ತಮನ್ನಾ ಜೊತೆ 'ಲವ್ ಮಾಕ್ ಟೇಲ್' ಚಿತ್ರೀಕರಣ ಆರಂಭಿಸಿದ ನಿರ್ದೇಶಕ ನಾಗಶೇಖರ್
ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡ ಲವ್ ಮಾಕ್ ಟೇಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ ಎನ್ನುವ ವಿಚಾರ ಹಳೆಯದು. ಈಗಾಗಲೇ ತೆಲುಗಿನಲ್ಲಿ ಲವ್ ಮಾಕ್ ಟೇಲ್ ಸಿನಿಮಾ ಸೆಟ್ಟೇರಿ ಅನೇಕ ದಿನಗಳಾಗಿತ್ತು. ಇದೀಗ ಚಿತ್ರೀಕರಣ ಪ್ರಾರಂಭವಾಗಿದೆ. ತೆಲುಗು ಲವ್ ಮಾಕ್ಟೇಲ್ ನಲ್ಲಿ ನಿಧಿಮಾ ಪಾತ್ರದಲ್ಲಿ ನಟಿ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ಆದಿ ಪಾತ್ರದಲ್ಲಿ ನಟ ಸತ್ಯದೇವ್ ಬಣ್ಣಹಚ್ಚುತ್ತಿದ್ದಾರೆ.
ಅನೇಕ ದಿನಗಳಿಂದ ಸದ್ದು ಮಾಡುತ್ತಿದ್ದ, ತಮಿಳು ಲವ್ ಮಾಕ್ ಟೇಲ್ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರಕ್ಕೆ ಕನ್ನಡದ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾದ ಬಗ್ಗೆ ನಾಗಶೇಖರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಮನ್ನಾ ಮತ್ತು ಸತ್ಯದೇವ್ ಜೊತೆಗಿರುವ ಫೋಟೋ ಶೇರ್ ಮಾಡಿ,'ನನ್ನ ತೆಲುಗು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ' ಎಂದು ಬರೆದುಕೊಂಡಿದ್ದಾರೆ. ನಾಗಶೇಖರ್ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸಂತಸದ ವಿಚಾರ.

ಇನ್ನೂ ಚಿತ್ರದಲ್ಲಿ ಮತ್ತೋರ್ವ ನಟಿ ಮೇಘಾ ಆಕಾಶ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲವ್ ಮಾಕ್ ಟೇಲ್ ನ ಅದಿತಿ ಪಾತ್ರದಲ್ಲಿ ಮೇಘಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿಲ್ಲ.
2020 ಪ್ರಾರಂಭದಲ್ಲಿ ಅಂದರೆ ಜನವರಿಯಲ್ಲಿ ಕೊನೆಯ ವಾರದಲ್ಲಿ ತೆರೆಗೆ ಬಂದ ಲವ್ ಮಾಕ್ ಟೇಲ್ ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ. ಕನ್ನಡಿಗರ ಹೃದಯ ಗೆದ್ದಿರುವ ಲವ್ ಮಾಕ್ ಟೇಲ್ ತೆಲುಗು ಪ್ರೇಕ್ಷಕರ ಮನ ಸೆಳೆಯುತ್ತಾ, ಟಾಲಿವುಡ್ ನಲ್ಲೂ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.
ಕನ್ನಡದಲ್ಲಿ ಸದ್ಯ ಲವ್ ಮಾಕ್ ಟೇಲ್-2 ಚಿತ್ರೀಕರಣ ನಡೆಯುತ್ತಿದೆ. ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈಗಾಗಲೇ ಸಾಕಷ್ಟು ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಸುಮಾರು 70ರಷ್ಟು ಚಿತ್ರೀಕರಣ ಮುಗಿಸಿರುವ ಡಾರ್ಲಿಂಗ್ ಕೃಷ್ಣ ಮುಂದಿನ ವರ್ಷ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ.


Click it and Unblock the Notifications











