KGF 2: ತೆಲಂಗಾಣ ಸರ್ಕಾರದಿಂದ 'ಕೆಜಿಎಫ್ 2'ಗೆ ಸಿಹಿ ಸುದ್ದಿ
'ಕೆಜಿಎಫ್ 2' ಸಿನಿಮಾ ದೇಶದಾದ್ಯಂತ ನಾಳೆ ಬಿಡುಗಡೆ ಆಗುತ್ತಿದ್ದು, ಈಗಾಗಲೇ ಲಕ್ಷಾಂತರ ಟಿಕೆಟ್‌ಗಳಿ ಮುಂಗಡವಾಗಿ ಮಾರಾಟವಾಗಿವೆ. ಅದರಲ್ಲಿಯೂ ಉತ್ತರ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ 'ಕೆಜಿಎಫ್ 2'.
Recommended Video

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ನಿರೀಕ್ಷಿತ ಮಟ್ಟದ ಲಾಭ ಚಿತ್ರತಂಡಕ್ಕೆ ಆಗುತ್ತಿಲ್ಲ ಎನ್ನಲಾಗಿತ್ತು. ಅದರಲ್ಲಿಯೂ ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಚಿತ್ರಮಂದಿರ ಟಿಕೆಟ್ ದರಗಳು ಕಡಿಮೆ ಇರುವ ಕಾರಣ 'ಕೆಜಿಎಫ್ 2' ಸಿನಿಮಾ ನಿರೀಕ್ಷಿತ ಲಾಭ ಗಳಿಸಲಾರದು ಎನ್ನಲಾಗಿತ್ತು.
ಆದರೆ ಅದು ಸುಳ್ಳಾಗಿದೆ. ಕನ್ನಡದ 'ಕೆಜಿಎಫ್ 2' ಸಿನಿಮಾಕ್ಕೆ ತೆಲಂಗಾಣ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ತೆಲುಗು ದೊಡ್ಡ ಬಜೆಟ್ ಸಿನಿಮಾಗಳಂತೆ, 'ಕೆಜಿಎಫ್ 2' ಸಹ ದಿನಕ್ಕೆ ಐದು ಶೋ ಹಾಕಿಕೊಳ್ಳಲು ಅನುಮತಿಯನ್ನು ಸರ್ಕಾರ ನೀಡಿದೆ.

ತೆಲಂಗಾಣದಾದ್ಯಂತ 'ಕೆಜಿಎಫ್ 2' ಸಿನಿಮಾ ಐದು ಶೋ ಪ್ರದರ್ಶನವಾಗಲಿದೆ. ಇದರ ಜೊತೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ 50 ರುಪಾಯಿ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 30 ರುಪಾಯಿ ಟಿಕೆಟ್ ದರ ಏರಿಸಲು ಸಹ ಅವಕಾಶವನ್ನು ಸರ್ಕಾರ ನೀಡಿದೆ. ಹೀಗಾಗಿ ತೆಲಂಗಾಣದಲ್ಲಿ 'ಕೆಜಿಎಫ್ 2' ಉತ್ತಮ ಲಾಭವನ್ನೇ ಪಡೆಯಲಿದೆ ಎನ್ನಲಾಗುತ್ತಿದೆ.
ಬುಕ್ ಮೈ ಶೋ ಮಾಹಿತಿಯ ಪ್ರಕಾರ, ಹೈದರಾಬಾದ್‌ನಲ್ಲಿ ಸಿಂಗಲ್ ಸ್ಕ್ರೀನ್‌ಗಳಲ್ಲಿ 'ಕೆಜಿಎಫ್ 2' ಸಿನಿಮಾದ ಟಿಕೆಟ್ ದರ ಬಾಳ್ಕನಿ 210, ಇತರೆ ಕ್ಲಾಸ್ 150 ರುಪಾಯಿ ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಲೆ ತುಸು ಹೆಚ್ಚಿದೆ. ಆದರೆ ದಿನಕ್ಕೆ ಐದು ಶೋ ಆಗಿರುವ ಕಾರಣ ಹೆಚ್ಚು ಕಲೆಕ್ಷನ್ ಆಗುವ ವಿಶ್ವಾಸವಿದೆ.
ನೆರೆಯ ಆಂಧ್ರ ಪ್ರದೇಶದಲ್ಲಿ ಸರ್ಕಾರದಿಂದಿ 'ಕೆಜಿಎಫ್ 2'ಗೆ ನೆರವು ದೊರಕಿದಂತಿಲ್ಲ. ಅಲ್ಲಿಯೂ ಸಹ ಚಿತ್ರಮಂದಿರಗಳ ಟಿಕೆಟ್ ದರ ಕಡಿಮೆ ಇವೆ. ಆದರೆ 'ಕೆಜಿಎಫ್ 2'ಗೆ ಟಿಕೆಟ್ ದರ ಏರಿಸಲು ಅವಕಾಶ ನೀಡಿದಂತಿಲ್ಲ. ಆಂಧ್ರದ ಕೆಲವು ನಗರಗಳಲ್ಲಿ 120, 80, 90 ರುಪಾಯಿಗಳಿಗೆ 'ಕೆಜಿಎಫ್ 2' ಸಿನಿಮಾದ ಟಿಕೆಟ್‌ಗಳು ಲಭ್ಯವಿದೆ. ಆಂಧ್ರದಲ್ಲಿಯೂ ದೊಡ್ಡ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರ ಏರಿಸಿಕೊಳ್ಳುವ ಅವಕಾಶ ಇದೆಯಾದರೂ, ಸರ್ಕಾರವು 'ಕೆಜಿಎಫ್ 2'ಗೆ ಟಿಕೆಟ್ ದರ ಏರಿಸಲು ಅವಕಾಶ ಇನ್ನೂ ನೀಡಿಲ್ಲ.
'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಲಕ್ಷಾಂತರ ಟಿಕೆಟ್‌ಗಳು ಈಗಾಗಲೇ ಮುಂಗಡವಾಗಿ ಮಾರಾಟವಾಗಿವೆ. ಮುಂಬೈನಲ್ಲಿ 'RRR' ಸಿನಿಮಾದ ದಾಖಲೆ ಮುರಿದಿರುವ 'ಕೆಜಿಎಫ್ 2' ಸಿನಿಮಾ, RRR ಗಿಂತಲೂ ಹೆಚ್ಚು ಟಿಕೆಟ್‌ಗಳನ್ನು ಕೆಲವೇ ಗಂಟೆಗಳಲ್ಲಿ ಮಾರಾಟ ಮಾಡಿದೆ.


Click it and Unblock the Notifications











