ಹೊಸಬಾಳಿಗೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್- ಮೌನಿಕ ರೆಡ್ಡಿ: ಇಬ್ಬರಿಗೂ ಇದು 2ನೇ ಮದುವೆ
ತೆಲುಗು ನಟ ಮಂಚು ಮನೋಜ್ ಬಾಲ್ಯದ ಗೆಳತಿ ಭೂಮಾ ಮೌನಿಕ ರೆಡ್ಡಿ ಅವರನ್ನು 2ನೇ ಮದುವೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಫಿಲ್ಮ್‌ನಗರ್‌ನಲ್ಲಿರುವ ಮಂಜು ಲಕ್ಷ್ಮಿ ನಿವಾಸದಲ್ಲೇ ಬಹಳ ಶಾಸ್ತ್ರೋಕ್ತವಾಗಿ ವಿವಾಹ ಸಮಾರಂಭ ನಡೆದಿದೆ. ನಿನ್ನೆ(ಮಾರ್ಚ್ 3) ನಡೆದ ಈ ಮದುವೆ ಸಮಾರಂಭದ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆಪ್ತರು, ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಹಿರಿಯ ನಟ ಮೋಹನ್ ಬಾಬು ಪುತ್ರ ಮಂಚು ಮನೋಜ್ ಈ ಹಿಂದೆ ಒಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದರು. 2015ರಲ್ಲಿ ಪ್ರಣತಿ ರೆಡ್ಡಿ ಎಂಬುವವರ ಕೈ ಹಿಡಿದಿದ್ದ ಮನೋಜ್ 4 ವರ್ಷಗಳ ನಂತರ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಭೂಮಾ ಮೌನಿಕ ರೆಡ್ಡಿ ಎಂಬುವವರನ್ನು ಮನೋಜ್ ಲವ್ ಮಾಡುತ್ತಿರುವುದಾಗಿ ಹೇಳಲಾಗುತ್ತಿತ್ತು. ಇದು ತಂದೆ ಮೋಹನ್ ಬಾಬುಗೆ ಇಷ್ಟವಿಲ್ಲ ಎನ್ನಲಾಗಿತ್ತು.

ಸದ್ಯ ಮದುವೆ ಸಮಾರಂಭದಲ್ಲಿ ಮನೋಜ್ ತಂದೆ ಹಿರಿಯ ನಟ ಮೋಹನ್ ಬಾಬು, ಸಹೋದರಿ ಮಂಚು ಲಕ್ಷ್ಮಿ,ಸಹೋದರ ಮಂಚು ವಿಷ್ಣು ಕುಟುಂಬ ಸಮೇತರಾಗಿ ಹಾಜರಾಗಿದ್ದಾರೆ. ಲಕ್ಷ್ಮಿ ಮುಂದೆ ನಿಂತು ಸಹೋದರನ ಮದುವೆ ನೆರವೇರಿಸಿದ್ದಾರೆ. ರಾಜಕೀಯ ಮುಖಂಡ ದಿವಂಗತ ಭೂಮ ನಾಗಿರೆಡ್ಡಿ ದಂಪತಿಯ 2ನೇ ಪುತ್ರಿ ಭೂಮಾ ಮೌನಿಕಾ ರೆಡ್ಡಿ. ಕಳೆದ ವರ್ಷ ಹೈದರಾಬಾದ್‌ನ ಸೀತಾಫಲ್ಮಂಡಿಯಲ್ಲಿ ನಡೆದ ಗಣೇಶ ಉತ್ಸವದ ಪೂಜೆಯಲ್ಲಿ ಮನೋಜ್- ಭೂಮಾರೆಡ್ಡಿಒಟ್ಟಿಗೆ ಭಾಗವಹಿಸಿದ್ದರು. ಆಗಲೇ ಇಬ್ಬರ ಮದುವೆ ಬಗ್ಗೆ ಸುಳಿವು ಸಿಕ್ಕಿತ್ತು.
ಬರೀ ಮಂಚು ಮನೋಜ್‌ಗೆ ಮಾತ್ರವಲ್ಲ ಭೂಮಾ ಮೌನಿಕಾ ರೆಡ್ಡಿಗೂ ಇದು 2ನೇ ಮದುವೆ. ಆಕೆ 2016ರಲ್ಲಿ ಬೆಂಗಳೂರು ಮೂಲಕ ಗಣೇಶ್ ರೆಡ್ಡಿ ಎಂಬುವವರನ್ನು ಮದುವೆ ಆಗಿದ್ದರು. ಇವರಿಗೆ 5 ವರ್ಷದ ಮಗ ಕೂಡ ಇದ್ದಾನೆ. ಆದರೆ 3 ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಇಬ್ಬರು ವಿಚ್ಛೇದನ ಪಡೆದು ದೂರಾಗಿದ್ದರು. ಇನ್ನು ಕೆಲ ತಿಂಗಳುಗಳಿಂದ ನಟ ಮನೋಜ್ ಹಾಗೂ ಮೌನಿಕಾ ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ ವಿಲ್ಲಾದಲ್ಲಿ ಒಟ್ಟಿಗೆ ಸಹಜೀವನ ನಡೆಸುತ್ತಿದ್ಧಾರೆ ಎನ್ನಲಾಗಿತ್ತು.

ನಟ ಮೋಹನ್ ಬಾಬು ಹಾಗೂ ಮೌನಿಕಾ ರೆಡ್ಡಿ ತಂದೆ ಬೇರೆ ಬೇರೆ ಪಕ್ಷಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಹಾಗಾಗಿ ಮೋಹನ್ ಬಾಬು ಈ ಮದುವೆ ಇಷ್ಟವಿಲ್ಲ ಎನ್ನಲಾಗುತ್ತಿತ್ತು. ಮದುವೆಯ ಕೊನೆಯ ಕ್ಷಣಗಳವರೆಗೂ ಅವರು ಮದುವೆ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಇದು ನಿಜವೇ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಮೋಹನ್ ಬಾಬು ಮದುವೆಯಾಗಿ ಭಾಗವಹಿಸಿದ್ದಾರೆ. ಮೌನಿಕ ರೆಡ್ಡಿ ಮಾವನನ್ನು ನೋಡಿ ಭಾವುಕರಾಗಿರುವ ಫೋಟೊಗಳು ವೈರಲ್ ಆಗ್ತಿದೆ.
ಮುಹೂರ್ತಕ್ಕೆ ಕ್ರೀಮ್ ಹಾಗೂ ಗೋಲ್ಡನ್ ಕಲರ್ ಕುರ್ತಾ, ಪಂಚೆಯಲ್ಲಿ ಮನೋಜ್ ಕಾಣಿಸಿಕೊಂಡರೆ, ಗೋಲ್ಡನ್ ಕಲರ್ ಸೀರೆಯಲ್ಲಿ ಮೌನಿಕಾ ಮಿಂಚಿದ್ದಾರೆ. ಇನ್ನು ಸಾಕಷ್ಟು ಒಡವೆಗಳನ್ನು ವಧು ಧರಿಸಿದ್ದಾರೆ. ಇತ್ತೀಚೆಗೆ ನಟ ಮಂಚು ಮನೋಜ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಸುದ್ದಿ ಹಂಚಿಕೊಂಡಿದ್ದರು. ಇನ್ನು ಸಿನಿಕರಿಯರ್ ವಿಚಾರಕ್ಕೆ ಬಂದರೆ ಮನೋಜ್ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟಿದ್ದಾರೆ. 19 ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಿಲ್ಲ.


Click it and Unblock the Notifications











