'ಅಣ್ಣಯ್ಯ ಬೇಗ ಬನ್ನಿ...' ಎಸ್‌ಪಿಬಿ ಕುರಿತು ಚಿರಂಜೀವಿ ಭಾವುಕ
ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಯಥಾಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಎಸ್‌ಪಿಬಿ ಆರೋಗ್ಯ ಕುರಿತು ಅವರ ಪುತ್ರ ಎಸ್ಪಿ ಚರಣ್ ಸಹ ಮಾಹಿತಿ ನೀಡುತ್ತಲೇ ಇದ್ದಾರೆ.
ದಿಗ್ಗಜ ಗಾಯಕ ಎಸ್‌ಪಿಬಿ ಆದಷ್ಟೂ ಬೇಗ ಗುಣಮುಖರಾಗಲಿ ಎಂದು ಇಡೀ ಭಾರತೀಯ ಚಿತ್ರರಂಗ ಪ್ರಾರ್ಥಿಸಿದೆ. ಇದೀಗ, ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಗೆಳೆಯ, ಆತ್ಮೀಯ ಗಾಯಕನ ಕುರಿತು ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಎಸ್‌ಪಿಬಿ ಜೊತೆಗಿನ ಅನುಭವ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಎಸ್‌ಪಿಬಿ ಆರೋಗ್ಯ ಕುರಿತು ಚಿರು ಮಾತು
'ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯ ಗಾಯಕ, ದೇಶ ಗೌರವಿಸುವ ಅತ್ಯುನ್ನತ ಗಾಯಕ, ನನ್ನ ಪ್ರೀತಿಯ ಸಹೋದರ ಎಸ್‌ಪಿ ಬಾಲು ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದ್ದಾರೆ, ವೈದ್ಯರ ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ಕೇಳಿ ಸಂತಸವಾಗಿದೆ' ಎಂದು ಚಿರು ಹೇಳಿದ್ದಾರೆ.

ಸಿನಿಮಾ ಮೀರಿದ ಸಂಬಂಧ ನಮ್ಮದು
'ಬಾಲು ಜೊತೆ ನನಗೆ ಕೇವಲ ಸಿನಿಮಾ ಸಂಬಂಧ ಮಾತ್ರವಲ್ಲ, ಅದನ್ನು ಮೀರಿದ ಸ್ನೇಹ ಸಂಬಂಧ. ಚೆನ್ನೈನಲ್ಲಿ ನೆರೆಹೊರೆಯಲ್ಲಿ ವಾಸವಿದ್ದು, ಆಗಾಗ ಭೇಟಿಯಾಗುತ್ತಿದ್ದೆವು. ಎಷ್ಟು ವರ್ಷಗಳ ಸ್ನೇಹ ಸಂಬಂಧ ನಮ್ಮದು. ನಾನು ಅವರನ್ನು ಪ್ರೀತಿಯಿಂದ ಅಣ್ಣನಂತೆ ಕಾಣುತ್ತೇನೆ, ಅವರ ಸಹೋದರಿ ಸಹ ನನ್ನನ್ನು ಅಣ್ಣನಂತೆ ನೋಡಿಕೊಂಡಿದ್ದಾರೆ'

ಸಹೋದರಿಯಿಂದ ಮಾಹಿತಿ ಪಡೆಯುತ್ತಿದ್ದೇನೆ
'ಎಸ್‌ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದ ಕುರಿತು ಸಹೋದರಿಯಿಂದ ಕಳೆದ ಮೂರು ದಿನಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ವೈದ್ಯರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ನಾನು ವಿವರ ಪಡೆದುಕೊಂಡಿದ್ದೇನೆ. ಎಸ್‌ಪಿಬಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎಂಬ ವಿಚಾರ ತಿಳಿದು ಬಹಳ ಸಂತೋಷವಾಗಿದೆ'

ಭಾರತೀಯ ಚಿತ್ರರಂಗಕ್ಕೆ ಉಸಿರು
'ತೆಲುಗು ಚಿತ್ರರಂಗಕ್ಕೆ ಬಾಲು ಅಮೃತ. ಭಾರತೀಯ ಚಿತ್ರರಂಗಕ್ಕೆ ಆತನ ರಾಗ, ತಾಳ, ಪಲ್ಲವಿಯೇ ಉಸಿರು. ಎಸ್‌ಪಿಬಿ ಅವರು ಮತ್ತೆ ಎದ್ದು ಬಂದು ಚಿತ್ರರಂಗದಲ್ಲಿ ತೊಡಗಿಕೊಳ್ಳಲಿ. ಆ ದೇವರು ಆದಷ್ಟೂ ಬೇಗ ಅವರನ್ನು ಮೊದಲಿನಿಂತೆ ಮಾಡಿ ವಾಪಸ್ ಕಳುಹಿಸಲಿ' ಎಂದು ಮೆಗಾಸ್ಟಾರ್ ವಿನಂತಿಸಿದ್ದಾರೆ.


Click it and Unblock the Notifications











