ಉದ್ಯಮಿ ಜೊತೆ ಮದುವೆ, ವಯಸ್ಸಿನ ಕುರಿತು ಚರ್ಚೆ ; ಅನುಷ್ಕಾ ಶೆಟ್ಟಿ ಖಂಡ ತುಂಡ ಉತ್ತರ
ನಿಜಾ ... ಸಿನಿಮಾ ಕಲಾವಿದರೆಂದ ಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.
ಯಾಕೆಂದರೆ ಹೀಗೆ ಹರಿದಾಡುವ ಸುದ್ದಿಗಳಲ್ಲಿ ಅರ್ಧಕ್ಕೆ ಅರ್ಧ ಸುಳ್ಳಾಗಿರುತ್ತಾವೆ. ಇನ್ನೂ ಕೆಲ ಒಮ್ಮೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದಲೇ ಕೆಲವರು ''ಫೇಕ್ ನ್ಯೂಸ್''ಗಳನ್ನು ತೇಲಿ ಬಿಡುತ್ತಾರೆ. ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ. ಹಾಗಂಥ ಪದೇ ಪದೇ ಕೆಣಕಿದರೆ ಕೆಲವರು ಸುಮ್ಮನೆ ಕೂಡ ಇರುವುದಿಲ್ಲ. ಪಿತ್ತ ನೆತ್ತಿಗೇರಿ ತರಾಟೆಯನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಅನುಷ್ಕಾ ಶೆಟ್ಟಿ.

ಹೌದು, ''ಅರುಂಧತಿ'', ''ದೇವಸೇನಾ'', ''ಭಾಗಮತಿ'' ರೀತಿಯ ಅದ್ಬುತ ಪಾತ್ರಗಳಿಗೆ ಜೀವತುಂಬಿ ಅನೇಕರ ಹೃದಯವನ್ನ ಗೆದ್ದವರು ಅನುಷ್ಕಾ ಶೆಟ್ಟಿ. ಮೊದಲಿಂದನೂ ವುಮೆನ್ ಓರಿಯೆಂಟೆಡ್ ಸಿನಿಮಾಗಳಿಗೆ ಮೊದಲ ಆದ್ಯತೆಯನ್ನ ನೀಡುತ್ತಾ ಬಂದ ಅನುಷ್ಕಾ ಶೆಟ್ಟಿ ಅವರ ಮದುವೆಯ ಕುರಿತು ಅವರ ಹೆತ್ತವರು ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಹಲವರು ಈ ವಿಚಾರದಲ್ಲಿ ವಿಪರೀತವಾಗಿ ತಲೆ ಬಿಸಿ ಮಾಡ್ಕೊಂಡಿದ್ದಾರೆ.
ಅದರಲ್ಲಿಯೂ ಪ್ರಭಾಸ್ ಜೊತೆ ಅನುಷ್ಕಾ ಶೆಟ್ಟಿ ಮದುವೆ ಮಾಡಿಸಬೇಕೆಂದು ಶಪಥವನ್ನು ಮಾಡಿರುವ ಒಂದು ದೊಡ್ಡ ವರ್ಗವೇ ಇದೆ. ಪ್ರಭಾಸ್ ಮತ್ತು ಅನುಷ್ಕಾ ಭೇಟಿಯಾಗುವುದನ್ನೇ ಕಾಯುವ ಇವರು ಇನ್ನೇನು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದ್ವೆ ನಡೆದೇ ಹೋಯಿತು ಎನ್ನುವಂತೆ ಆಗಾಗ ಡಿಜಿಟಲ್ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸುತ್ತಾರೆ. ಚರ್ಚೆಯನ್ನು ಮಾಡುತ್ತಾರೆ.
ಆದರೆ, ಹೀಗೆ ನಡೆಯುವ ಈ ಚರ್ಚೆಗೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಸೊಪ್ಪು ಹಾಕಲ್ಲ. ಹೀಗಾಗಿ ಕೆಲ ದಿನ ಸುಮ್ಮನಾಗುವ ಕೆಲವರು ಆ ನಂತರ ಅನುಷ್ಕಾ ಶೆಟ್ಟಿಯ ಮದುವೆಗೆ ಬೇರೆ ಗಂಡು ಹುಡುಕುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ದಿನಗಳಿಂದ ಅನುಷ್ಕಾ ಶೆಟ್ಟಿ ಉದ್ಯಮಿಯ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ ಮಾಧ್ಯಮಗಳಲ್ಲಿ ಕೂಡ ಅನುಷ್ಕಾ ಶೆಟ್ಟಿ ಮ್ಯಾರೇಜ್ ಸ್ಟೋರಿ ಪ್ರಸಾರವಾಗುತ್ತಿದೆ.
ತಮ್ಮ ಕುರಿತು ಕೇಳಿ ಬರುತ್ತಿರುವ ಈ ಅಂತೆ-ಕಂತೆಯ ಸುದ್ದಿಯನ್ನು ಕೇಳಿ, ನೋಡಿ ಸದ್ಯ ಅನುಷ್ಕಾ ಶೆಟ್ಟಿ ಕೆರಳಿದ್ದಾರೆ. ತಮ್ಮ ತಂಡದ ಮೂಲಕ ಖಡಕ್ ಉತ್ತರವನ್ನು ನೀಡಿದ್ಧಾರೆ.

ಅನುಷ್ಕಾ ಶೆಟ್ಟಿ ತಂಡದ ಪ್ರಕಟಣೆ
ಯಾರದಾದರೂ ಒಬ್ಬ ವ್ಯಕ್ತಿಯ ವೈಯಕ್ತಿಕ ಜೀವನವನ್ನು ನಿಮ್ಮ ದೈನಂದಿನ ಮುಖ್ಯಾಂಶಗಳಾಗಿ ಪರಿವರ್ತಿಸುವ ಮೊದಲು ಅಧಿಕೃತ ಮಾಹಿತಿಗಾಗಿ ಕಾಯಿರಿ. ಪರಿಶೀಲಿಸದ ಮಾಹಿತಿಯನ್ನು ಊಹಾಪೋಹ ಮಾಡುವುದು, ಊಹಿಸುವುದು ಮತ್ತು ಪದೇ ಪದೇ ಪ್ರಕಟಿಸುವುದು ಪತ್ರಿಕೋದ್ಯಮವಲ್ಲ. ಸತ್ಯಾಂಶವನ್ನು ವರದಿ ಮಾಡುವುದಕ್ಕೂ ಮತ್ತು ವದಂತಿಗಳನ್ನು ನಂಬಿ ಬದುಕುವುದರ ನಡುವೆ ಒಂದು ಗೆರೆಯಿದೆ, ಆದರೆ ಈಗ ಆ ಗೆರೆಯನ್ನು ಸಂಪೂರ್ಣವಾಗಿ ಪಾರು ಮಾಡಲಾಗಿದೆ.
ಎಲ್ಲಕ್ಕಿಂತ ಹೆಚ್ಚು ನಿರಾಸೆ ಮೂಡಿಸುವ ವಿಷಯವೆಂದರೆ ಅವರ ವಯಸ್ಸಿನ ಬಗ್ಗೆ ನಡೆಯುತ್ತಿರುವ ಅನಗತ್ಯ ಚರ್ಚೆ. ಪ್ರತಿ ಪೋಸ್ಟ್‌ನಲ್ಲೂ "44" ಎಂಬ ಸಂಖ್ಯೆಯನ್ನು ಅದು ಯಾವುದೋ ವಿವಾದಾತ್ಮಕ ಅಥವಾ ನಿರ್ಣಾಯಕ ಅಂಶವೆಂಬಂತೆ ಏಕೆ ಹೈಲೈಟ್ ಮಾಡಲಾಗುತ್ತಿದೆ? ಹೀಗೆ ಪದೇ ಪದೇ ವಯಸ್ಸನ್ನು ಉಲ್ಲೇಖಿಸುವುದು ಪರೋಕ್ಷವಾಗಿ ವಯಸ್ಸಿನ ಅವಹೇಳನ ಮಾಡಿದಂತೆ ಭಾಸವಾಗುತ್ತಿದೆ. ಒಂದು ವೇಳೆ ವಯಸ್ಸು ಅಷ್ಟೊಂದು ದೊಡ್ಡ ವಿಚಾರವಾಗಿದ್ದರೆ, ನಟರ ವಿಷಯ ಬಂದಾಗ ಇದೇ ಉತ್ಸಾಹ ಎಲ್ಲಿ ಹೋಗುತ್ತದೆ? ಮಹಿಳೆಯರ ವಿಷಯದಲ್ಲಷ್ಟೇ ಈ ಧೋರಣೆ ಏಕೆ ?
ಅನುಷ್ಕಾ ಶೆಟ್ಟಿ ಯಾವುದೇ ರೀತಿಯ ಪಿಆರ್ ಸ್ಟಂಟ್ ಮಾಡದೇ, ನಿರಂತರ ಸೋಶಿಯಲ್ ಮೀಡಿಯಾ ಪ್ರಚಾರದ ಮೇಲೆ ಅವಲಂಬಿತರಾಗದೆ, ತಮ್ಮ ಘನತೆ, ಪ್ರತಿಭೆ ಮತ್ತು ಸೌಜನ್ಯದಿಂದ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದಾರೆ. ಖಾಸಗಿ ಮತ್ತು ಸರಳ ಜೀವನವನ್ನು ಇಷ್ಟಪಡುವ ಅವರಂತಹ ವ್ಯಕ್ತಿಯನ್ನು ಗುರಿಯಾಗಿಸುವುದು ಇನ್ನೂ ಹೆಚ್ಚಿನ ಅನ್ಯಾಯ. ಪ್ರತಿಯೊಬ್ಬರೂ ತಮ್ಮ ಜೀವನವನ್ನು 24/7 ಸಾರ್ವಜನಿಕರ ಕಣ್ಣ ಮುಂದೆಯೇ ಇಡಲು ಬಯಸುವುದಿಲ್ಲ, ಮತ್ತು ಆ ಆಯ್ಕೆಗೆ ಗೌರವ ಸಿಗಲೇಬೇಕು.
ಮದುವೆ ಅನ್ನುವಂಥದ್ದು ತೀರ ವೈಯಕ್ತಿಕ ವಿಚಾರ. ಅದು ಬ್ರೇಕಿಂಗ್ ನ್ಯೂಸ್ ಅಲ್ಲ. ಇದು ಟ್ರೆಂಡ್ ಅಲ್ಲ. ದಯವಿಟ್ಟು ಅಧಿಕೃತವಾಗಿಲ್ಲದೆ ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ. ನಾಯಕರ ಜತೆ ನಾಯಕಿಯರನ್ನು ಸಮಾನವಾಗಿ ಗೌರವಿಸಿ.


Click it and Unblock the Notifications











