ಹೆಣ್ಣು ಮಕ್ಕಳ ಬಗ್ಗೆ ಇದೆಂಥಾ ಮಾತು; ಚಿರಂಜೀವಿ ಲಿಂಗ ತಾರತಮ್ಯ ಹೇಳಿಕೆಗೆ ಭಾರೀ ಟೀಕೆ
ಸಾರ್ವಜನಿಕ ಜೀವನದಲ್ಲಿರುವ ತಾರೆಯರು ಅಳೆದು ತೂಗಿ ಮಾತನಾಡಬೇಕು. ಕೆಲವೊಮ್ಮೆ ಏನೋ ಮಾತನಾಡಲು ಹೋಗಿ ಮತ್ತೇನೋ ಆಗಿ ಎಡವಟ್ಟು ಆಗಿಬಿಡುತ್ತದೆ. ಸದ್ಯ ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಬಂದಮೇಲೆ ಪ್ರತಿ ಮಾತು ವೈರಲ್ ಆಗುತ್ತದೆ. ಸಿಕ್ಕಾಪಟ್ಟೆ ಟ್ರೋಲ್ ಆಗಿ ಚರ್ಚೆ ಹುಟ್ಟುಹಾಕುತ್ತದೆ. ಹೆಣ್ಣು ಮಕ್ಕಳ ಬಗ್ಗೆ ತೆಲುಗು ನಟ ಚಿರಂಜೀವಿ ನೀಡಿರುವ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಎರಡು ವರ್ಷದ ಹಿಂದೆ ಚಿರು ಮೊಮ್ಮಗಳನ್ನು ಮನೆಗೆ ಸ್ವಾಗತಿಸಿದ್ದರು. ರಾಮ್‌ಚರಣ್ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ 'ಬ್ರಹ್ಮಾಆನಂದಂ' ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿರು ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ಮಾತನಾಡುತ್ತಾ ಚರಣ್‌ಗೆ ಎರಡನೆಯದ್ದು ಗಂಡು ಮಗು ಆಗಬೇಕು, ಆ ಮೂಲಕ ನಮ್ಮ ಲೆಗಸಿ ಮುಂದುವರೆಯಬೇಕು ಎಂದು ಮೆಗಾಸ್ಟಾರ್ ಹೇಳಿದ್ದಾರೆ.

ಚಿರಂಜೀವಿ ಹೇಳಿಕೆ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಚಿರಂಜೀವಿ ಇಂತಹ ಅಭಿಪ್ರಾಯ ಹೊಂದಿದ್ದಾರಾ? ಹೆಣ್ಣು ಮಕ್ಕಳು ಇಂದು ಯಾವುದರಲ್ಲಿ ಕಮ್ಮಿ ಇದ್ದಾರೆ? ಗಂಡು- ಹೆಣ್ಣು ಎಂದು ಭೇದ ಮಾಡಿ ಮಾತನಾಡುವುದು ಶೋಭೆ ಅಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಮಾತು ಬೇರೆಯವರು ಆಡಿದ್ದರೆ ಭಾರೀ ವಿವಾದ ಆಗುತ್ತಿತ್ತು. ಚಿರಂಜೀವಿ ಮಾತನಾಡಿದರೆ ಕೇಳುವವರು ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮೊಮ್ಮಗಳ ಜೊತೆ ಚಿರಂಜೀವಿ ಇರುವ ಫೋಟೊ ಪ್ರದರ್ಶಿಸಲಾಯಿತು. ಇದನ್ನು ನೋಡಿ ಚಿರು "ನಾನು ಮನೆಯಲ್ಲಿ ಮೊಮ್ಮಕ್ಕಳ ಜೊತೆ ಇರುವಾಗ ಒಂದು ಲೇಡಿಸ್ ಹಾಸ್ಟೆಲ್ ವಾರ್ಡನ್ ತರ ಭಾಸವಾಗುತ್ತದೆ, ಸುತ್ತಾ ಹೆಣ್ಣು ಮಕ್ಕಳೇ ಎಂದು ನಕ್ಕಿದ್ದಾರೆ. ಚರಣ್ ಈ ಬಾರಿ ಒಂದು ಗಂಡು ಮಗು ಬೇಕು ಕಣೋ, ನಮ್ಮ ಲೆಗಸಿ ಮುಂದುವರೆಯಬೇಕು ಎಂದು ಕೋರಿಕೆ. ಕ್ಲಿಂಕಾರ ಅಂದ್ರೆ ಬಹಳ ಮುದ್ದು, ಆದರೆ ಚರಣ್‌ಗೆ ಮತ್ತೊಂದು ಹೆಣ್ಣು ಆಗುತ್ತಾ ಎಂದು ಭಯ" ಎಂದು ನಕ್ಕು ಸುಮ್ಮನಾಗಿದ್ದಾರೆ.
ಮಗು ಹೆಣ್ಣಾಗಲಿ, ಗಂಡಾಗಲಿ ಎಲ್ಲರೂ ಒಂದೇ, ಯಾವುದೇ ಭೇದಭಾವ ಮಾಡಬಾರದು. ಸ್ಟಾರ್ ನಟರೇ ಈ ರೀತಿ ಮಾತನಾಡಿದರೆ ಸಾಮಾನ್ಯ ಜನರು ಇದೇ ರೀತಿ ಯೋಚಿಸುತ್ತಾರೆ. 21ನೇ ಶತಮಾನದಲ್ಲಿ ಕೂಡ ಹೆಣ್ಣು ಸಂತಾನದ ಬಗ್ಗೆ ತಾತ್ಸಾರ ಮಾಡುವವರೇ ಹೆಚ್ಚು. ಇದೀಗ ನಟ ಚಿರಂಜೀವಿ ಹೇಳಿಕೆ ಬಗ್ಗೆಯೂ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ವೇದಿಕೆಯಲ್ಲಿ ದಿಗ್ಗಜ ನಟರೊಬ್ಬರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.
ಇದೇ ಕಾರ್ಯಕ್ರಮದ ವೇದಿಕೆಯಲ್ಲಿ ಹಾಸ್ಯನಟ ಬ್ರಹ್ಮಾನಂದಂ ಮೀಮ್ಸ್ ಬಗ್ಗೆ ಮಾತನಾಡುತ್ತಾ ಚಿರು ಕೆಟ್ಟ ಪದ ಬಳಸಿದ್ದಾರೆ ಎಂದು ಹೇಳಲಾಗ್ತಿದೆ. ಚಿರು ವಯಸ್ಸು 65 ದಾಟಿದೆ. ಇವತ್ತಿಗೂ ಹೀರೊ ಆಗಿ ಮುಂದುವರೆಯುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
2 ವರ್ಷದ ಹಿಂದೆ ಬಂದಿದ್ದ 'ವಾಲ್ತೇರು ವೀರಯ್ಯ' ಸಿನಿಮಾ ಹಿಟ್ ಆಗಿತ್ತು. ಬಳಿಕ ಬಂದ 'ಭೋಳಾ ಶಂಕರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಇದೀಗ 'ವಿಶ್ವಂಭರ' ಎಂಬ ಸೋಶಿಯೋ ಫ್ಯಾಂಟಸಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀಕಾಂತ್ ಓದೆಲ, ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರಗಳಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











