ಪಾಕಿಸ್ತಾನದ ಮೇಲೆ ಉಕ್ಕಿ ಹರಿದ ಪ್ರೀತಿ , ಭಾರತದ ಮತ್ತೊಬ್ಬ ಖ್ಯಾತ ಯೂಟ್ಯೂಬರ್ ಅರೆಸ್ಟ್...!
2005 ರಲ್ಲಿ ಸ್ಥಾಪನೆಯಾದ 'ಯೂಟ್ಯೂಬ್' ಇಂದು ವಿಶ್ವದ ಜನಪ್ರಿಯ ವೆಬ್‌ಸೈಟ್. ಅಷ್ಟೇ ಅಲ್ಲ ಅತಿ ಹೆಚ್ಚು ಆದಾಯ ತರುವ ಹಾಗೂ ಹೆಚ್ಚು ಮಂದಿಗೆ ಹಣ ವಿತರಣೆ ಮಾಡುವ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾದುದ್ದು. ಬರೋಬ್ಬರಿ 76 ಭಿನ್ನ ಭಾಷೆಗಳಲ್ಲಿ ಯೂಟ್ಯೂಬ್ ಆಯ್ಕೆಗಳು ಲಭ್ಯವಿದೆ. ಯೂಟ್ಯೂಬ್ ವಿಡಿಯೋಗಳಲ್ಲಿ ಬಳಸಲಾಗಿರುವ ಭಾಷೆಗಳು 4000 ಕ್ಕೂ ಹೆಚ್ಚು.ಒಂದು ಅಧ್ಯಯನದ ಪ್ರಕಾರ
ಯೂಟ್ಯೂಬ್ ಬಳಸುವ ವ್ಯಕ್ತಿ ದಿನಕ್ಕೆ ಸರಾಸರಿ 40 ನಿಮಿಷ ಯೂಟ್ಯೂಬ್ ನೋಡುತ್ತಾನಂತೆ.
ಇಂತಹ ಯೂಟ್ಯೂಬ್‌ನಲ್ಲಿ ಅನೇಕರು ಹಲವು ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.ತಿಂದು ಕುಡಿದು ತೇಗಿ ಮಲಗುವವರೆಗೆ ತಮ್ಮ ದಿನಚರಿ ಹೇಗಿತ್ತು ಎನ್ನುವುದನ್ನು ವಿಡಿಯೋ ಮೂಲಕ ವಿವರಿಸುತ್ತಾರೆ. ಕೆಲವರು ತಮ್ಮ ಅಡುಗೆ ಮಾಡುವ ವಿಧಾನ ಹೇಳಿದರೆ ಇನ್ನು ಕೆಲವರು ಸೀದಿರುವ ಪಾತ್ರೆಯನ್ನು ಕೇವಲ ಹತ್ತೇ ನಿಮಿಷದಲ್ಲಿ ಪಳಪಳ ಹೊಳೆಯುವಂತೆ ತೊಳೆಯುವುದು ಹೇಗೆ ಎನ್ನುವುದನ್ನು ಹೇಳಿ ಕೊಡ್ತಾರೆ.

ಇನ್ನು ಪ್ರವಾಸಿಗರ ಸಂಖ್ಯೆ ಯೂಟ್ಯೂಬ್‌ನಲ್ಲಿ ಕಡಿಮೆ ಇಲ್ಲ. ತಾವು ಸುತ್ತಾಡಿ ಬೇರೆಯವರಿಗೆ ಕುಳಿತಲ್ಲಿಯೇ ವಿಶ್ವ ದರ್ಶನವನ್ನು ಇಲ್ಲಿ ಅನೇಕರು ಮಾಡಿಸುತ್ತಾರೆ. ಆ ಪೈಕಿ ಒಬ್ಬರಾಗಿರುವ ತೆಲಂಗಾಣದ ಸೂರ್ಯಪೇಟೆಯ ಯೂಟ್ಯೂಬರ್ ಭಯ್ಯಾ ಸನ್ನಿ ಯಾದವ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸದ್ಯ ಬಂಧಿಸಿದೆ.
ಹೌದು, ನಾಲ್ಕೈದು ವಾರಗಳ ಹಿಂದೆ ಭಯ್ಯಾ ಸನ್ನಿ ಯಾದವ್, ಹೈದರಾಬಾದ್‌ನಿಂದ ಬೈಕ್ ಏರಿ ಪಾಕಿಸ್ತಾನಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇವರ ಈ ಪ್ರವಾಸದ ಮೇಲೀಗ ಎನ್‌ಐಗೆ ಅನುಮಾನ ಬಂದಿದೆ, ಯಾವುದಾದರೂ ಚಟುವಟಿಕೆಯಲ್ಲಿ ಸನ್ನಿ ಯಾದವ್ ಭಾಗಿಯಾಗಿದ್ದಾರಾ, ಭಾರತದ ಕುರಿತು ಸೂಕ್ಷ್ಮವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರಾ, ಎನ್ನುವ ಪ್ರಶ್ನೆ ಈಗ ಅಧಿಕಾರಿಗಳನ್ನು ಕಾಡುತ್ತಿದೆ.
ಈ ಹಿನ್ನೆಲೆ ಭಯ್ಯಾ ಸನ್ನಿ ಯಾದವ್ ಅವರನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ಸದ್ಯ ಭಯ್ಯಾ ಸನ್ನಿ ಯಾದವ್ ಅವರ ಬಳಿ ಇರುವ ಮೊಬೈಲ್ ಮತ್ತು ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನಕ್ಕೆ ವಿಶ್ಲೇಷಣೆಗೆ ಕಳುಹಿಸಿದ್ದಾರೆ.
ಅಂದ್ಹಾಗೇ ಭಯ್ಯಾ ಸನ್ನಿ ಯಾದವ್ 2019 ರಲ್ಲಿ 21ದಿನಗಳ ಕಾಲ ಲಡಾಕ್ ಪ್ರವಾಸಕ್ಕೆ ಬೈಕ್‌ನಲ್ಲಿ ಹೋಗಿದ್ದರು. ಈ ಸಮಯದಲ್ಲಿ ಇವರು ಹಂಚಿಕೊಂಡ ವಿಡಿಯೋ ಎಲ್ಲರನ್ನು ಸೆಳೆದಿತ್ತು. ನೋಡ ನೋಡುತ್ತಾ ಇವರ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 3 ಲಕ್ಷ ತಲುಪಿತ್ತು. ಇಲ್ಲಿಂದಾಚೆ ಬೈಕ್‌ನಲ್ಲಿಯೇ ಪ್ರವಾಸ ಮಾಡಲು ನಿರ್ಧಾರ ಮಾಡಿದ ಭಯ್ಯಾ ಸನ್ನಿ ಯಾದವ್ ಆ ನಂತರ 2019 ರಲ್ಲಿ ನೇಪಾಳಕ್ಕೆ ಹೋಗಿ ಬಂದರು. ಕೆಲವೇ ದಿನಗಳಲ್ಲಿ ಬಹಳ ಪ್ರಸಿದ್ಧರಾದರು.
ಇಂಥಾ ಭಯ್ಯಾ ಸನ್ನಿ ಯಾದವ್ ಮೇಲೆ ಈ ವರ್ಷದ ಮಾರ್ಚ್ ನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಟ್ಟಿಂಗ್ ಅಪ್ಲೀಕೇಶನ್‌ಗಳನ್ನು ಭಯ್ಯಾ ಸನ್ನಿ ಯಾದವ್ ಪ್ರಚಾರ ಮಾಡುತ್ತಿದ್ದಾರೆ ಎಂದು ನೂತಂಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಮಯದಲ್ಲಿ ವಿದೇಶದಲ್ಲಿದ್ದ ಸನ್ನಿ ಯಾದವ್ ಆ ನಂತರ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಸದ್ಯ ಭಯ್ಯಾ ಸನ್ನಿ ಯಾದವ್ ಅವರನ್ನು ಎನ್‌ಐಎ {ರಾಷ್ಟ್ರೀಯ ತನಿಖಾ ಸಂಸ್ಥೆ} ಅಧಿಕಾರಿಗಳು ಬಂಧಿಸಿದ್ದಾರೆ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇನ್ನು ಇದೇ ರೀತಿ ಈ ಹಿಂದೆ ಬಂಧನಕ್ಕೊಳಗಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಅವರ ತಂದೆ ಹರೀಶ್ ಮಲ್ಹೋತ್ರಾ ಜೈಲಿನಲ್ಲಿ ಭೇಟಿಯಾಗಿದ್ದು ನನ್ನ ಮಗಳು ನಿರಪರಾಧಿ, ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾಳೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.


Click it and Unblock the Notifications











