ಅವರು ಅನೇಕರಿಗೆ ಶಕ್ತಿಯ ಆಧಾರಸ್ತಂಭ ; ದರ್ಶನ್ ಪರ ಮಾತನಾಡಿದ ಟಾಲಿವುಡ್ ಸ್ಟಾರ್...!
ಕಳೆದ ಎರಡ್ಮೂರು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ಪಕ್ಕದ ಆಂಧ್ರದ ಕೆಲವರು ಕೆಂಡ ಕಾರುತ್ತಿದ್ದಾರೆ. ಒಬ್ಬರಲ್ಲ.. ಇಬ್ಬರಲ್ಲ.. ಹಲವಾರು ಜನ ದರ್ಶನ್ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಅನ್ನುವ ಅನುಮಾನ ಅನೇಕರಲ್ಲಿದೆ. ಇದರ ನಡುವೆ ಈಗ ಅದೇ ಆಂಧ್ರಪ್ರದೇಶದಿಂದ ಅವರದ್ದೇ ಚಿತ್ರರಂಗದ ನಾಯಕ ದರ್ಶನ್ ಪರ ತಮ್ಮ ಧ್ವನಿ ಎತ್ತಿದ್ದಾರೆ.
ಹೌದು, ದರ್ಶನ್ ಪರ ತಮ್ಮ ಮಾತನಾಡಲು, ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕನ್ನಡ ಚಿತ್ರರಂಗದ ಹಲವರು ಮೀನ -ಮೇಷ ಎಣಿಸುತ್ತಿರುವ ಈ ಸಮಯದಲ್ಲಿ ಟಾಲಿವುಡ್ ಸ್ಟಾರ್ ನಾಗಶೌರ್ಯ, ರೇಣುಕಾ ಸ್ವಾಮಿ ಪ್ರಕರಣದ ಸುತ್ತ ಮುತ್ತ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಪರ ನಿಂತ ಮೊದಲ ತೆಲುಗು ಹೀರೋ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನಾಗಶೌರ್ಯ, ಮೃತರ ಕುಟುಂಬದ ಬಗ್ಗೆ ಕೇಳಿದಾಗ ನನ್ನ ಹೃದಯ ಮರುಗುತ್ತೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ನಾನು ಬಯಸುತ್ತೇನೆ ಎಂದಿರುವ ನಾಗಶೌರ್ಯ, ಈ ವಿಷಯದಲ್ಲಿ ಜನ ಈಗಲೇ ತೀರ್ಮಾನಕ್ಕೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತಿದೆ ಎಂದಿದ್ದಾರೆ. ದರ್ಶನ್ ಅಣ್ಣ ಕನಸಿನಲ್ಲಿಯೂ ಯಾರಿಗೂ ಕೇಡು ಬಯಸಲ್ಲ, ತೊಂದರೆ ಕೊಡುವವರಲ್ಲ ಎಂದು ಹೇಳಿದ್ದಾರೆ.
ದರ್ಶನ್ ಅವರದ್ದು ಉದಾರತೆ, ಸಹೃದಯ ಸ್ವಭಾವದ ವ್ಯಕ್ತಿತ್ವ ಎಂದಿರುವ ನಾಗಶೌರ್ಯ, ಇತರರಿಗೆ ಸಹಾಯ ಮಾಡುವ ಗುಣ ದರ್ಶನ್ಗೆ ಇದೆ ಅಂದಿದ್ದಾರೆ. ಅವರು ಯಾವಾಗಲೂ ಅಗತ್ಯವಿರುವವರ ಸಹಾಯಕ್ಕೆ ಧಾವಿಸುತ್ತಾರೆ. ಅವರು ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ' ಎಂದು ಕೂಡ ಹೇಳಿರುವ ನಾಗ ಶೌರ್ಯ, ಕನಸು ಮನಸಿನಲ್ಲಿ ಕೂಡ ಈ ಸುದ್ದಿಯನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತೆ ಎಂದಿದ್ದಾರೆ.

ಮುಂದುವರೆದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ. ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದಿರುವ ನಾಗ ಶೌರ್ಯ, ಈ ಸವಾಲಿನ ಅವಧಿಯಲ್ಲಿ ಅವರು ಗೌಪ್ಯತೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ಸಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ಅವರು ನಿರಪರಾಧಿ ಎಂಬುದು ಸಾಬೀತಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಗೊತ್ತಾಗುತ್ತದೆ' ಎಂದಿದ್ದಾರೆ .
ಅಂದ್ಹಾಗೇ ನಾಗಶೌರ್ಯ ಅವರ ಈ ನಡೆ, ತೆಲುಗು ಉದ್ಯಮವನ್ನು ಅಚ್ಚರಿಗೊಳಿಸಿದೆ. ನಾಗಶೌರ್ಯ ಅವರ ಅಭಿಮಾನಿಗಳಲ್ಲಿಯೇ ಈ ವಿಚಾರದಲ್ಲಿ ಅಸಮಾಧಾನದ ಅಲೆ ಎದ್ದಿದೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಹೀಗಿರುವಾಗ ನೀವು ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಕನ್ನಡ ಚಿತ್ರರಂಗದವರೇ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದರ್ಶನ್ ಪರ ಮಾತನಾಡ್ಲೇಬೇಕೆನ್ನುವ ಆತುರತೆ ಏನಿತ್ತು ಎಂಬ ಪ್ರಶ್ನೆಯನ್ನೂ ನಾಗಶೌರ್ಯ ಅವರಿಗೆ ಇನ್ನೂ ಕೆಲವರು ಮಾಡುತ್ತಿದ್ದಾರೆ.


Click it and Unblock the Notifications











