ಮತ್ತೆ ಬೀದಿಗೆ ಖ್ಯಾತ ನಟನ ಕೌಟುಂಬಿಕ ಜಗಳ; ಅಪ್ಪನ ಮನೆ ಮುಂದೆ ಮಗ ಧರಣಿ
ತೆಲುಗು ನಟ ಮೋಹನ್ ಬಾಬು ಹಾಗೂ ಪುತ್ರ ಮನೋಜ್ ನಡುವಿನ ಕೌಟುಂಬಿಕ ಜಗಳ ಮತ್ತೊಮ್ಮೆ ಬೀದಿಗೆ ಬಂದಿದೆ. ಈ ಹಿಂದೆ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಗಿ ವರದಿಯಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದರು. ಮೋಹನ್ ಬಾಬು ಹಾಗೂ ಹಿರಿಯ ಪುತ್ರ ವಿಷ್ಣು ಒಂದ್ಕಡೆ ಕಿರಿಮಗ ಮತ್ತೊಂದು ಕಡೆ ದೂರಾಗಿದ್ದಾರೆ.
ಆಸ್ತಿ ವಿಚಾರಕ್ಕೆ ಮನೋಜ್ ಪದೇ ಪದೆ ಕಿರಿಕ್ ಮಾಡುತ್ತಿದ್ದಾರೆ. ಮೋಹನ್ ಬಾಬು ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪದೇ ಪದೆ ಸಾಬೀತಾಗುತ್ತಿದೆ. 3 ತಿಂಗಳ ಹಿಂದೆ ಚಂದ್ರಮುಖಿ ಬಂಗಲೆ ಎದುರು ಭಾರೀ ಹೈಡ್ರಾಮಾ ನಡೆದಿತ್ತು. ಪ್ರಶ್ನಿಸಲು ಹೋಗಿದ್ದ ಮಾಧ್ಯಮದವರ ಮೇಲೆ ಮೋಹನ್ ಬಾಬು ಗರಂ ಆಗಿ ಹಲ್ಲೆ ಮಾಡಿದ್ದರು. ಬಳಿಕ ಕ್ಷಮೆ ಕೇಳಿದ್ದರು. ಇದೀಗ ಮನೋಜ್ ಅಪ್ಪನ ಮನೆ ಮುಂದೆ ಧರಣಿ ಕೂತಿದ್ದಾರೆ.

ಡಿಸೆಂಬರ್‌ನಲ್ಲಿ ಮನೋಜ್ ವಿರುದ್ಧ ಮೋಹನ್ ಬಾಬು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಗರಂ ಆಗಿದ್ದ ಮನೋಜ್ ಮನೆಗೆ ಹೋಗಿ ಅಪ್ಪನ ಜೊತೆ ವಾಗ್ವಾದ ನಡೆಸಿ ಬಂದಿದ್ದರು. ಇದೀಗ ವಿಷ್ಣು ವಿರುದ್ಧ ಸಹೋದರ ಮನೋಜ್ ಕಳ್ಳತನದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ತಾನು ಇಲ್ಲದ ವೇಳೆ ಅದರಲ್ಲಿ ಮಗಳ ಹುಟ್ಟುಹಬ್ಬದ ದಿನ ವಿಷ್ಣು ಬಾಡಿಗಾರ್ಡ್ಸ್ ನನ್ನ ಮನೆಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಲಪಲ್ಲಿಯಲ್ಲಿರುವ ಮೋಹನ್ ಬಾಬು ಅವರ ನಿವಾಸದ ಬಳಿ ಹೋಗಿ ಮನೋಜ್ ಧರಣಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಮನೋಜ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ತಾವು ಯಾಕೆ ಧರಣಿ ಮಾಡಿದ್ದು ಎಂದು ಕಾರಣ ತಿಳಿಸಿದ್ದಾರೆ. ಸಹೋದರ ಹಾಗೂ ಅಪ್ಪ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಏಪ್ರಿಲ್ 1ರಂದು ಬೆಳಗ್ಗೆ 30 ಕಾರುಗಳಲ್ಲಿ ವಿಷ್ಣು ಅನುಚರರು ನಮ್ಮ ಮನೆ ಮೇಲೆ ದಾಳಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಸಿಸಿಟಿವಿ ಫುಟೇಜ್ ನನ್ನ ಬಳಿಯಿದೆ. ಸಮಯ ಬಂದಾಗ ಎಲ್ಲವನ್ನು ಬಹಿರಂಗಪಡಿಸುತ್ತೇನೆ ಎಂದು ಮನೋಜ್ ಹೇಳಿದ್ದಾರೆ. ಮಗಳ ಹುಟ್ಟುಹಬ್ಬ ಆಚರಣೆಗೆ ಜೈಪುರಕ್ಕೆ ತೆರಳಿದ ಬಳಿಕ ಮನೆ ಮೇಲೆ ದಾಳಿ ಮಾಡಿಸಿ, ತೊಂದರೆ ಕೊಟ್ಟಿದ್ದಾನೆ ಎಂದು ಮನೋಜ್ ಆರೋಪಿಸಿದ್ದಾರೆ.
ನಾನು ಆಸ್ತಿ ಕೇಳಿದ್ದೇನೆ ಎಂದು ಹೇಳುತ್ತಾರೆ. ಅದಕ್ಕೆ ಸಾಕ್ಷಿ ತೋರಿಸೋಕೆ ಹೇಳಿ. ನಾನು ತಪ್ಪು ಮಾಡಿರುವುದು ಸಾಬೀತು ಮಾಡಿದರೆ ಅವರ ಕಾಲಿಗೆ ಬೀಳ್ತೀನಿ ಎಂದು ಮನೋಜ್ ಸವಾಲ್ ಹಾಕಿದ್ದಾರೆ. ಅದಕ್ಕೆ ಸಂಬಂಧಿಸಿದ ಸಿಸಿಟಿಟಿ ಫುಟೇಜ್ ತೋರಿಸಿದರೆ ತಲೆ ಬೋಳಿಸಿಕೊಂಡು ತಿರುಗುತ್ತೇನೆ ಎಂದಿದ್ದಾರೆ. ಈ ಮನೆಯಲ್ಲಿ ನಾನು ಸಾಕಿದ ಪ್ರಾಣಿಗಳು, ಕೆಲ ಸಾಮಗ್ರಿ ಇದೆ. ಅದಕ್ಕಾಗಿ ಬಂದಿದ್ದೇನೆ ಎಂದು ಮನೋಜ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ನನ್ನ ಕುಟುಂಬದಿಂದ ಈವೆರೆಗೆ ಒಂದು ರೂಪಾಯಿ ಪಡೆದಿಲ್ಲ. ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಮಾಡಿ ಹಿಟ್ ಆದ ಬಳಿಕ ಹೋಂ ಬ್ಯಾನರ್‌ನಲ್ಲಿ ಸಿನಿಮಾ ಮಾಡಬೇಕು ಎನ್ನುತ್ತಿದ್ದರು. ವಿಷ್ಣು ಕರಿಯರ್‌ಗೋಸ್ಕರ ನನಗೆ ಲೇಡಿ ಗೆಟಪ್ ಹಾಕಿಸಿ ಸಿನಿಮಾದಲ್ಲಿ ನಟಿಸುವಂತೆ ಮಾಡಿದರು. ಅವರಿಗಾಗಿ ಎಷ್ಟು ಚಾಕರಿ ಮಾಡಿದ್ದೀನಿ. ಆದರೂ ಯಾಕೆ ಹೀಗೆಲ್ಲಾ ಮಾಡ್ತಿದ್ದಾರೆ ಗೊತ್ತಿಲ್ಲ.
ವಿಷ್ಣು ನಟನೆಗ 'ಕನ್ನಪ್ಪ' ಸಿನಿಮಾ ಎದುರು ನಾನು ನಟಿಸಿರುವ 'ಭೈರವ' ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದೆ. ಅಷ್ಟರಲ್ಲಿ ಭಯಬಿದ್ದು 'ಕನ್ನಪ್ಪ' ಬಿಡುಗಡೆ ಮುಂದೂಡಿದರು. ಆ ದ್ವೇಷವನ್ನು ನನ್ನ ಮನೆ ಮೇಲೆ ದಾಳಿ ಮಾಡಿಸಿ ತೀರಿಸಿಕೊಂಡಿದ್ದಾರೆ. ನಮ್ಮ ಪೋಷಕರಿಗೆ ಈ ರಗಳೆ ಬೇಕಿತ್ತಾ? ವಿಷ್ಣು ಕೂತು ಮಾತನಾಡಿ ಎಲ್ಲವನ್ನು ಪರಿಹರಿಸಿಕೊಳ್ಳಬಹುದಿತ್ತಲ್ಲ ಎಂದು ಮನೋಜ್ ಪ್ರಶ್ನಿಸಿದ್ದಾರೆ.


Click it and Unblock the Notifications











