OG Trailer: ಪವನ್ ಕಲ್ಯಾಣ್ ಪವರ್ ಪ್ಯಾಕ್ಡ್ 'OG' ಟ್ರೈಲರ್ ಚಿಂದಿ; ಫ್ಯಾನ್ಸ್ ದಿಲ್‌ಖುಷ್
ಪವನ್ ಕಲ್ಯಾಣ್ ನಟನೆಯ 'OG' ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳಿದ್ದಾರೆ. ಈ ವಾರವೇ ಸಿನಿಮಾ ತೆರೆಗೆ ಬರ್ತಿದೆ. ಈ ಗ್ಯಾಂಗ್‌ಸ್ಟರ್ ಸಿನಿಮಾ ಟ್ರೈಲರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊಂಚ ತಡವಾಗಿಯೇ ಟ್ರೈಲರ್ ಬಂದಿದ್ದು ಅಭಿಮಾನಿಗಳು ಮಾತ್ರ ಥ್ರಿಲ್ ಆಗಿದ್ದಾರೆ. ಮೊದಲ ನೋಟದಲ್ಲೇ ಟ್ರೈಲರ್ ಸಖತ್ ಕಿಕ್ ಕೊಡ್ತಿದೆ.
ಡಿವಿವಿ ದಾನಯ್ಯ ನಿರ್ಮಾಣದ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. 70-80ರ ದಶಕದ ಗ್ಯಾಂಗ್‌ಸ್ಟರ್ ಕಥೆ ಚಿತ್ರದಲ್ಲಿದೆ. ಓಜಸ್ ಗಂಭೀರ ಎಂಬ ಗ್ಯಾಂಗ್‌ಸ್ಟರ್ ಆಗಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಜಬರ್ದಸ್ತ್ ಎಲಿವೇಷನ್ ಸೀನ್ಸ್, ಆಕ್ಷನ್, ಗನ್ ಫೈರ್, ಖಡಕ್ ಡೈಲಾಗ್ಸ್ ಜೊತೆಗೆ 'OG' ಟ್ರೈಲರ್ ಧೂಳೆಬ್ಬಿಸಿದೆ. ತಮನ್ ಬಿಜಿಎಂ ಸಖತ್ತಾಗಿದೆ.

ಟ್ರೈಲರ್ ಪದೇ ಪದೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಾವು ಇದನ್ನು ಊಹಿಸಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಿಯಾಂಕ ಮೋಹನ್ ಚಿತ್ರದಲ್ಲಿ ಪವನ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವು ರಮೇಶ್, ಶ್ರಿಯಾ ರೆಡ್ಡಿ, ಸೌರವ್ ಲೋಕಿ, ಹರೀಶ್ ಉತ್ತಮನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕನ್ನಡ ನಟಿ ನೇಹಾ ಶೆಟ್ಟಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.
ಮುಂಬೈನಲ್ಲಿ ದೊಡ್ಡ ಗ್ಯಾಂಗ್‌ಸ್ಟರ್ ಆಗಿದ್ದ ಓಜಸ್ ಗಂಭೀರ 10 ವರ್ಷಗಳ ಕಾಲ ಕಣ್ಮರೆ ಆಗಿರುತ್ತಾನೆ. ಅಲ್ಲಿ ಓಮಿ ಭೌ ಎಂಬ ದುಷ್ಟನ ಉಪಟಳ ಹೆಚ್ಚಾದಾಗ ಆತನಿಗೆ ಸವಾಲ್ ಹಾಕಲು ಮತ್ತೆ ಮುಂಬೈಗೆ ಬರ್ತಾನೆ. ಮುಂದೇನು ಎನ್ನುವುದು ಸಿನಿಮಾ ಕಥೆ. ಫ್ಯಾಮಿಲಿ ಎಮೋಷನ್ ಜೊತೆಗೆ ಖಡಕ್ ಆಕ್ಷನ್ ಟ್ರೀಟ್ ಕೊಡೋಕೆ ಸುಜಿತ್ ಸಜ್ಜಾಗಿದ್ದಾರೆ. ಕನ್ನಡ ನಟ ಭಜರಂಗಿ ಲೋಕಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ 'OG' ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಭಾರೀ ಮಳೆಯ ನಡುವೆ ಅಭಿಮಾನಿಗಳು ಕಾರ್ಯಕ್ರಮ ವೀಕ್ಷಿಸಿದ್ದರು. ವೇದಿಕೆಯಲ್ಲೇ ಟ್ರೈಲರ್ ಬಿಡುಗಡೆ ಮಾಡುವಂತೆ ಪವನ್ ಪಟ್ಟು ಹಿಡಿದಿದ್ದರು. ಡಿಐ ಆಗಿಲ್ಲದ ಕಾರಣ ತಡವಾಗುತ್ತದೆ ಎಂದು ಹೇಳಿದ್ದಕ್ಕೆ ಪವನ್ ಒಪ್ಪಲಿಲ್ಲ. ಡಿಐ ಇಲ್ಲದಿದ್ದರೂ ಪರವಾಗಿಲ್ಲ ಹಾಕಿ ಎಂದಿದ್ದರು. ವೇದಿಕೆಯಲ್ಲಿ ಟ್ರೈಲರ್ ಪ್ರದರ್ಶನ ಆಗಿದ್ದರೂ ಯೂಟ್ಯೂಬ್‌ನಲ್ಲಿ ಬಂದಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದರು. ಕಾಯಿಸಿ ಸತಾಯಿಸಿ ಕೊನೆಗೂ ಟ್ರೈಲರ್ ರಿಲೀಸ್ ಮಾಡಿದೆ ಚಿತ್ರತಂಡ.
ಲೇಟ್ ಆದರೂ ಟ್ರೈಲರ್ ಸೂಪರ್ ಎಂದು ಪವನ್ ಸ್ಟಾರ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡೋದು ಫಿಕ್ಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆದ ಬಳಿಕ ಬಿಡುಗಡೆ ಆಗುತ್ತಿರುವ 2ನೇ ಸಿನಿಮಾ ಇದು. ಎರಡು ತಿಂಗಳ ಹಿಂದೆ ಬಂದಿದ್ದ 'ಹರಿಹರ ವೀರಮಲ್ಲು' ಸಿನಿಮಾ ನಿರಾಸೆ ಮೂಡಿಸಿತ್ತು. ಆದರೆ 'OG' ಗೆಲ್ಲುವ ಸುಳಿವು ಸಿಕ್ಕಿದೆ. ತಮನ್ ಮ್ಯೂಸಿಕ್ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ.
ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'OG' ಸಿನಿಮಾ ನಿರ್ಮಾಣವಾಗಿದೆ. ಈ ಹಿಂದೆ 'ಸಾಹೋ' ಸಿನಿಮಾವನ್ನು ಸುಜಿತ್ ಕಟ್ಟಿಕೊಟ್ಟಿದ್ದರು. ಹಾಗಾಗಿ 2ನೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರದ 5 ಹಾಡುಗಳು ಬಿಡುಗಡೆ ಆಗಿದೆ. ಕನ್ನಡ ಸೇರಿ 5 ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ 'OG' ದರ್ಬಾರ್ ಹೇಗಿರುತ್ತೋ ಕಾದು ನೋಡಬೇಕಿದೆ.


Click it and Unblock the Notifications











