ಮತ್ತೆ ತಗ್ಲಾಕಿಕೊಂಡ ಬಾಲಕೃಷ್ಣ; ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್
ಕಳೆದ ಮೂರ್ನಾಲ್ಕು ದಿನಗಳಿಂದ ತೆಲುಗು ನಟ ಬಾಲಕೃಷ್ಣ ತಮ್ಮ ಕೆಟ್ಟ ವರ್ತನೆ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ವೇದಿಕೆ ಮೇಲೆ ನಟಿ ಅಂಜಲಿ ಅವರನ್ನು ಪಕ್ಕಕ್ಕೆ ತಳ್ಳಿದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಆದರೆ ಖುದ್ದು ನಟಿ ಅಂಜಲಿ "ನಾವಿಬ್ಬರು ಗ್ರೇಟ್ ಫ್ರೆಂಡ್ಸ್" ಎಂದು ಹೇಳಿ ಆ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು.
ನೆಟ್ಟಿಗರು ಮಾತ್ರ ಬಾಲಯ್ಯ ನಡೆಯನ್ನು ಟೀಕಿಸುತ್ತಲೇ ಇದ್ದಾರೆ. ಇನ್ನು ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಬಾಲಕೃಷ್ಣ ಕುಳಿತಿದ್ದಾಗ ಅವರ ಕಾಲ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯದ ರೀತಿಯ ಪಾನೀಯ ಇರುವುದು ಕಂಡುಬಂದಿತ್ತು. ಇದನ್ನು ನೋಡಿ ಅವರು ಕುಡಿದು ವೇದಿಕೆಯಲ್ಲಿ ಆ ರೀತಿ ನಡೆದುಕೊಂಡಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಆದರೆ ಅದೆಲ್ಲಾ ಗ್ರಾಫಿಕ್ಸ್ ಎಂದು ಕಾರ್ಯಕ್ರಮದ ಆಯೋಜಕರು ಹೇಳಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು.

ನಟಿ ಅಂಜಲಿ ಅವರನ್ನು ಬಾಲಯ್ಯ ವೇದಿಕೆ ಮೇಲೆ ನೂಕಿದ ವಿಚಾರದ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದರು. ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ಕೂಡ ಟೀಕಿಸಿದ್ದರು. ಬಾಲಯ್ಯ ದೊಡ್ಡ ಕ್ರೂರಿ ಎಂದಿದ್ದರು. ನಟಿ ಅಂಜಲಿ ಪೋಸ್ಟ್ ಬಳಿಕ ಎಲ್ಲವೂ ತಣ್ಣಗಾಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವೀಡಿಯೋ ವೈರಲ್ ಆಗಿ ಮತ್ತೆ ಬಾಲಯ್ಯ ಟ್ರೋಲ್ ಆಗುವಂತಾಗಿದೆ.
'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವಿಶ್ವಕ್ ಸೇನ್ ಹೀರೊ ಆಗಿ ನಟಿಸಿರುವ ಚಿತ್ರದಲ್ಲಿ ಅಂಜಲಿ ಹಾಗೂ ನೇಹಾ ಶೆಟ್ಟಿ ನಾಯಕಿಯರಾಗಿ ಮಿಂಚಿದ್ದಾರೆ. ಈವೆಂಟ್‌ನಲ್ಲಿ ಕೆಲವೊತ್ತು ಬಾಲಯ್ಯ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದರು. ಆಗ ಅವರ ಅಕ್ಕ ಪಕ್ಕದಲ್ಲಿ ಚಿತ್ರದ ನಾಯಕಿಯರಿಬ್ಬರು ಆಸೀನರಾಗಿದ್ದರು. ಮೊದಲಿಗೆ ಸಿನಿಮಾ ಬಗ್ಗೆ ಮಾತನಾಡಲು ಅಂಜಲಿ ವೇದಿಕೆ ಮೇಲೆ ಏರಿ ಹೋಗಿದ್ದರು.
ಸಿನಿಮಾ ಬಗ್ಗೆ ಮಾತನಾಡಲು ನಟ ವಿಶ್ವಕ್ ಸೇನ್ ವೇದಿಕೆ ಮೇಲೆ ಅಂಜಲಿ ಅವರನ್ನು ಕರೆದರು. ಆಗ ತಮ್ಮ ಪಕ್ಕದಲ್ಲಿ ಕುಳಿತಿದ್ದ ಅಂಜಲಿ ಎದ್ದು ಹೊರಟಾಗ ನಟ ಬಾಲಯ್ಯ ಆಕೆಯ ಹಿಂಬದಿಯನ್ನು ನಯವಾಗಿ ತಟ್ಟಿದರು. ಒಂದು ಕ್ಷಣ ವಿಚಲಿತರಾದ ಆಕೆ ಅದನ್ನು ತೋರಿಸಿಕೊಳ್ಳದೇ ವೇದಿಕೆ ಕಡೆ ನಡೆದು ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ ಈ ವೀಡಿಯೋ ವೈರಲ್ ಆಗಿ ಬಾಲಯ್ಯ ಮತ್ತೆ ಟ್ರೋಲ್ ಆಗುವಂತಾಗಿದೆ.
ವೇದಿಕೆ ಮೇಲೆ ಅಂಜಲಿ ಅವರನ್ನು ಸಲುಗೆಯಿಂದ ನೂಕಿದರು, ಬಾಲಯ್ಯ ಕಾಲಿನ ಬಳಿ ಮದ್ಯದ ಬಾಟಲ್ ಇರಲಿಲ್ಲ, ಅದು ಗ್ರಾಫಿಕ್ಸ್ ಎಂದು ಹೇಳಿದ್ದರು ಸರಿ. ಆದರೆ ಬಾಲಕೃಷ್ಣ ಹೀಗೆ ಅಂಜಲಿ ಹಿಂಬದಿ ಮುಟ್ಟಿದ್ದು ಏನು? ಇದನ್ನು ಕೂಡ ಗ್ರಾಫಿಕ್ಸ್ ಮಾಡಿದ್ದಾರಾ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲಾ ಸುಳ್ಳು ಎಂದು ತಮ್ಮ ನಟನನ್ನು ಕೊಂಡಾಡುತ್ತಿದ್ದ ಅಭಿಮಾನಿಗಳು ಇದಕ್ಕೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸುತ್ತಿದ್ದಾರೆ.
ನಟ ಬಾಲಕೃಷ್ಣ ಈ ಹಿಂದೆ ಕೂಡ ಸಾರ್ವಜನಿಕವಾಗಿ ಅಭಿಮಾನಿಗಳ ಮೇಲೆ ಕೆಂಡಾಮಂಡಲವಾಗಿರುವುದು, ಮಾತಿನ ಭರದಲ್ಲಿ ಏನೇನೊ ಮಾತನಾಡಿರುವುದು ವೈರಲ್ ಆಗಿ ಚರ್ಚೆ ಹುಟ್ಟಾಕ್ಕಿತ್ತು. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಂಡಿರಲಿಲ್ಲ. ಬರೀ ನಟನಾಗಿ ಮಾತ್ರವಲ್ಲದೇ ಆಂಧ್ರದ ಶಾಸಕರೂ ಆಗಿರುವ ಬಾಲಯ್ಯ ತಮ್ಮ ಬಿಹೇವಿಯರ್ ಬದಲಾಯಿಸಿಕೊಳ್ಳಬೇಕು ಎಂದು ಪದೇ ಪದೇ ಸಲಹೆಗಳು ಕೇಳಿಬರುತ್ತಲೇ ಇರುತ್ತದೆ.
ಕಳೆದ ವರ್ಷ 'ಭಗವಂತ್ ಕೇಸರಿ' ಚಿತ್ರದಲ್ಲಿ ನಟಿಸಿದ್ದ ಬಾಲಯ್ಯ ಇದೀಗ ತಮ್ಮ 108ನೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 3ನೇ ಬಾರಿ ಹಿಂದೂಪರದ ಶಾಸಕರಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಮಂಗಳವಾರ ಲೋಕಸಭೆ ಚುನಾವಣೆ ಸೇರಿದಂತೆ 4 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವೂ ಹೊರಬೀಳಲಿದೆ.


Click it and Unblock the Notifications