ತೆಲಂಗಾಣ ಸರ್ಕಾರಕ್ಕೆ ಕೈ ಮುಗಿದ ತೆಲುಗು ಚಿತ್ರರಂಗ: ಕಾರಣ?
ತೆಲುಗು ಚಿತ್ರರಂಗ ಸಂಕಷ್ಟದ ಸ್ಥಿತಿಯಲ್ಲಿದೆ. ಸೂಪರ್ ಸ್ಟಾರ್ ನಟರುಗಳು ದೊಡ್ಡ ಬಜೆಟ್‌ನ ಹಲವು ತೆಲುಗು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ ಆದರೆ ಇದೇ ಸಮಯದಲ್ಲಿ ಆಂಧ್ರ ಸರ್ಕಾರ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ನೀಡಿದೆ.
ಆಂಧ್ರ ಸರ್ಕಾರದ ಆದೇಶದಿಂದಾಗಿ ಕೈ-ಕೈ ಹಿಸುಕಿಕೊಳ್ಳುತ್ತಿರುವ ತೆಲುಗು ಚಿತ್ರರಂಗಕ್ಕೆ ನೆರೆಯ ಮತ್ತೊಂದು ತೆಲುಗು ರಾಜ್ಯ ತೆಲಂಗಾಣ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಂಕಷ್ಟದ ಸಮಯದಲ್ಲಿ ದೊರೆತ ಸಿಹಿವಾರ್ತೆಗೆ ತೆಲುಗು ಚಿತ್ರರಂಗ ಸಂತಸಗೊಂಡಿದ್ದು, ತೆಲಂಗಾಣ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ತೆಲಂಗಾಣ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರವನ್ನು ಹೆಚ್ಚಿಸಿ ಇಂದಷ್ಟೆ ಆದೇಶ ಹೊರಡಿಸಿದ್ದು, ಇದು ತೆಲುಗು ಚಿತ್ರರಂಗಕ್ಕೆ ಸಂತಸ ತಂದಿದೆ.
ತೆಲಂಗಾಣ ಸರ್ಕಾರ ನೀಡಿರುವ ಹೊಸ ಆದೇಶದಂತೆ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್ ದರ ಕನಿಷ್ಟ 30 ಮತ್ತು ಜಿಎಸ್‌ಟಿ, ಗರಿಷ್ಟ ದರ 70 ರುಪಾಯಿ ಮತ್ತು ಜಿಎಸ್‌ಟಿ. ಎಸಿ ಉಳ್ಳ ಚಿತ್ರಮಂದಿರಗಳ ಕನಿಷ್ಟ ಟಿಕೆಟ್ ದರ ಕನಿಷ್ಟ 50 ಮತ್ತು ಜಿಎಸ್‌ಟಿ ಹಾಗೂ ಗರಿಷ್ಟ ದರ 150 ಮತ್ತು ಜಿಎಸ್‌ಟಿ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಕನಿಷ್ಟ ಟಿಕೆಟ್ ದರ 100 ರುಪಾಯಿ ಮತ್ತು ಜಿಎಸ್‌ಟಿ ಹಾಗೂ ಗರಿಷ್ಟ ದರ 250 ಮತ್ತು ಜಿಎಸ್‌ಟಿ. ರಿಕ್ಲೇನರ್ ಸೀಟುಗಳಿಗೆ 200 ರಿಂದ 350 ರುಪಾಯಿ ವರೆಗೆ ಚಾರ್ಜ್ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಚಿತ್ರಮಂದಿರಗಳ ನಿರ್ವಹಣೆ ಶುಲ್ಕ ಎಂದು ಎಸಿ ರಹಿತ ಚಿತ್ರಮಂದಿರಗಳು 3 ರು. ಎಸಿ ಉಳ್ಳ ಚಿತ್ರಮಂದಿರಗಳು 5 ರುಪಾಯಿ ವಿಧಿಸಲು ಅನುಮತಿ ಸಹ ನೀಡಲಾಗಿದೆ.

ಧನ್ಯವಾದ ಸಲ್ಲಿಸಿದ ಚಿರಂಜೀವಿ
ತೆಲಂಗಾಣ ಸರ್ಕಾರದ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ಮೆಗಾಸ್ಟಾರ್ ಚಿರಂಜೀವಿ, ''ತೆಲಂಗಾಣ ಸರ್ಕಾರದ ಈ ನಿರ್ಣಯವು ಚಿತ್ರರಂಗದ ಅಭಿವೃದ್ಧಿಗೆ ದೀರ್ಘಾವದಿಗೆ ಸಹಾಯಕರವಾಗಲಿದೆ. ಚಿತ್ರಮಂದಿರಗಳು ಹಾಗೂ ಚಿತ್ರೋದ್ಯಮವನ್ನು ನಂಬಿಕೊಂಡಿರುವ ಕೋಟ್ಯಂತರ ಕಾರ್ಮಿಕರಿಗೆ ಸಹಕಾರವಾಗಲಿದೆ'' ಎಂದಿರುವ ಚಿರು, ''ಸಿನಿಮಾ ರಂಗದ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್, ತೆಲಂಗಾಣ ಸಿಎಂ ಕೆಸಿಆರ್ ಹಾಗೂ ಎಂಪಿ ಸಂತೋಶ್ ಕುಮಾರ್ ಅವರಿಗೆ ವಿಶೇಷ ಧನ್ಯವಾದ'' ಎಂದಿದ್ದಾರೆ.

ನನ್ನ ಸರ್ಕಾರವೆಂದರೆ ನನಗೆ ಪ್ರೀತಿ ಎಂದ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ಸಹ ಸಂತಸವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಲ್ಲದೆ, ಆಂಧ್ರ ಸರ್ಕಾರಕ್ಕೆ ಪರೋಕ್ಷ ಟಾಂಗ್ ಸಹ ನೀಡಿದ್ದಾರೆ. ''ಒಂದು ಉದ್ಯಮವನ್ನು ಹೇಗೆ ಅಭಿವೃದ್ಧಿಪಡಿಸುವುದೆಂಬುವುದಕ್ಕೆ ಇದು ಉದಾಹರಣೆ. ರಾಜ್ಯದ ಆದಾಯ ಹೆಚ್ಚಿಸುವ, ಉದ್ಯಮಗಳಿಗೆ ಶಕ್ತಿ ತುಂಬುವ ತೆಲಂಗಾಣದ ಸರ್ಕಾರವನ್ನು ಎಷ್ಟು ಅಭಿನಂದಿಸಿದರೂ ಸಾಲದು. ನನಗೆ ನನ್ನ ಸರ್ಕಾರ ಬಹಳ ಅಚ್ಚು-ಮೆಚ್ಚು. ತೆಲುಗು ಚಿತ್ರರಂಗ ಭಾರತದ ಅತಿ ದೊಡ್ಡ ಚಿತ್ರರಂಗದಲ್ಲಿ ಒಂದು. ಇಡೀಯ ಚಿತ್ರರಂಗದಿಂದ ನಿಮಗೆ ಧನ್ಯವಾದ ಎಂದು ಸಿಎಂ ಕೆಸಿಆರ್ ಹಾಗೂ ಸಚಿವ ಯಾದವ್ ತಲಸಾನಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇಬ್ಬರೂ ಸಿಎಂ ಅನ್ನು ಭೇಟಿ ಮಾಡಿದ್ದ ಚಿರಂಜೀವಿ
ಚಿತ್ರಮಂದಿರಗಳ ಟಿಕೆಟ್ ದರ ಏರಿಸಬೇಕು ಎಂಬುದನ್ನು ಸೇರಿದಂತೆ ಇನ್ನೂ ಚಿತ್ರರಂಗದ ಇನ್ನು ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ನಟ ಮೆಗಾಸ್ಟಾರ್ ಚಿರಂಜೀವಿ ಅವರು ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ಕೆಲ ತಿಂಗಳ ಹಿಂದೆ ಭೇಟಿ ಮಾಡಿ ಮನವಿ ಮಾಡಿದ್ದರು. ನಂತರ ನಿಯೋಗವನ್ನೂ ಕೊಂಡೊಯ್ದಿದ್ದರು. ಚಿತ್ರರಂಗದ ಮನವಿಗೆ ಸ್ಪಂದಿಸಿರುವ ಸರ್ಕಾರ ಇದೀಗ ಟಿಕೆಟ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ತೆಲಂಗಾಣ ಸಿಎಂ ಅನ್ನು ಭೇಟಿ ಮಾಡಿದಂತೆಯೇ ಚಿರಂಜೀವಿ ಹಾಗೂ ತೆಲುಗು ಚಿತ್ರರಂಗದ ಗಣ್ಯರ ನಿಯೋಗವು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಆದರೆ ಮನವಿಗೆ ವ್ಯತಿರಿಕ್ತವಾದ ನಿರ್ಣಯ ತೆಗೆದುಕೊಂಡ ಆಂಧ್ರ ಸರ್ಕಾರ, ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿತು.

ಆಂಧ್ರದಲ್ಲಿ ಟಿಕೆಟ್ ದರಗಳು ಎಷ್ಟು?
ಆಂಧ್ರ ಸರ್ಕಾರದ ಹೊಸ ಆದೇಶದಂತೆ, ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250ರೂ ರು ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರು. ದಾಟುವಂತಿಲ್ಲ. ಎಕಾನಮಿ ಕ್ಲಾಸ್ ಟಿಕೆಟ್ 75 ರು. ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರು ದಾಟುವಂತಿಲ್ಲ, ಡಿಲಕ್ಸ್ 60 ರು. ಹಾಗೂ ಎಕಾನಮಿ 40 ರು ದಾಟುವಂತಿಲ್ಲ. ನಾನ್ ಎಸಿ ಚಿತ್ರಮಂದಿರಗಳಲ್ಲಿ, ಪ್ರೀಮಿಯಂ ಟಿಕೆಟ್ ದರ 60, ಡಿಲಕ್ಸ್ 40, ಎಕಾನಮಿ 20 ಇರಬೇಕು ಎಂದು ಆದೇಶಿಸಲಾಗಿದೆ. ಅದೇ ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60 ರುಗಳನ್ನು ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 70 ರು, ಡಿಲಕ್ಸ್ 50 ರು, ಎಕಾನಮಿ 30 ರು ದಾಟುವಂತಿಲ್ಲ. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್‌ನ ಪ್ರೀಮಿಯಂ ಟಿಕೆಟ್ ದರ 120 ರು, ಡಿಲಕ್ಸ್ ಟಿಕೆಟ್ ದರ 80 ರು, ಎಕಾನಮಿ 40 ರುಪಾಯಿ ಬೆಲೆ ದಾಟುವಂತಿಲ್ಲ. ಎಸಿ ಹೊಂದಿದ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರು, ಡಿಲಕ್ಸ್ 25 ರು, ಎಕಾನಮಿ 15 ರು ದಾಟುವಂತಿಲ್ಲ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮಲ್ಟಿಫ್ಲೆಕ್ಸ್ ಪ್ರೀಮಿಯಂ ಟಿಕೆಟ್ ಬೆಲೆ 80 ರು, ಡಿಲಕ್ಸ್ 50 ರು, ಎಕಾನಮಿ 30 ರು. ಎಸಿ ಹೊಂದಿದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 20 ರು. ಡಿಲಕ್ಸ್ 15 ರು, ಎಕಾನಮಿ 10 ರು. ಇನ್ನು ಎಸಿ ಇರದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 15, ಡಿಲಕ್ಸ್ 10, ಎಕಾನಮಿ ಕ್ಲಾಸ್‌ನ ಟಿಕೆಟ್ ದರ 5 ರುಪಾಯಿ ದಾಟುವಂತಿಲ್ಲ. ಆಂಧ್ರ ಸರ್ಕಾರದ ಈ ಆದೇಶದ ವಿರುದ್ಧ ತೆಲುಗು ಚಿತ್ರರಂಗ ಹಾಗೂ ಆಂಧ್ರದ ಚಿತ್ರಮಂದಿರಗಳ ಮಾಲೀಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.


Click it and Unblock the Notifications











