'ಪುಷ್ಪ'ರಾಜ್ ತರ ಆಡುತ್ತಿರುವ ಶಾಲಾ ಮಕ್ಕಳು; ಮುಖ್ಯ ಶಿಕ್ಷಕಿಗೆ ಫುಲ್ ಟೆನ್ಷನ್
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದು ಸೂಪರ್ ಹಿಟ್ ಆಗಿದೆ. ಪಾರ್ಟ್- 2 ಬರೋಬ್ಬರಿ 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಪುಷ್ಪರಾಜ್ ಅವತಾರದಲ್ಲಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಿ ಮಾಸ್ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪಾರ್ಟ್- 3 ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಫಹಾದ್ ಫಾಸಿಲ್, ಧನಂಜಯ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ಮಿಂಚಿದ್ದರು. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರಕ್ಕೆ ದೇವಿ ಶ್ರೀಪ್ರಸಾದ್ ಸಂಗೀತ ನೀಡಿದ್ದರು. ಇನ್ನು ಚಿತ್ರದ ಆಲ್ಬಲ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು.

ರಕ್ತಚಂದನ ಸ್ಮಗ್ಲರ್ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿ ಗೆದ್ದಿದ್ದರು. ಬಡ ಕುಟುಂಬದ ಪುಷ್ಪರಾಜ್ ಸಣ್ಣ ಸ್ಮಗ್ಲರ್ ಆಗಿ ಬಳಿಕ ಸಿಂಡಿಕೇಟ್ ಮೇಲೆ ಹಿಡಿತ ಸಾಧಿಸುವ ಕಥೆ ಮೊದಲ ಭಾಗದಲ್ಲಿತ್ತು. ದೊಡ್ಡ ಸ್ಮಗ್ಲರ್ ಆಗಿ ಬೆಳೆದ ಪುಷ್ಪರಾಜ್ ಮುಂದೆ ಹೇಗೆಲ್ಲಾ ಆರ್ಭಟ ನಡೆಸುತ್ತಾನೆ ತನ್ನ ಪತ್ನಿಯ ಸಣ್ಣ ಆಸೆ ನೆರವೇರಿಸಲು ಏನೆಲ್ಲಾ ಮಾಡ್ತಾರೆ, ಪೊಲೀಸ್ ಆಫೀಸರ್ ಶೇಖಾವತ್ ಜೊತೆಗಿನ ಏಟು ಎದಿರೇಟು ಹೇಗಿರುತ್ತದೆ ಎನ್ನುವುದು 2ನೇ ಭಾಗ.
ಪುಷ್ಪರಾಜ್ ಚಿತ್ರಕ್ಕಾಗಿ ವಿಭಿನ್ನ ಗೆಟಪ್, ಹೇರ್‌ಸ್ಟೈಲ್, ಕಾಸ್ಟ್ಯೂಮ್, ಮ್ಯಾನರಿಸಂನಿಂದ ಅಲ್ಲು ಅರ್ಜುನ್ ಗಮನ ಸೆಳೆದಿದ್ದರು. ಅದು ಹಿಟ್ ಆಗಿತ್ತು. ಆದರೆ ಈಗ ಪುಷ್ಪರಾಜ್ ಸಿನಿಮಾ ನೋಡಿ ಶಾಲಾ ಮಕ್ಕಳು ಹಾಳಾಗಿದ್ದಾರೆ ಎಂದು ತೆಲಂಗಾಣದ ಯೂಸುಫ್‌ಗುಡ ಹೈಸ್ಕೂಲ್ ಮುಖ್ಯ ಶಿಕ್ಷಕಿ ಅಸಮಾಧಾನ ಹೊರ ಹಾಕಿದ್ದಾರೆ. ಸರ್ಕಾರ ಇಂತಹ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೇಗೆ ಅವಕಾಶ ಕೊಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಶಾಲೆಯ ಅರ್ಧದಷ್ಟು ಮಕ್ಕಳು 'ಪುಷ್ಪ' ಸಿನಿಮಾ ನೋಡಿ ಹಾಳಾಗಿದ್ದಾರೆ. ಮಕ್ಕಳ ಮಾತಿನ ಶೈಲಿ, ಹೇರ್‌ಸ್ಟೈಲ್, ಡ್ರೆಸ್ಸಿಂಗ್ ಸ್ಟೈಲ್ ಪುಷ್ಪರಾಜ್ ಪಾತ್ರದಿಂದ ಬಹಳ ಇನ್ಫುಯೆನ್ಸ್ ಆಗಿದೆ. ಪುಷ್ಪರಾಜ್ ರೀತಿ ಮಕ್ಕಳು ಆಡುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ಕೇಳುತ್ತಿಲ್ಲ, ಈಗ ಅದೇ ಸ್ಟೈಲ್, ಟ್ರೆಂಡ್ ಎನ್ನುತ್ತಿದ್ದಾರೆ. ಈ ಸಿನಿಮಾ ನೋಡಿ ಮಕ್ಕಳು ಹಾಳಾದರು, ಸಿನಿಮಾ ಮಾಡುವುದು ಮುಖ್ಯವಲ್ಲ, ಅದನ್ನು ಜನರ ಬಳಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎನ್ನುವಂತೆ ಸೆನ್ಸಾರ್ ಮಂಡಳಿ ನಡೆದುಕೊಳ್ಳಬೇಕು. ಸೆನ್ಸಾರ್ ಮಂಡಳಿ ಇಂತಹ ಸಿನಿಮಾಗಳಿಗೆ ಹೇಗೆ ಸರ್ಟಿಫಿಕೇಟ್ ನೀಡುತ್ತಾರೆ? ಎಂದು ಅವರು ಬೇಸರ ಹೊರ ಹಾಕಿದ್ದಾರೆ.
ಸದ್ಯ ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೀತಿದೆ. ಕೆಲವರು ಶಾಲಾ ಮುಖ್ಯ ಶಿಕ್ಷಕಿ ವಾದವನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ಪುಷ್ಪ' ಸಿನಿಮಾ ಬಂದಾಗಲೇ ಇದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ. ಒಬ್ಬ ಸ್ಮಗ್ಲರ್‌ನನ್ನು ಹೀರೊ ರೀತಿ ಬಿಂಬಿಸುವುದು ಎಷ್ಟು ಸರಿ ಎಂದು ಕೆಲವರು ಟೀಕಿಸಿದ್ದರು. ಆದರೆ ಚಿತ್ರತಂಡ ಅದಕ್ಕೆ ಕ್ಯಾರೆ ಅನ್ನಲಿಲ್ಲ.
ಸದ್ಯ ಶಾಲಾ ಮುಖ್ಯಶಿಕ್ಷಕಿಯ ಆರೋಪವನ್ನು ಕೆಲವರು ಒಪ್ಪಲು ರೆಡಿಯಿಲ್ಲ. ನಿಜಕ್ಕೂ ಸಿನಿಮಾ ಪಾತ್ರಗಳು ಮಕ್ಕಳ ಮೇಲೆ ಅಷ್ಟು ಇನ್‌ಫ್ಲುಯೆನ್ಸ್ ಮಾಡುತ್ತಾ? ಒಂದು ವೇಳೆ ಅದೇ ಆಗಿದ್ದರೆ ಅಲ್ಲು ಅರ್ಜುನ್ ಒಳ್ಳೆ ಸಿನಿಮಾಗಳನ್ನು ಸಹ ಮಾಡಿದ್ದಾರೆ. 'ಸನ್ ಆಫ್ ಸತ್ಯಮೂರ್ತಿ' ರೀತಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಿಂದ ಮಕ್ಕಳು ಉತ್ತಮ ಪ್ರಜೆಗಳಾಗಿಬಿಟ್ರಾ? ಎಂದು ಕೇಳುತ್ತಿದ್ದಾರೆ.
ಇನ್ನು 'ಪುಷ್ಪ'- 2 ಸಿನಿಮಾ ಬಿಡುಗಡೆ ವೇಳೆ ಚಿತ್ರತಂಡಕ್ಕೆ ಭಾರೀ ಸಂಕಷ್ಟ ಎದುರಾಗಿತ್ತು. ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ನಡೆದಿತ್ತು. ಸಿನಿಮಾ ವೀಕ್ಷಿಸಲು ಬಂದಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಒಮ್ಮೆಲೆ ಮುಗಿಬಿದ್ದು ಈ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಒಬ್ಬ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಜೈಲಿಗೂ ಹೋಗುವಂತಾಯಿತು.


Click it and Unblock the Notifications











