ದಕ್ಷಿಣ ಭಾರತ ಚಿತ್ರರಂಗದಿಂದ ಬದಲಾಯಿತು ಮಹಾರಾಷ್ಟ್ರ ಹುಡುಗಿಯ ಅದೃಷ್ಟ ; ಹಾಲುಗಲ್ಲದ ಚೆಲುವೆಯ ಸಾಹಸ-ಸಾಧನೆ ...!
ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾ ಬಣ್ಣದ ಮೋಹಕ್ಕೆ 19 ವರ್ಷಗಳು ಉರುಳಿವೆ.
'ಚಾಂದ್ ಸ ರೋಷನ್ ಚೆಹ್ರಾ' ಮೂಲಕ ಚಿತ್ರರಂಗವನ್ನ 19 ವರ್ಷಗಳ ಹಿಂದೆ ಇದೇ ದಿನ ಪ್ರವೇಶಿಸಿದ್ದ ಈ ಹಾಲು ಬಣ್ಣದ ಹುಡುಗಿಯ ಕೈ ಹಿಡಿದಿದ್ದು ಮಾತ್ರ ದಕ್ಷಿಣ ಭಾರತ. ಮೊದಲ ಸಿನಿಮಾದಲ್ಲಿಯೇ ಸೋಲಿನ ಕಹಿಯನ್ನ ಉಂಡ ತಮನ್ನಾ, ಆ ನಂತರ ಶ್ರೀ ಹಾಗೂ ಕೇಡಿ ಚಿತ್ರದಲ್ಲಿ ನಟಿಸಿದರು. ಆದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ಹ್ಯಾಪಿ ಡೇಸ್. ಅಲ್ಲಿಂದಾಚೆ ಒಂದಾದ ಮೇಲೊಂದು ಸಿನಿಮಾ. ಒಂದಾದ ಮೇಲೊಂದು ಗೆಲುವು.

ನೋಡ..ನೋಡುತ್ತಾ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಆಯ್ಕೆಯಾದ ತಮನ್ನಾ, ತಮ್ಮ ಅಂದ ಚೆಂದದಿಂದನೇ ಅಭಿಮಾನಿಗಳ ಹೃದಯ ಕದ್ದರು. ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನೂ ಸಂಪಾದಿಸಿದರು. ಬಹುಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದರು.
ಆ ನಂತರ 2013ರ ಆಸು-ಪಾಸಿನಲ್ಲಿ ಬಾಲಿವುಡ್ ನ ಇನ್ನೊಂದು ರೌಂಡು ಸುತ್ತಾಕಿಕೊಂಡು ಬಂದ ತಮನ್ನಾ ಹಿಮ್ಮತ್ ವಾಲಾ, ಹಮ್ ಶಕಲ್ಸ್, ಎಂಟ್ರಟೇನ್ಮೆಂಟ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆದರೂ ಉತ್ತರ ಭಾರತದ ಸಿನಿರಸಿಕರು ಇವರನ್ನ ಒಪ್ಪಲಿಲ್ಲ, ಅಪ್ಪಲಿಲ್ಲ.
2014ರಲ್ಲಿ ಮತ್ತೆ ಮರಳಿ ಮನೆಗೆ ಬಂದ ತಮನ್ನಾ, ಮತ್ತೆ ಒಂದಾದ ಮೇಲೊಂದು ಸಿನಿಮಾ ಮಾಡಿದರು. ಆ ಪೈಕಿ ಬಾಹುಬಲಿ ಇವರ ಕೀರ್ತಿಯನ್ನ ಜಗದಗಲಕ್ಕೆ ಪಸರಿಸಿತು. ಆದರೂ ತಮನ್ನಾ ಸಮಾಧಾನ ಆದಂತೆ ಕಂಡಿರಲಿಲ್ಲ.

ಯಾಕೆಂದರೆ ಬಾಲಿವುಡ್ ನಲ್ಲಿ ತಮ್ಮ ಹೆಸರಿನ ಬಾವುಟ ಹಾರಿಸಬೇಕೆಂಬ ಹುಚ್ಚು ಇನ್ನೂ ತಮನ್ನಾ ಅವರಲ್ಲಿ ಹಾಗೇ ಇತ್ತು. ಹೀಗಾಗಿ ಮತ್ತೆ ಬಾಲಿವುಡ್ ನ ಪ್ರದಕ್ಷಣೆ ಹಾಕಲು ಹೋದ ತಮನ್ನಾ ಹಿಂದಿಯಲ್ಲಿ ಬದುಕು ಕಟ್ಟಿಕೊಂಡ ಹೈದ್ರಾಬಾದ್ ನ ಹುಡುಗ ವಿಜಯ್ ವರ್ಮಾಗೆ ಮನ ಸೋತರು. 'ಲಸ್ಟ್ ಸ್ಟೋರೀಸ್ 2' ಸಿನಿಮಾದಲ್ಲಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಎಲ್ಲರನ್ನೂ ಬೆರಗಾಗಿಸಿದರು. ಈ ಪ್ರಣಯ ಪಕ್ಷಿಗಳು ಸದ್ಯದಲ್ಲಿಯೇ ಮದುವೆಯ ಬಂಧನಕ್ಕೊಳಗಾಗಲಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಇದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇದೆಲ್ಲದರ ನಡುವೆ ತಮನ್ನಾ ಭಾಟಿಯಾ ರಜಿನಿಕಾಂತ್ ಅಭಿನಯದ 'ಜೈಲರ್' ಸಿನಿಮಾದಲ್ಲಿ ಅಭಿನಯಿಸಿದರು. 'ಕಾವಾಲಾ..' ಹಾಡಿಗೆ ಹೆಜ್ಜೆ ಹಾಕಿ, ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದರು. ಇಂಟರ್ನೆಟ್ ಯುಗದಲ್ಲಿ ಸಂಚಲನ ಸೃಷ್ಟಿಸಿದರು. ಸದ್ಯಕ್ಕೆ ತಮನ್ನಾ ಭಾಟಿಯಾ ಗೆ ಈಗ 34ರ ಹರೆಯ. ತಮ್ಮ ಗಮನವೆನ್ನೆಲ್ಲ ಹಿಂದಿ ಚಿತ್ರರಂಗದ ಕಡೆ ತಮನ್ನಾ ಕೊಟ್ಟಿದ್ದಾರೆ. ಕೆಲ ಸಿನಿಮಾ ಹಾಗೂ ವೆಬ್ ಸರಣಿಯಲ್ಲಿಯೂ ನಟಿಸುತ್ತಿದ್ದಾರೆ.

ಇನ್ನೂ ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ ಹಿನ್ನೆಲೆ ತಮನ್ನಾ ಗೆ ಅಭಿನಂದನೆ ತಿಳಿಸಿದ್ದಾರೆ. ಶುಭಾಶಯಗಳ ಮಹಾಪೂರವೂ ಹರಿದು ಬರ್ತಿದೆ. ಕಾಜಲ್ ಅಗರ್ವಾಲ್ ಕೂಡ ತಮನ್ನಾಗೆ ಕಂಗ್ರ್ಯಾಜುಲೇಷನ್ ತಿಳಿಸಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಪ್ರತಿಕ್ರಿಯೆಯನ್ನೂ ನೀಡಿರುವ ತಮನ್ನಾ ಇದಿನ್ನೂ ಆರಂಭ ನನ್ನ ಕ್ಯೂಟೀಸ್' ಎಂದು ಹೇಳಿದ್ದಾರೆ.


Click it and Unblock the Notifications











