ಬೆಂಗಳೂರಿನ ಗಾಂಧಿನಗರದಲ್ಲಿ ನಟ ಮಹೇಶ್ ಬಾಬು ಹೊಸ ಬ್ಯುಸಿನೆಸ್ ಶುರು
ತೆಲುಗು ನಟ ಮಹೇಶ್ ಬಾಬುಗೆ ಕರ್ನಾಟಕದಲ್ಲೂ ಅಭಿಮಾನಿ ಬಳಗವಿದೆ. ಟಾಲಿವುಡ್ ಪ್ರಿನ್ಸ್ ಸಿನಿಮಾಗಳು ಇಲ್ಲಿ ಭರ್ಜರಿ ಬ್ಯುಸಿನೆಸ್ ಮಾಡುತ್ತವೆ. ಸದ್ಯ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಮಹೇಶ್ ಬಾಬು ಸಿದ್ಧತೆ ನಡೆಸಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
ಮಹೇಶ್ ಬಾಬು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಆ ವ್ಯಾಪಾರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಹೇಳಿಕೇಳಿ ಸಿನಿಮಾ ನಟನಾಗಿರುವ ಮಹೇಶ್ ಬಾಬು AMB ಸಿನಿಮಾಸ್ ಮಲ್ಟಿಪ್ಲೆಕ್ಸ್ ಚೈನ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈಗಾಗಲೇ ಹೈದರಾಬಾದ್‌ನಲ್ಲಿ AMB ಸಿನಿಮಾಸ್ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಇದನ್ನು ಬೆಂಗಳೂರಿಗೆ ವಿಸ್ತರಿಸಿದ್ದಾರೆ.

ಗಾಂಧಿನಗರದ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಈಗ AMB ಸಿನಿಮಾಸ್ ಕಟ್ಟಡ ಎದ್ದು ನಿಂತಿದೆ. ಹೌದು ದಶಕಗಳ ಕಾಲ ಕನ್ನಡ ಸಿನಿರಸಿಕರನ್ನು ರಂಜಿಸಿದ ಕಪಾಲಿ ಚಿತ್ರಮಂದಿರವನ್ನು ಇತ್ತೀಚೆಗೆ ಕೆಡವಲಾಗಿತ್ತು. ಏಷಿಯನ್ ಸಿನಿಮಾಸ್ ಜೊತೆ ಸೇರಿ ಮಹೇಶ್ ಬಾಬು ಆ ಜಾಗವನ್ನು ಖರೀದಿಸಿದ್ದರು. ಅಲ್ಲಿ ಮಲ್ಲಿಪ್ಲೆಕ್ಸ್ ಕಟ್ಟಡ ನಿರ್ಮಾಣ ಆರಂಭವಾಗಿತ್ತು. ಇದೀಗ ಕಟ್ಟಡ ನಿರ್ಮಾಣ ಮುಕ್ತಾಯವಾಗಿದ್ದು ಪೂಜೆ ಸಲ್ಲಿಸಲಾಗಿದೆ.
ಸದ್ಯ ಮಹೇಶ್ ಬಾಬು ತಮ್ಮ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಏಷಿಯನ್ ಸಿನಿಮಾಸ್ ಮಾಲೀಕ, ಚಿತ್ರ ನಿರ್ಮಾಪಕ ಸುನೀಲ್ ನಾರಂಗ್ ಹಾಗೂ ಕುಟುಂಬ ಸದಸ್ಯರು ಕಟ್ಟಡದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು AMB ಸಿನಿಮಾಸ್ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.
ಸ್ಕ್ರೀನ್‌ಗಳ ಅಳವಡಿಕೆ, ಇಂಟೀರಿಯಲ್ ಡಿಸೈನ್ ಕೆಲಸಗಳು ಆರಂಭವಾಗುತ್ತಿದೆ. ಶೀಘ್ರದಲ್ಲೇ ಬೆಂಗಳೂರಿನ AMB ಸಿನಿಮಾಸ್‌ನಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. 3 ಸ್ಕ್ರೀನ್‌ಗಳು ಮಲ್ಟಿಪ್ಲೆಕ್ಸ್‌ನಲ್ಲಿರುವುದಾಗಿ ಹೇಳಲಾಗುತ್ತಿದೆ. ಇತ್ತೀಚಿನ ವರ್ಷಗಳ ದೊಡ್ಡ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಹಾಗಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಮುಚ್ಚಿನ ಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಮಲ್ಟಿಪ್ಲೆಕ್ಸ್‌ಗಳ ಸ್ಥಿತಿ ಕೂಡ ಇದಕ್ಕಿಂತ ಹೊರತಾಗಿಲ್ಲ. ಇಂತಹ ಹೊತ್ತಲ್ಲೇ AMB ಸಿನಿಮಾಸ್ ಆರಂಭವಾಗುತ್ತಿದೆ.
ಸದ್ಯ ದೇಶದಲ್ಲಿ ಎಲೆಕ್ಷನ್, ಐಪಿಎಲ್ ಫೀವರ್ ಜೋರಾಗಿದೆ. ಹಾಗಾಗಿ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೂನ್ ಬಳಿಕ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಲು ಸಜ್ಜಾಗಿವೆ. ಆ ವೇಳೆಗೆ AMB ಸಿನಿಮಾಸ್ ಕಾರ್ಯಾರಂಭ ಮಾಡಲಿದೆ. ಆಗ ಮಹೇಶ್ ಬಾಬು ಕೂಡ ಬರಲಿದ್ದು ದೊಡ್ಡಮಟ್ಟದಲ್ಲಿ ಮಲ್ಟಿಪ್ಲೆಕ್ಸ್ ಉದ್ಘಾಟನೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ.

ತೆಲುಗಿನ ಅಲ್ಲು ಅರ್ಜುನ್ 'ಪುಷ್ಪ', ಪ್ರಭಾಸ್ 'ಕಲ್ಕಿ', ಜ್ಯೂ. ಎನ್‌ಟಿಆರ್ 'ದೇವರ', ರಾಮ್‌ಚರಣ್ 'ಗೇಮ್ ಚೇಂಜರ್' ಸೇರಿದಂತೆ ಸ್ಟಾರ್ ನಟರ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇನ್ನು ತಮಿಳಿನಲ್ಲಿ ಕಮಲ್ ಹಾಸನ್ 'ಇಂಡಿಯನ್-2', ಸೂರ್ಯ 'ಕಂಗುವ' ಸಿನಿಮಾಗಳು ಶೀಘ್ರದಲ್ಲೇ ತೆರೆಗೆ ಬರಲಿವೆ. ಕನ್ನಡದಲ್ಲಿ ಧ್ರುವ ಸರ್ಜಾ 'ಮಾರ್ಟಿನ್', ಉಪೇಂದ್ರ 'ಯುಐ', ದುನಿಯಾ ವಿಜಯ್ 'ಭೀಮ', ಸುದೀಪ್ 'ಮ್ಯಾಕ್ಸ್' ಚಿತ್ರಗಳು ಬಿಡುಗಡೆಗೆ ಅಣಿಯಾಗುತ್ತಿವೆ. AMB ಸಿನಿಮಾಸ್ ದರ್ಬಾರ್ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











