ನನಗೆ ದಿಕ್ಕೇ ತೋಚದಂತಾಗಿದೆ, ಗಳಗಳನೇ ಕಣ್ಣೀರು ಹಾಕಿದ 'ಮೊನಾಲಿಸಾ' ಖ್ಯಾತಿಯ ಸದಾ
ಸಾಕಷ್ಟು ಜನ ಮುದ್ದುಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಕನ್ನಡದಲ್ಲಿ ಕೂಡ ರಮ್ಯಾ.. ಐಂದ್ರಿತಾ ರೇ.. ನಿಶ್ವಿಕಾ ನಾಯ್ಡು.. ಸೇರಿ ಹಲವಾರು ತಾರೆಯರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕಿದ್ದಾರೆ. ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಕೊರೊನಾದ ದಿನಗಳಲ್ಲಿ ಸಂಯುಕ್ತಾ ಹೊರನಾಡು 60 ಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕರ..
ತಂಡ ರಚಿಸಿಕೊಂಡು 1800 ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಕಾರ್ಯವನ್ನು ಕೂಡ ಮಾಡಿದ್ದರು. ಅಷ್ಟರ ಮಟ್ಟಿಗೆ ಈ ಶ್ವಾನಗಳ ಮೇಲೆ ಅಕ್ಕರೆ ತಾರೆಯರಿಗೆ ಇದೆ. ಆದರೆ.. ಈಗ ಈ ಶ್ವಾನ ಪ್ರೇಮದ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ತೆಗೆದುಕೊಳ್ಳುತ್ತಿದೆ. ದೆಹಲಿಯಲ್ಲಿ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ವಸತಿ ಪ್ರದೇಶಗಳಲ್ಲಿ ಇರುವ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ(ಆಗಸ್ಟ್ 11) ಆದೇಶ ನೀಡಿದೆ.

ಈ ಆದೇಶದ ಕುರಿತು ಅಪಸ್ವರದ ಕೂಗೆದ್ದಿದ್ದು ಬಾಲಿವುಡ್ ಸೇರಿ ಬೇರೆ ಬೇರೆ ಭಾಷೆಯ ಎಲ್ಲಾ ತಾರೆಯರು ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಹಿನ್ನೆಲೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಬೀದಿ ನಾಯಿಗಳ ತಪ್ಪಲ್ಲ ನಮ್ಮದೇ ತಪ್ಪು ಎಂದು ಸುಧಾರಾಣಿ ಹೇಳಿದ್ದಾರೆ. ಕಿಚ್ಚ ಸುದೀಪ್ ಕೂಡ ನಾಯಿಗಳ ಯೋಗಕ್ಷೇಮ ಮತ್ತು ಅವುಗಳ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ. ಇದರ ನಡುವೆ ಇದೀಗ ''ಜಯಂ'' ಖ್ಯಾತಿಯ ಚೆಲುವೆ ಸದಾ ಕಣ್ಣೀರು ಹಾಕಿದ್ದಾರೆ.
ಹೌದು, ಸದಾ.. ''ಜಯಂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚಿತ್ರರಂಗಕ್ಕೆ ಬಂದ ಚೆಲುವೆ. ''ಮೊನಾಲಿಸಾ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದ ಸದಾ ''ಮೋಹಿನಿ 9886788888''.. ''ಹುಡುಗ ಹುಡುಗಿ''.. ''ಮೈಲಾರಿ''.. ''ಮಲ್ಲಿಕಾರ್ಜುನ''.. ಹಾಗೂ ''ಆರಕ್ಷಕ'' ಚಿತ್ರಗಳಲ್ಲಿ ಮಿಂಚಿದರು. ಕನ್ನಡಿಗರ ಹೃದಯವನ್ನು ಕೂಡ ಗೆದ್ದರು.
ಆದರೆ ಆ ನಂತರ ಅದೇನಾಯ್ತೋ.. 2018ರಿಂದ ಅವಕಾಶಗಳಿಂದ ವಂಚಿತರಾದ ಸದಾ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡರು. ''ವೈಲ್ಡ್ ಲೈಫ್ ಫೋಟೊಗ್ರಫಿ''ಯತ್ತ ವಾಲಿದರು. ಕ್ಯಾಮರಾನ ಹೆಗಲಿಗೇರಿಸಿಕೊಂಡು ಕಾಡು ಮೇಡು ಅಲೆದಾಡುವ ಸದಾ ವನ್ಯಜೀವಿಗಳ ಸೊಗಸಾದ ಫೋಟೊಗಳನ್ನು ಕ್ಲಿಕ್ಕಿಸುತ್ತಿರುತ್ತಾರೆ.
ಇಂಥಾ ಸದಾ ಮೊದಲಿನಿಂದಲೂ ಪ್ರಾಣಿ ಪ್ರಿಯೆ. ಪ್ರಾಣಿಗಳ ಸಂರಕ್ಷಣೆಗಾಗಿ ಹೋರಾಡುವ ಸದಾ ಪ್ರಾಣಿಗಳ ಆಶ್ರಯ, ವೈದ್ಯಕೀಯ ಚಿಕಿತ್ಸೆ ಮತ್ತು ಆಹಾರದಂತಹ ವಿಷಯಗಳಲ್ಲಿ ಕೂಡ ಕಾಳಜಿ ವಹಿಸುತ್ತಾ ಬಂದಿದ್ದಾರೆ. ಸಾಧ್ಯವಾದಷ್ಟು ಪ್ರಾಣಿಗಳಿಗೆ ಆಧಾರವಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿಯೇ ಸುಪ್ರೀಂ ಆದೇಶದ ಬೆನ್ನಲ್ಲಿಯೇ ಭಾವುಕಗೊಂಡಿರುವ ಸದಾ ಸದ್ಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು ದೆಹಲಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಭಾವುಕರಾಗಿ ಮಾತನಾಡಿರುವ ಸದಾ, ಕೇವಲ ಒಂದು ರೆಬೀಸ್ ಕೇಸಿನಿಂದ ಈ ತೀರ್ಪು ನೀಡಲಾಗಿದೆ. ಅದೂ ಸಹ ರೇಬೀಸ್ ಕೇಸು ಅಲ್ಲ ಎಂದು ಸಾಬೀತಾಗಿದೆ. ಆದರೂ ಕೂಡ ತೀರ್ಪು ಬಂದಿದೆ. ಈ ತೀರ್ಪಿ ಅನ್ವಯ ಮೂರು ಲಕ್ಷ ನಾಯಿಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸ್ಥಳಾಂತರಗೊಳಿಸುವುದು ಎಂದರೆ ಕೊಲ್ಲುವುದು ಎಂದೇ ಅರ್ಥ ಎಂದು ಹೇಳಿದ್ದಾರೆ.
ಕೇವಲ 8 ವಾರಗಳಲ್ಲಿ ಸರ್ಕಾರ ಅಥವಾ ಅಲ್ಲಿನ ಸ್ಥಳಿಯ ಆಡಳಿತಕ್ಕೆ ಮೂರು ಲಕ್ಷ ನಾಯಿಗಳಿಗೆ ವಾಸಸ್ಥಳ ಕಲ್ಪಿಸುವುದು ಸಾಧ್ಯವೇ ಇಲ್ಲ ಎಂದಿರುವ ಸದಾ ಸರ್ಕಾರಕ್ಕೆ ಅಲ್ಲಿನ ಮುನ್ಸಿಪಲ್ ಕಾರ್ಪೋರೇಷನ್‌ಗೆ ನಾಯಿಗಳಿಗೆ ವ್ಯಾಕ್ಸಿನ್ ಹಾಕಲು ಸಾಧ್ಯವಾಗಲಿಲ್ಲ ಎಂದ ಮೇಲೆ ಅವರಿಂದ ಶೆಲ್ಟರ್ ನಿರ್ಮಾಣ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ನಾಯಿಗಳ ಮಾರಣ ಹೋಮ ನಡೆಯಲಿದೆ ಎಂದು ಕಣ್ಣೀರು ಹಾಕಿದ್ದಾರೆ.
ತಮ್ಮ ಹಣ ಖರ್ಚು ಮಾಡಿ ಪ್ರಾಣಿ ಪ್ರಿಯರು ನಾಯಿಗಳಿಗೆ, ಬೆಕ್ಕುಗಳಿಗೆ ಚಿಕಿತ್ಸೆ ಕೊಡಿಸುತ್ತಾರೆ, ವಾಕ್ಸಿನೇಷನ್ ಮಾಡಿಸುತ್ತಾರೆ. ಇದಕ್ಕೆ ಯಾವ ಸರ್ಕಾರ ಕೂಡ ನೆರವಾಗುವುದಿಲ್ಲ ಎಂದಿರುವ ಸದಾ ಇದೇ ಸಮಯದಲ್ಲಿ ಜಾತಿ ನಾಯಿಗಳನ್ನು ಸಾಕುವರ ಮೇಲೆ ಕೂಡ ಕಿಡಿ ಕಾರಿದ್ದಾರೆ.ಮನೆಯಲ್ಲಿ ಚೆಂದ ಚೆಂದದ ಬಗೆ ಬಗೆಯ ಬ್ರೀಡ್ ನಾಯಿಗಳನ್ನು ಸಾಕುವವರು ನಿಮ್ಮನ್ನು ನೀವು ಪ್ರಾಣಿಪ್ರಿಯರು ಎನ್ನುಬೇಡಿ ಎಂದಿರುವ ಸದಾ ಪ್ರತಿ ಬಾರಿ ಜಾತಿ ನಾಯಿಯನ್ನು ನೀವು ದತ್ತು ಪಡೆದಾಗೆಲ್ಲಾ ಬೀದಿ ನಾಯಿಗಳು ಮತ್ತು ಬೆಕ್ಕುಗಳು ಅವಕಾಶ ವಂಚಿತರಾಗುತ್ತಾವೆ ಎಂದು ಹೇಳಿದ್ದಾರೆ.
ನನಗೆ ಏನು ಮಾಡಬೇಕೆಂದು ಗೊತ್ತೇ ಆಗುತ್ತಿಲ್ಲ, ದಿಕ್ಕೇ ತೋಚದಂತಾಗಿದೆ ಎಂದಿರುವ ಸದಾ ಶಾಂತಿಯುತ ಪ್ರತಿಭಟನೆಗೆ ಕೂಡ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಯಾರ ಬಳಿ ಹೋಗಬೇಕು, ಇದನ್ನು ಹೇಗೆ ತಡೆಯಬೇಕು, ಎಲ್ಲಿ ಹೋಗಿ ಇದರ ಬಗ್ಗೆ ಧ್ವನಿ ಎತ್ತಬೇಕು ಎನ್ನುವುದು ಗೊತ್ತಾಗುತ್ತಿಲ್ಲ ಎಂದಿರುವ ಸದಾ ಭಾರತದಂತಹಾ ದೇಶದಲ್ಲಿ ಜನಿಸಿ, ಈಗ ಮೂಕ ಪ್ರಾಣಿಗಳ ಮಾರಣಹೋಮವನ್ನು ನೋಡಬೇಕಾಗಿ ಬಂದಿದೆ ಎಂದು ಬಿಕ್ಕಿದ್ದಾರೆ. . ಭಾರತಕ್ಕೆ ಇಂತಹ ಪರಿಸ್ಥಿತಿ ಬಂದಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಈ ಸುದ್ದಿ ನನ್ನನ್ನೂ ಸಾಯಿಸುತ್ತಿದೆ ಎಂದು ಹೇಳುತ್ತಾ ಗಳಗಳನೇ ಅತ್ತಿದ್ದಾರೆ.


Click it and Unblock the Notifications











