ಅಲ್ಲು ಅರ್ಜುನ್ ಸಿನಿಮಾ ಸ್ಟಾರ್ ಆಗಿರಬಹುದು ಆದರೆ, ತೆಲಂಗಾಣ ಡಿಜಿಪಿ ಕೊಟ್ಟ ಎಚ್ಚರಿಕೆ ಏನು..?
ಅಲ್ಲು ಅರ್ಜುನ್ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪುಷ್ಪ 2 ಚಿತ್ರವನ್ನು ನೋಡುವ ಧಾವಂತದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಉಸಿರು ಚೆಲ್ಲಿದ್ದಾರೆ. ಇನ್ನು, ಮೃತ ಮಹಿಳೆಯ ಪುತ್ರ ಇನ್ನು ಕೋಮಾದಲ್ಲಿದ್ದಾರೆ. ಈ ಹಿನ್ನೆಲೆ ಯಾರದ್ದು ಸರಿ ಯಾರದ್ದು ತಪ್ಪು ಎನ್ನುವ ಚರ್ಚೆ ಶುರುವಾಗಿದೆ. ಅಲ್ಲು ಅರ್ಜುನ್ ಮತ್ತು ಸರ್ಕಾರದ ನಡುವೆ ಸಮರ ಕೂಡ ಚಾಲ್ತಿಯಲ್ಲಿದೆ.
ಇನ್ನು ತೆಲಂಗಾಣದ ಮುಖ್ಯಮಂತ್ರಿ ರೇವಂತಿ ರೆಡ್ಡಿ ಅವರಂತೂ ತಮ್ಮ ಎಲ್ಲ ಕೆಲಸ ಮರೆತು ಅಲ್ಲು ಅರ್ಜುನ್ ವಿರುದ್ಧ ಅಡಿಗಡಿಗೂ ಕೆಂಡ ಕಾರುತ್ತಿದ್ದಾರೆ. ಮನುಷ್ಯತ್ವ ಇದೆಯಾ..? ಕಣ್ಣು ಹೋಗಿದೆಯಾ? ಕಾಲು ಹೋಗಿದೆಯಾ? ಕೈ ಹೋಗಿದೆಯಾ? ಕಿಡ್ನಿ ಹೋಗಿದೆಯಾ? ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಕಂಬಿ ಹಿಂದೆ ಕಳುಹಿಸಿಯೇ ತೀರಬೇಕೆ ಎಂದು ಶಪಥ ಮಾಡಿದಂತೆ ಖಂಡ ತುಂಡ ಮಾತುಗಳನ್ನಾಡುತ್ತಿದ್ದಾರೆ. ಇದರ ನಡುವೆ ಈಗ ತೆಲಂಗಾಣದ ಡಿಜಿಪಿ ಜೀತೆಂದರ್ ಅಲ್ಲು ಅರ್ಜುನ್ ವಿರುದ್ಧ ಗುಡುಗಿದ್ಧಾರೆ.

ಹೌದು, ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಅಲ್ಲು ಅರ್ಜುನ್ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಇಂದು ತೆಲಂಗಾಣ ಡಿಜಿಪಿ ಜಿತೇಂದರ್ ಸುದ್ದಿಗೋಷ್ಠಿ ಮಾಡಿದ್ದಾರೆ. ನಾವು ಅಲ್ಲು ಅರ್ಜುನ್ ವಿರುದ್ಧ ಅಲ್ಲ ಎಂದು ಹೇಳುತ್ತಾನೇ ಅಲ್ಲು ಅರ್ಜುನ್ ವಿರುದ್ಧ ಹರಿಹಾಯ್ದಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಡಿಜಿಪಿ ಜೀತೆಂದರ್ ಅಲ್ಲು ಅರ್ಜುನ್ ಚಿತ್ರರಂಗದ ಹೀರೋ ಆಗಿರಬಹುದು ಆದರೆ ಹೊರಗಡೆ ಈ ದೇಶದ ಸಾಮಾನ್ಯ ಪ್ರಜೆ ಎಂದು ಹೇಳಿದ್ದಾರೆ.
ಚಿತ್ರಮಂದಿರಕ್ಕೆ ಭೇಟಿ ನೀಡುವ ಮೊದಲು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು ಎಂದಿರುವ ಡಿಜಿಪಿ ಜೀತೆಂದರ್, ಚಿತ್ರದ ಪ್ರಚಾರಕ್ಕಿಂತ ನಾಗರಿಕರ ಸುರಕ್ಷತೆ ಮುಖ್ಯವೆನ್ನುವ ಕನಿಷ್ಠ ಜ್ಞಾನವಾದರೂ ಇಲ್ಲವೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ದೇಶದ ನಾಗರಿಕರಾಗಿ ಚಿತ್ರರಂಗದ ನಟ ಮತ್ತು ನಟಿಯರು ಮೊದಲು ಜವಾಬ್ಧಾರಿಯುತವಾಗಿರುವುದನ್ನು ಕಲಿಯಬೇಕು ಎಂದಿದ್ದಾರೆ. ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಹೆಚ್ಚು ಮುಖ್ಯವೆಂದು ಹೇಳಿದ್ದಾರೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ಧಾರೆ.
ಇನ್ನು ಇದೇ ಸಮಯದಲ್ಲಿ ಸ್ಟಾರ್‌ಗಳ ಬೌನರ್ಸ್ ಮತ್ತು ಬಾಡಿಗಾರ್ಡ್‌ಗಳಿಗೆ ಕೂಡ ಎಚ್ಚರಿಕೆಯನ್ನು ನೀಡಿರುವ ತೆಲಂಗಾಣದ ಡಿಜಿಪಿ ಜೀತಂದರ್ , ಬೌನ್ಸರ್ ಮತ್ತು ಖಾಸಗಿ ಅಂಗರಕ್ಷಕರ ಹೆಸರಿನಲ್ಲಿ ಕಾನೂನಿಗೆ ವಿರುದ್ಧವಾಗಿ ಯಾರಾದರೂ ಹೆಜ್ಜೆಯನ್ನು ಇಟ್ಟರೆ, ಯಾರ ಮೇಲಾದರೂ ದಾಳಿ ಮಾಡಿದರೆ ಅಥವಾ ಬೆದರಿಕೆ ಹಾಕಿದರೆ ಕ್ರಿಮಿನಲ್ ಮೊಕದ್ದಮೆಗಳೊಂದಿಗೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದ್ಧಾರೆ. ಬೌನರ್ಸ್ ಮತ್ತು ಬಾಡಿಗಾರ್ಡ್‌ಗಳಿಗೆ ನಿಯಮಗಳಿವೆ ಆ ನಿಯಮಗಳನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.
ಇನ್ನುಳಿದಂತೆ ನಿನ್ನೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಇದು ಒಂದು ಅಚಾತುರ್ಯದಿಂದ ನಡೆದ ಘಟನೆ. ಇದರಲ್ಲಿ ಯಾರದ್ದೂ ತಪ್ಪು ಇಲ್ಲ. ಎಲ್ಲಾ ಡಿಪಾರ್ಟ್‌ಮೆಂಟ್‌ನವರೂ ಒಳ್ಳೆಯದಾಗಬೇಕು ಅಂತಲೇ ಶ್ರಮಿಸಿದ್ದಾರೆ. ನಾನು ಮೊದಲು ಆ ಕುಟುಂಬಕ್ಕೆ ಸಾಂತ್ವಾನವನ್ನು ಹೇಳುತ್ತೇನೆ. ಆ ಕುಟುಂಬಕ್ಕೆ ನಡೆಯಬಾರದ ಘಟನೆ ನಡೆದಿದೆ. ಆ ವಿಷಯದಿಂದ ನನಗೆ ತುಂಬಾನೇ ನೋವಾಗಿದೆ. ನಾನೊಬ್ಬ ನಟನಾಗಿ ನನ್ನ ಉದ್ದೇಶವೇ ಥಿಯೇಟರ್‌ಗೆ ಬರುವ ಜನರನ್ನು ಎಂಟರ್ಟೈನ್ ಮಾಡಬೇಕು ಎಂಬುವುದು. ನನಗೆ ಥಿಯೇಟರ್ ಅಂದರೆ ದೇವಸ್ಥಾನವಿದ್ದಂತೆ. ಅಂತಹ ದೇವಸ್ಥಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಅಂದರೆ ನನ್ನಷ್ಟು ನೋವು ಪಡುವವರು ಯಾರಾದರೂ ಇದ್ದಾರಾ? ಎಂದು ಪ್ರಶ್ನೆ ಕೇಳಿದ್ದರು.


Click it and Unblock the Notifications











