೆ.


Click it and Unblock the Notifications











