ನನ್ನ ಹುಟ್ಟುಹಬ್ಬದ ದಿನ ಈ ಕೆಲಸ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಮಹೇಶ್ ಬಾಬು
ಟಾಲಿವುಡ್ ನ ಸೂಪರ್ ಸ್ಟಾರ್, ಪ್ರಿನ್ಸ್ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ದಿನ ಗಣನೆ ಪ್ರಾರಂಭವಾಗಿದೆ. ಈಗಾಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕದಲ್ಲಿ ಸಂಭ್ರಮಿಸುತ್ತಿದ್ದಾರೆ. ಮಹೇಶ್ ಬಾಬು ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದ ಕಳೆದ ಮತ್ತು ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಣೆ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಹಾಗಾಗಿ ಅಭಿಮಾನಿಗಳು ದೂರದಿಂದನೇ ನೆಚ್ಚಿನ ನಟನಿಗೆ ವಿಶ್ ಮಾಡುವ ಮೂಲಕ ಸಂತಸ ಪಡುತ್ತಿದ್ದಾರೆ.
ಮಹೇಶ್ ಬಾಬು ಕೂಡ ತನ್ನ್ ಹುಟ್ಟುಹಬ್ಬವನ್ನು ಸರಳವಾಗಿ ಮತ್ತು ತುಂಬಾ ವಿಶೇಷವಾಗಿ ಆಚರಣೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅಂದಹಾಗೆ ಇದೇ ಅಗಸ್ಟ್ 09ರಂದು ಮಹೇಶ್ ಬಾಬುಗೆ ಜನ್ಮದಿನದ ಸಂಭ್ರಮ. 46ನೇ ವಸಂತಕ್ಕೆ ಕಾಲಿಡುತ್ತಿರುವ ನಟ ಮಹೇಶ್ ಬಾಬು ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಮಹೇಶ್ ಬಾಬು ಮಾಡಿರುವ ಮನವಿ ಏನು? ಇಲ್ಲಿದೆ ಓದಿ...

ಸಸಿ ನೆಡುವಂತೆ ಅಭಿಮಾನಿಗಳಲ್ಲಿ ಮನವಿ
ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಪ್ರಿನ್ಸ್ ಮಹೇಶ್ ಬಾಬು ತನ್ನ ಹುಟ್ಟುಹಬ್ಬದ ದಿನ ಗ್ರೀನ್ ಇಂಡಿಯಾ ಚಾಲೆಂಜ್ ಹಾಕಿದ್ದಾರೆ. ಆಗಸ್ಟ್ 09ರಂದು ಪ್ರತಿಯೊಬ್ಬರು 3 ಸಸಿಗಳನ್ನು ನೆಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಸಸಿಗಳನ್ನು ನಟ್ಟು ಫೋಟೋವನ್ನು ಟ್ಯಾಗ್ ಮಾಡಿ ಎಂದಿದ್ದಾರೆ. ಕಳೆದ ವರ್ಷ ಮಹೇಶ್ ಗ್ರೀನ್ ಇಂಡಿಯಾ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮಹೇಶ್ ಬಾಬು ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿ ಸಸಿ ನೆಡುವ ಮೂಲಕ ಅಭಿಮಾನಿಗಳಿಗೂ ಕರೆ ನೀಡಿದ್ದರು.

ಮಹೇಶ್ ಬಾಬು ಹೇಳಿದ್ದೇನು?
ಈ ಬಾರಿ ಹುಟ್ಟುಹಬ್ಬವನ್ನು ಗೋ ಗ್ರೀನ್ ವಿಷಯದಡಿ ಆಚರಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಎಲ್ಲಾ ಅಭಿಮಾನಿಗಳು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಸಿ ನಡುತ್ತಿರುವ ಫೋಟೋ ಶೇರ್ ಮಾಡಿ, "ನೀವು ಯಾವಾಗಲು ನನ್ನನ್ನು ವಿನಮ್ರಗೊಳಿಸುತ್ತೀರಿ. ನಾವು ನನ್ನ ಮೇಲೆ ಹೊಂದಿರುವ ಪ್ರೀತಿಯನ್ನು ಆಚರಿಸುತ್ತೀರಿ. ಈ ವರ್ಷ ನಾನು ನಿಮ್ಮಲ್ಲಿ ವಿಶೇಷವಾದ ಮನವಿ ಮಾಡುತ್ತಿದ್ದೇನೆ. ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಬೆಂಬಲಿಸಲು ನನ್ನ ಹುಟ್ಟುಹಬ್ಬದ ದಿನ ತಲಾ 3 ಸಸಿಗಳನ್ನು ನೆಡುವಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿಮ್ಮ ಪೋಸ್ಟ್ ಗಳನ್ನು ನನಗೆ ಟ್ಯಾಗ್ ಮಾಡಿ. ನಾನು ನಿಮ್ಮನ್ನು ನೋಡುತ್ತೇನೆ" ಎಂದು ಮಹೇಶ್ ಬಾಬು ಹೇಳಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ್ದ ಮಹೇಶ್
ಮಹೇಶ್ ಬಾಬು ಉತ್ತಮ ಕೆಲಸಕ್ಕೆ, ಪರಿಸರ ಕಾಳಜಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೆಲಂಗಾಣ ಸಂಸದ ಸಂತೋಷ್ ಕುಮಾರ್ ಆರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಅನೇಕರು ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದರು. ಅನೇಕ ಜನ ಸೆಲೆಬ್ರಿಟಿಗಳು ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಭಾಗಿಯಾಗಿದ್ದರು. ಮಹೇಶ್ ಬಾಬು ಕೂಡ ಸ್ವೀಕರಿಸಿ ಸಸಿ ನೆಟ್ಟಿದ್ದರು. ಇದೀಗ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗ್ರೀನ್ ಇಂಡಿಯಾ ಚಾಲೆಂಜ್ ಹಾಕಿದ್ದಾರೆ.

ಟ್ವಿಟ್ಟರ್ ಸ್ಪೇಸ್ ಆಯೋಜನೆ
ಇನ್ನು ಮಹೇಶ್ ಬಾಬು ಹುಟ್ಟುಹಬ್ಬದ ದಿನ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ವಿಟ್ಟರ್ ಸ್ಪೇಸ್ ಹಮ್ಮಿಕೊಂಡಿದ್ದಾರೆ. ಇದು ಟ್ವಿಟ್ಟರ್ ನಲ್ಲಿ ಇತ್ತೀಚಿಗೆ ಪರಿಚಯಿಸಲಾದ ಹೊಸ ವೈಶಿಷ್ಟ್ಯ. ಇದರಲ್ಲಿ 100 ಜನ ಭಾಗವಹಿಸಬಹುದು. ಇದು ಸದ್ಯ ಜನಪ್ರಿಯವಾಗಿರುವ ಕ್ಲಬ್ ಹೌಸ್ ಹಾಗೆ. ಆಡಿಯೋ ಸೆಶನ್ ಗಳನ್ನು ಹೋಸ್ಟ್ ಮಾಡಲಾಗುತ್ತದೆ. ಹೋಸ್ಟ್ ಮಾಡುವವರು ಇಷ್ಟಪಡುವ ಯಾರಿಗಾದರೂ ಸ್ಪೀಕರ್ ಪ್ರವೇಶಕ್ಕೆ ಆಯ್ಕೆ ಮಾಡಬಹುದು. ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ.

20 ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ
ಇದೀಗ ಮಹೇಶ್ ಬಾಬು ಅಭಿಮಾನಿಗಳು ಟ್ವಿಟ್ಟರ್ ಸ್ಪೇಸ್ ಹಮ್ಮಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ಆಗಸ್ಟ್ 09 ರಂದು ಸಂಜೆ 7ಗಂಟೆಗೆ ಟ್ವಿಟ್ಟರ್ ಸ್ಪೇಸ್ ಸೆಷನ್ ಆಯೋಜಿಸಲಾಗಿದೆ. ಇದು ಭಾರತದಲ್ಲಿ ಅತೀ ದೊಡ್ಡ ಸೆಲೆಬ್ರಿಟಿ ಟ್ವಿಟ್ಟರ್ ಸ್ಪೇಸ್ ಆಗಲಿದೆ ಎನ್ನಲಾಗುತ್ತಿದೆ. ಇದರಲ್ಲಿ ಸುಮಾರು 20 ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಮಹೇಶ್ ಬ್ಯುಸಿ
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಮುಗಿಸಿರುವ ಸಿನಿಮಾ ತಂಡ ಆಗಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಮಹೇಶ್ ಬಾಬು ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕೀರ್ತಿ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ.

ರಾಜಮೌಳಿ ಜೊತೆ ಮುಂದಿನ ಸಿನಿಮಾ?
ಇನ್ನು ಹುಟ್ಟುಹಬ್ಬದ ದಿನ ಸರ್ಕಾರು ವಾರಿ ಪಾಟ ಸಿನಿಮಾದಿಂದ ಏನಾದರೂ ಸರ್ಪ್ರೈಸ್ ಸಿಗಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೀಸರ್ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಈ ಸಿನಿಮಾತಂಡ ಗಿಫ್ಟ್ ಸಿಗುತ್ತಾ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನು ಈ ಸಿನಿಮಾ ಬಳಿಕ ಮಹೇಶ್ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹುಟ್ಟುಹಬ್ಬದ ದಿನ ಈ ಸುದ್ದಿ ಅಧಿಕೃತವಾಗಲಿದೆಯಾ ಎಂದು ಕಾದುನೋಡಬೇಕು.


Click it and Unblock the Notifications











