ರಾಮ್ ಚರಣ್ ಅರಸಿ ಬಂದ ಮತ್ತೊಬ್ಬ ತಮಿಳು ನಿರ್ದೇಶಕ
'RRR' ಸಿನಿಮಾದ ಬಳಿಕ ರಾಮ್ ಚರಣ್ ತೇಜ್‌ಗೆ ಬೇಡಿಕೆ ಹೆಚ್ಚಾಗಿದೆ. ಬೇರೆ ಬೇರೆ ಚಿತ್ರರಂಗದ ನಿರ್ದೇಶಕರು ಸಹ ರಾಮ್ ಚರಣ್‌ಗೆ ಸಿನಿಮಾ ಮಾಡಲೆಂದು ಹುಡುಕಿಕೊಂಡು ಬರುತ್ತಿದ್ದಾರೆ.
'RRR' ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಇದೀಗ ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿ. ನಟ ಸುನಿಲ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಇದೀಗ ಮತ್ತೊಬ್ಬ ತಮಿಳಿನ ನಿರ್ದೇಶಕ ರಾಮ್ ಚರಣ್‌ಗಾಗಿಯೇ ತೆಲುಗು ಸಿನಿಮಾ ಮಾಡಲು ಬಂದಿದ್ದಾರೆ.
ತಮ್ಮ ಭಿನ್ನ ಮಾದರಿ ಸಿನಿಮಾಗಳಿಂದ ಪ್ರತ್ಯೇಕ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಲೋಕೇಶ್ ಕನಕರಾಜನ್ ಅವರು ರಾಮ್ ಚರಣ್ ತೇಜಗಾಗಿ ಹೊಸ ಸಿನಿಮಾ ಮಾಡಲಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಒಂದು ಹಂತದ ಚರ್ಚೆ ಮುಗಿದಿದ್ದು, ಶಂಕರ್ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ಈ ಬಗ್ಗೆ ಸುಳಿವೊಂದನ್ನು ಸ್ವತಃ ನಿರ್ದೇಶಕ ಲೋಕೇಶ್ ಕನಕರಾಜ್ ನೀಡಿದ್ದು, ಯುವ ನಟ ಒಬ್ಬರಿಗೆ ಕತೆ ಹೇಳಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದಿದ್ದಾರೆ. ತಮಿಳಿನಲ್ಲಿ 'ಖೈದಿ', 'ಮಾಸ್ಟರ್' ಅಂಥಹಾ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಕನಕರಾಜನ್, ರಾಮ್ ಚರಣ್‌ಗಾಗಿ ಭಿನ್ನ ಕತೆಯನ್ನೇ ತಯಾರು ಮಾಡಿಕೊಂಡಿದ್ದಾರಂತೆ.
ಲೋಕೇಶ್ ಕನಕರಾಜನ್ ನಿರ್ದೇಶನ ಮಾಡಿರುವ 'ವಿಕ್ರಂ' ಸಿನಿಮಾ ಜೂನ್ 03 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ನಟಿಸಿದ್ದಾರೆ. ಮೂವರು ದಿಗ್ಗಜರು ನಟಿಸಿರುವ ಈ ಸಿನಿಮಾದ ಬಗ್ಗೆ ಕುತೂಹಲ ದೊಡ್ಡಮಟ್ಟದಲ್ಲಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು ಬಹಳ ವೈರಲ್ ಆಗಿದೆ.

ಇನ್ನು ರಾಮ್ ಚರಣ್ ತೇಜ ನಟಿಸಿದ್ದ 'RRR' ಸೂಪರ್ ಡೂಪರ್ ಹಿಟ್ ಆಗಿದೆ. ಆದರೆ ಅದರ ಹಿಂದೆಯೇ ತೆರೆಗೆ ಬಂದ 'ಆಚಾರ್ಯ' ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಇದೀಗ ಶಂಕರ್ ಸಿನಿಮಾಕ್ಕೆ ವಿಶಾಖಪಟ್ಟಣಂನಲ್ಲಿ ರಾಮ್ ಚರಣ್ ಚಿತ್ರೀಕರಣ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ಲೋಕೇಶ್ ಕನಕರಾಜ್ ಜೊತೆಗೆ ಸಿನಿಮಾ ಪ್ರಾರಂಭವಾಗಲಿದೆ.
ಈ ನಡುವೆ ರಾಮ್ ಚರಣ್ ತೇಜ ಹಿಂದಿಯಲ್ಲಿಯೂ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ತೆಲುಗು ಸಿನಿಮಾಗಳ ಹಿಂದಿ ವಿತರಣೆಯನ್ನೂ ಸಹ ಮಾಡಲಿದ್ದಾರೆ ಎನ್ನಲಾಗುತ್ತಿದೆ. 'ಕೆಜಿಎಫ್' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಸಹ ರಾಮ್ ಚರಣ್‌ಗಾಗಿ ಹೊಸ ಸಿನಿಮಾ ಒಂದನ್ನು ಮಾಡಲಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ.


Click it and Unblock the Notifications











