ಬಾಡಿಗಾರ್ಡ್ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ರು ತೆಲುಗು ನಟ ನಾಗಾರ್ಜುನ
ನೆಚ್ಚಿನ ನಟನನ್ನು ನೋಡಬೇಕು, ಮಾತನಾಡಬೇಕು, ಕೈ ಕುಲುಕಬೇಕು, ಇತ್ತೀಚೆಗಂತೂ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಮುಗಿಬೀಳುತ್ತಾರೆ. ಆದರೆ ಸೆಲೆಬ್ರೆಟಿಗಳು ಅಷ್ಟು ಸುಲಭವಾಗಿ ಕೈಗೆ ಸಿಗುವುದಿಲ್ಲ. ಸಿಕ್ಕರೂ ಸುತ್ತಾ ಬಾಡಿಗಾರ್ಡ್ಸ್ ರಕ್ಷಣೆಗೆ ನಿಲ್ಲುತ್ತಾರೆ. ತಮ್ಮ ಕರ್ತವ್ಯ ನಿರ್ವಹಿಸುವದೇ ಅವರ ಕೆಲಸ. ಆದರೆ ಇದರಿಂದ ಕೆಲವೊಮ್ಮೆ ಅಚಾತುರ್ಯ ನಡೆದುಬಿಡುತ್ತದೆ.
ಕೆಲವೊಮ್ಮೆ ಸ್ಟಾರ್ ನಟ-ನಟಿಯರ ಬಾಡಿಗಾರ್ಡ್ಸ್, ಬೌನ್ಸರ್‌ಗಳು ತೋರುವ ಉತ್ಸಾಹ ಅಷ್ಟಿಷ್ಟಲ್ಲ. ಅಭಿಮಾನಿಗಳು ಸೆಲ್ಫಿಗಾಗಿ ತಾರೆಯರ ಬಳಿ ಬಂದರೆ ಅನುಚಿತವಾಗಿ ವರ್ತಿಸುತ್ತಾರೆ. ಕೆಲವೊಮ್ಮೆ ಬೌನ್ಸರ್‌ಗಳು ಅಭಿಮಾನಿಗಳ ಮೇಲೆ ಕೈ ಹಾಕುವ ಸಂದರ್ಭಗಳೂ ಇವೆ. ಇದೇ ರೀತಿಯ ಘಟನೆ ಇತ್ತೀಚೆಗೆ ನಡೆದಿದೆ. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ಅನಿರೀಕ್ಷಿತ ಘಟನೆ ನಡೆದಿದೆ. ಅದಕ್ಕೆ ಇದೀಗ ನಾಗಾರ್ಜುನ ಕ್ಷಮೆ ಕೇಳಿದ್ದಾರೆ.

ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ವಯಸ್ಸಾದ ವ್ಯಕ್ತಿಯೊಬ್ಬ ನಾಗಾರ್ಜುನ ಬಳಿ ಸೆಲ್ಫಿ ಕೇಳಲು ಹೋಗಿದ್ದಾನೆ. ಆಗ ಪಕ್ಕದಲ್ಲಿದ್ದ ಅಂಗರಕ್ಷಕ ಆತನನ್ನು ದೂರಕ್ಕೆ ತಳ್ಳಿದ್ದಾನೆ. ಆತ ಬೀಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇತರೆ ಕೆಲಸಗಾರರು ಹಿಡಿದುಕೊಂಡಿದ್ದಾರೆ. ಆದರೆ ನಾಗಾರ್ಜುನ ಈ ಘಟನೆಯನ್ನು ಗಮನಿಸಿರಲಿಲ್ಲ. ಅದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಯಾವುದೋ ಜ್ಞಾನದಲ್ಲಿ ಮುಂದೆ ನೋಡುತ್ತಾ ನಡೆಯುತ್ತಿದ್ದ ನಾಗಾರ್ಜುನಗೆ ಅದು ಗಮನಕ್ಕೆ ಬಂದಿಲ್ಲ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಿಮಗೆಲ್ಲಾ ಮಾನವೀಯತೆ ಇದ್ಯಾ? ಎಂದು ನೆಟ್ಟಿಗರು ನಾಗಾರ್ಜುನ ವಿರುದ್ಧ ಕಿಡಿಕಾರಿದ್ದಾರೆ. ವಿಚಾರ ಗೊತ್ತಾಗಿ ನಟ ನಾಗಾರ್ಜುನ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ. "ಈ ಘಟನೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಹೀಗಾಗಬಾರದಿತ್ತು. ಆ ವ್ಯಕ್ತಿಗೆ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ." ಇದನ್ನು ನಾಗ್ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ನಾಗಾರ್ಜುನ ನಟನೆಯ 'ನಾ ಸಾಮಿ ರಂಗ' ಸಿನಿಮಾ ತೆರೆಗೆ ಬಂದಿತ್ತು. ಮೊದಲಿನಂತೆ ಈಗ ನಾಗ್ ಸಿನಿಮಾಗಳು ಸದ್ದು ಮಾಡುತ್ತಿಲ್ಲ. ಹೊಸಬರ ದರ್ಬಾರ್ ನಡುವೆ ಟಾಲಿವುಡ್ ಮನ್ಮಥ ಕಮಾಲ್ ನಡೆಯುತ್ತಿಲ್ಲ. ಇದೀಗ ನಾಗ್ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಧನುಷ್ ಜೊತೆ 'ಕುಬೇರ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಶೇಖರ್ ಕಮ್ಮುಲು ನಿರ್ದೇಶನದ 'ಕುಬೇರ' ಸಿನಿಮಾ ತಮಿಳು ಜೊತೆ ತೆಲುಗಿನಲ್ಲಿ ಕೂಡ ತೆರೆಗೆ ಬರಲಿದೆ. ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಾರೆ. ಅದೇ ಕಾರಣಕ್ಕೆ ನಾಗ್ ಅಲ್ಲಿಗೆ ತೆರಳಿದಾಗ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಚಿತ್ರದಲ್ಲಿ ಧನುಷ್, ನಾಗಾರ್ಜುನ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ.
ತಂದೆ ನಾಗೇಶ್ವರ ರಾವ್ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಲು ಆರಂಭಿಸಿದ ನಾಗಾರ್ಜುನ 1986ರಲ್ಲಿ 'ವಿಕ್ರಂ' ಚಿತ್ರದ ಮೂಲಕ ಹೀರೊ ಆಗಿದ್ದರು. 90, 2000ದ ದಶಕದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಾಗ್ ಬಣ್ಣ ಹಚ್ಚಿ ಗೆದ್ದಿದ್ದರು. ಈ ಹಿಂದೆ ಕೂಡ ನಟ-ನಟಿಯರ ಬಾಡಿಗಾರ್ಡ್ಸ್, ಬೌನ್ಸರ್ಸ್ ಅಭಿಮಾನಿಗಳ ಜೊತೆ ಈ ರೀತಿ ನಡೆದುಕೊಂಡಿರುವ ಉದಾಹರಣಗಳಿವೆ. ಅದಕ್ಕೆ ತಾರೆಯರೇ ಕ್ಷಮೆ ಕೇಳಿದ್ದಾರೆ.


Click it and Unblock the Notifications