'ರಾಮಾಯಣ' ಚಿತ್ರಕ್ಕೆ ಮಂಚು ವಿಷ್ಣು ಯತ್ನ; ಶ್ರೀರಾಮ, ಸೀತಾ, ರಾವಣ ಪಾತ್ರಗಳಲ್ಲಿ ಯಾರ್ಯಾರು?
ತೆಲುಗು ನಟ ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಪ್ರಯೋಜನವಾಗಲಿಲ್ಲ. ಇದೀಗ ತಮ್ಮ ಕನಸಿನ 'ರಾಮಾಯಣ' ಚಿತ್ರದ ಬಗ್ಗೆ ವಿಷ್ಣು ಮಾತನಾಡಿದ್ದಾರೆ.
'ರಾಮಾಯಣ' ಹಾಗೂ 'ಮಹಾಭಾರತ' ಕಾವ್ಯಗಳನ್ನು ಆಧರಿಸಿ ಸಾಕಷ್ಟು ನಾಟಕ, ಧಾರಾವಾಹಿ ಸಿನಿಮಾಗಳನ್ನು ಮಾಡಿದ್ದಾರೆ. ಆದರೂ ಪದೇ ಪದೆ ಆ ಕಥೆಗಳನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಲೇ ಇದೆ. 3 ವರ್ಷಗಳ ಹಿಂದೆ 'ಆದಿಪುರುಷ್' ಸಿನಿಮಾ ಬಂದಿತ್ತು. ಇದೀಗ ನಿತೇಶ್ ತಿವಾರಿ ಮತ್ತೆ 'ರಾಮಾಯಣ' ಸಿನಿಮಾ ತೆರೆಗೆ ತರುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದಾರೆ.

ಶ್ರೀರಾಮನ ಚರಿತ್ರೆಯನ್ನು ಸಿನಿಮಾ ಮಾಡುವ ಕನಸು ಸಾಕಷ್ಟು ಜನ ಕಂಡಿದ್ದಾರೆ. 15 ವರ್ಷಗಳ ಹಿಂದೆಯೇ ತೆಲುಗಿನಲ್ಲಿ ಸಿನಿಮಾ ಮಾಡಲು ಪ್ರಯತ್ನಿಸಿದ್ದಾಗಿ ನಟ ಮಂಚು ವಿಷ್ಣು ಹೇಳಿದ್ದಾರೆ. ಮಂಚು ವಿಷ್ಣು ತಂದೆ ಮೋಹನ್ ಬಾಬು ತೆಲುಗಿನ ಜನಪ್ರಿಯ ನಟ. ತಮ್ಮದೇ ಚಿತ್ರನಿರ್ಮಾಣ ಸಂಸ್ಥೆಯಲ್ಲಿ ಒಂದಷ್ಟು ಸಿನಿಮಾಗಳನ್ನು ತಯಾರಿಸಿದ್ದಾರೆ.
'ಕಣ್ಣಪ್ಪ' ಚಿತ್ರವನ್ನು ಕೂಡ ಮೋಹನ್ ಬಾಬು ನಿರ್ಮಿಸಿದ್ದರು. ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಇನ್ನು 15 ವರ್ಷಗಳ ಹಿಂದೆ ಅಂದರೆ 2009ರಲ್ಲಿ ರಾಮಾಯಣ ಸಿನಿಮಾ ಮಾಡಲು ಪ್ರಯತ್ನಿಸಿದ್ದಾರೆ ಮಂಚು ವಿಷ್ಣು ಹೇಳಿದ್ದಾರೆ. "ಶ್ರೀರಾಮನ ಪಾತ್ರದಲ್ಲಿ ನಟಿಸಲು ತಮಿಳು ನಟ ಸೂರ್ಯ ಅವರನ್ನು ಕೇಳಿದ್ದಾಗಿಯೂ ವಿಷ್ಣು ಹೇಳಿದ್ದಾರೆ. ಸೀತೆ ಆಗಿ ಆಲಿಯಾ ಭಟ್ ನಟಿಸಿದ್ದರೆ ಚೆನ್ನಾಗಿರುತ್ತಿತ್ತು. ಇನ್ನು ರಾವಣನಾಗಿ ನಮ್ಮ ತಂದೆ ಮೋಹನ್ ಬಾಬು ಬಿಟ್ಟು ಬೇರೆಯವರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
ಕೆ. ರಾಘವೇಂದ್ರ ರಾವ್ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಚಿತ್ರಕಥೆ, ಡೈಲಾಗ್ ವರ್ಷನ್ ಎಲ್ಲವೂ ಸಿದ್ಧವಿತ್ತು. ಹನುಮಂತನ ಪಾತ್ರದಲ್ಲಿ ನಾನು ನಟಿಸಿದ್ದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೆ ಎಂದು ಮಂಚು ವಿಷ್ಣು ಹೇಳಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ಜ್ಯೂ. ಎನ್‌ಟಿಆರ್ ಸಹೋದರ ಕಲ್ಯಾಣ್ ರಾಮ್ ನಟಿಸಿದ್ದರೆ ಸೂಕ್ತವಾಗಿರುತ್ತಿತ್ತು. ಜಟಾಯು ಆಗಿ ಕಟ್ಟಪ್ಪ ಸತ್ಯರಾಜ್ ಉತ್ತಮ ಆಯ್ಕೆ. ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು, ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ಎಂದು ಮಂಚು ವಿಷ್ಣು ಹೇಳಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
ಸದ್ಯ ನಿಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ಚರ್ಚೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. 4000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದಿದೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.
'ಕಣ್ಣಪ್ಪ' ಚಿತ್ರದಲ್ಲಿ ದಿಣ್ಣನ ಪಾತ್ರದಲ್ಲಿ ವಿಷ್ಣು ನಟಿಸಿದ್ದರು. ಅವರ ಪ್ರಯತ್ನಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಶಿವಣ್ಣ ಅಭಿನಯದ 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಂತೆ ಮಂಚು ವಿಷ್ಣು 'ಕಣ್ಣಪ್ಪ' ಕಥೆಯನ್ನು ತೆರೆಗೆ ತರಲಾಗಿತ್ತು. ರುದ್ರನಾಗಿ ಪ್ರಭಾಸ್, ಕಿರಾಟನಾಗಿ ಮೋಹನ್ ಲಾಲ್ ಮಿಂಚಿದ್ದರು. ಶಿವನ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದರು. ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರಲಿದೆ.


Click it and Unblock the Notifications











