ನನ್ನ ಮದ್ವೆಗೂ ಮುನ್ನ ಅಮ್ಮನಿಗೆ ಮದ್ವೆ ಮಾಡ್ತೀನಿ, ಆಕೆ ಕಾಲು ಕೆಳಗಿಡಲು ಬಿಡದಂಥ ಸಂಗಾತಿ ಬೇಕು
ತೆಲುಗು ನಟಿ ಸುರೇಖಾ ವಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಮಗಳು ಸುಪ್ರೀತಾ ಜೊತೆ ಸೇರಿ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಾರೆ. ಸುರೇಖಾ ವಾಣಿ ಅವರ ಪತಿ ಸುರೇಶ್ ತೇಜಾ ದೀರ್ಘಕಾಲದ ಅನಾರೋಗ್ಯದಿಂದ 7 ವರ್ಷಗಳ ಹಿಂದೆ ನಿಧನರಾಗಿದ್ದರು. ಬಳಿಕ ತಾಯಿ-ಮಗಳು ಬದುಕು ಸಾಗಿಸುತ್ತಿದ್ದಾರೆ.
ಪೋಷಕ ಪಾತ್ರಗಳಲ್ಲಿ ಸುರೇಖಾ ವಾಣಿ ಹೆಚ್ಚು ನಟಿಸಿ ಗೆದ್ದಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿರುವುದು ಹೆಚ್ಚು. ಕಾಮಿಡಿ ಪಾತ್ರಗಳಲ್ಲಿ ಕೂಡ ಮಿಂಚಿದ್ದಾರೆ. ಸುರೇಖಾ ವಾಣಿ ಮಗಳು ಸುಪ್ರೀತಾ ಕೂಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಆಕೆ ನಟಿಸಿರುವ 'ಅಮರಾವತಿ ಆಹ್ವಾನಂ' ಸಿನಿಮಾ ಫೆಬ್ರವರಿ 13ರಂದು ತೆರೆಗೆ ಬರಲಿದೆ.

ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನಗಳಲ್ಲಿ ಸುಪ್ರೀತಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್ಸ್ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ. ತಮ್ಮ ತಾಯಿಗೆ ಮತ್ತೊಂದು ಮದುವೆ ಮಾಡುವ ಬಗ್ಗೆಯೂ ಐಡ್ರೀಮ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾ ಟ್ರೋಲ್ಸ್ ಬಗ್ಗೆ ಮಾತನಾಡಿರುವ ಸುಪ್ರೀತಾ "ಮೊದಲಿಗೆ ಈ ಬಗ್ಗೆ ಆಲೋಚಿಸುತ್ತಿದ್ದೆ. ಅತ್ತಿದ್ದು ಇದೆ. ಈಗ ತಲೆ ಕೆಡಿಸಿಕೊಳ್ಳಲ್ಲ. ಅದನ್ನೆಲ್ಲಾ ಯೋಚಿಸುತ್ತಾ ಕೂತರೇ, ನನಗೆ ಊಟ ಹಾಕುವವರು ಯಾರು. ಕಾಮೆಂಟ್ ಹಾಕುವವನು ಅಲ್ಲೇ ಇರ್ತಾನೆ. ನಮ್ಮ ತಾಯಿ ಕುಂಕುಮ ಇಟ್ಟುಕೊಂಡಿದ್ದಕ್ಕೂ ಟ್ರೋಲ್ ಮಾಡಿದ್ದರು. ದೇವರು ಹೇಳಿಲ್ಲ, ಪತಿ ನಿಧನದ ಬಳಿಕ ಕುಂಕುಮ ಇಟ್ಕೊಬಾರ್ದು ಅಂತ. ಎಲ್ಲಾ ನಾವು ಮಾಡ್ಕೊಂಡಿರೋದು. ಸುರೇಖಾ ಮತ್ತೆ ಮದುವೆ ಆದ್ರು ಅಂತೆಲ್ಲಾ ಸುದ್ದಿ ಆಗಿತ್ತು. ನನ್ನ ಬಲವಂತಕ್ಕೆ ಆಕೆ ಕುಂಕುಮ ಇಟ್ಟುಕೊಂಡಿದ್ರು. ನಮ್ಮ ಅಪ್ಪ ಸತ್ತಾಗ ಅಮ್ಮನಿಗೆ 35 ವರ್ಷ ವಯಸ್ಸು. ಆ ವಯಸ್ಸಿಗೆ ಕುಂಕುಮ ಇಡದೇ ಇರಬೇಕು ಎನಿಸಲಿಲ್ಲ. ಆರಂಭದಲ್ಲಿ ಅಮ್ಮ ಒಪ್ಪಲಿಲ್ಲ, ಬಳಿಕ ಕುಂಕುಮ ಇಟ್ಟುಕೊಳ್ಳಲು ಆರಂಭಿಸಿದರು" ಎಂದಿದ್ದಾರೆ.

ತಮ್ಮ ತಾಯಿಗೆ 2ನೇ ಮದುವೆ ಮಾಡುವ ಬಗ್ಗೆ ಈ ಹಿಂದೆ ಕೂಡ ಸಂದರ್ಶನದಲ್ಲಿ ಸುಪ್ರೀತಾ ಹೇಳಿದ್ದರು. ಈ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿ, "ಮೊನ್ನೆ ಕೂಡ ಅಮ್ಮನಿಗೆ ಮತ್ತೊಂದು ಮದುವೆ ಮಾಡುವುದಾಗಿ ಹೇಳುತ್ತಿದ್ದೆ. ನಮ್ಮ ತಂದೆಗೆ ಕೊನೆ, ಬೇರೆ ಯಾರಿಗೂ ಆ ಸ್ಥಾನ ನೀಡಲು ತಾನು ಸಿದ್ಧಳಿಲ್ಲ ಎಂದು ಹೇಳುತ್ತಿರುತ್ತಾರೆ. ನಾನು ಅದನ್ನು ಗೌರವಿಸುತ್ತೀನಿ. ಆದರೆ ನಾನು ಮದುವೆ ಆಗುವ ಮುನ್ನ ಅಮ್ಮನಿಗೆ ಮತ್ತೆ ಮದುವೆ ಮಾಡುವ ಆಲೋಚನೆ ಇದೆ. ನಮ್ಮ ಮಾವಂದಿರಿಗೂ ಹೇಳಿದ್ದೀನಿ. ಅವ್ರು ಒಪ್ಪಿದ್ದಾರೆ. ಅಂತಹ ಸಂಗಾತಿ ಸಿಗಬೇಕು. ಆಕೆ ಕೂಡ ಒಪ್ಪಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಒಂದು ವೇಳೆ ನಿಮ್ಮ ಅಮ್ಮನಿಗೆ ಮತ್ತೆ ಮದುವೆಯಾದರೆ ಬರುವ ವ್ಯಕ್ತಿ ಹೇಗೆ ನೋಡಿಕೊಳ್ಳಬೇಕು ಎನ್ನುವ ಪ್ರಶ್ನೆ ಸುಪ್ರೀತಾ ಉತ್ತರಿಸಿದ್ದಾರೆ. "ಅಮ್ಮನನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು. ಹೇಗೆ ಅಂದ್ರೆ ಕಾಲು ಕೂಡ ಕೆಳಗೆ ಇಡಲು ಬಿಡಬಾರದು. ಆ ರೀತಿ ನೋಡಿಕೊಳ್ಳಬೇಕು. ಆದರ್ಶ ಪತಿಯಾಗಿರಬೇಕು. ಆಕೆ ಬಯಸಿದ್ದೆಲ್ಲ ಸಿಗಬೇಕು. ಎಲ್ಲಾ ನಮ್ಮ ಅಮ್ಮ ಮಾಡಿಕೊಳ್ತಾಳೆ. ಆದರೆ ಆಕೆಗೆ ಸ್ವತಂತ್ರ ಕೊಡಬೇಕು, ಯಾಕೆ ಏನು ಎಂದು ಪ್ರಶ್ನಿಸಬಾರದು" ಎಂದು ತಿಳಿಸಿದ್ದಾರೆ.
ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಬರುವಂತೆ ಕರೆ ಬಂದಿತ್ತು. ಆದರೆ ಮನೆ ಒಳಗೆ ಹೋಗಲು ಮನಸ್ಸು ಬರಲಿಲ್ಲ. ಬಿಗ್‌ಬಾಸ್ ಶೋ ನೋಡಲು ಮಾತ್ರ ನನಗೆ ಇಷ್ಟ ಎಂದು ಸುಪ್ರೀತಾ ಹೇಳಿದ್ದಾರೆ. 7ನೇ ಸೀಸನ್‌ನಲ್ಲಿ ಹೋಗೋಣ ಎಂದುಕೊಂಡೆ. ಆದರೆ ಕೆಲವರು ಬೇಡ ಎಂದು ಸಲಹೆ ಕೊಟ್ಟರು. ಅಮ್ಮನನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಹಾಗಾಗಿ ಬೇಡ ಎಂದರು. ಹಾಗಾಗಿ ಹೋಗಲಿಲ್ಲ ಎಂದು ವಿವರಿಸಿದ್ದಾರೆ.


Click it and Unblock the Notifications











