Suriya Birthday: ಆಂಧ್ರದಲ್ಲಿ ಸೂರ್ಯ ಹುಟ್ಟುಹಬ್ಬ ಆಚರಣೆ ವೇಳೆ ಇಬ್ಬರು ಅಭಿಮಾನಿಗಳು ಸಾವು
ತಮಿಳು ನಟ ಸೂರ್ಯಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಆಂಧ್ರ, ತೆಲಂಗಾಣದಲ್ಲೂ ನಡಿಪಿನ್ ನಾಯಗನ್ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗುತ್ತವೆ. ಅಲ್ಲೂ ಸೂರ್ಯಗೆ ಅಭಿಮಾನಿಗಳಿದ್ದಾರೆ. ಇಂದು ನೆಚ್ಚಿನ ನಟನ ಹುಟ್ಟುಹಬ್ಬ. ಹಾಗಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಇಂತಹ ಸಮಯದಲ್ಲೇ ಒಂದು ದುರಂತ ಸಂಭವಿಸಿದೆ.
ಹುಟ್ಟುಹಬ್ಬಕ್ಕೆ ಆಂಧ್ರದಲ್ಲೂ ಅಭಿಮಾನಿಗಳು ಸೂರ್ಯ ಕಟೌಟ್, ಬ್ಯಾನರ್ ನಿಲ್ಲಿಸಿ ಪುಷ್ಪಾರ್ಚನೆ, ಕ್ಷೀರಾಭಿಷೇಕ, ಅನ್ನದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಹುಟ್ಟುಹಬ್ಬದ ದಿನ ನೆಚ್ಚಿನ ನಟನ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಆಂಧ್ರದ ನರಸರಾವ್ ಪೇಟೆಯ ಮೊಪ್ಪುವಾರಿಪಾಲೆಂನಲ್ಲಿ ಈ ಘಟನೆ ನಡೆದಿದೆ. ಸೂರ್ಯ ಹುಟ್ಟುಹಬ್ಬದ ನಿಮಿತ್ತ ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬ ಇಬ್ಬರು ಅಭಿಮಾನಿಗಳು ಫ್ಲೆಕ್ಸ್ ಹಾಕಲು ಯತ್ನಿಸಿದ್ದಾರೆ.

ಫ್ಲೆಕ್ಸ್ ಕಟ್ಟುತ್ತಿದ್ದಾಗ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ಅಸುನೀಗಿರುವುದಾಗಿ ವರದಿಯಾಗಿದೆ. ಈ ಘಟನೆಯಿಂದ ಸೂರ್ಯ ಅಭಿಮಾನಿಗಳು ದುಃಖದಲ್ಲಿ ಮುಳುಗುವಂತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಪದವಿ ವಿದ್ಯಾರ್ಥಿಗಳಾಗಿದ್ದರು ಎನ್ನಲಾಗುತ್ತಿದೆ. ಒಟ್ಟಾರೆ ಅಭಿಮಾನದ ಅಲೆಯಲ್ಲಿ ಇಬ್ಬರು ಅಭಿಮಾನಿಗಳು ಜೀವ ಕಳೆದುಕೊಂಡಿರುವುದು ವಿಷಾದಕರ.


Click it and Unblock the Notifications











