ರಸ್ತೆಯಲ್ಲಿ ಕಿತ್ತಾಡುತ್ತಿದ್ದ ಲವರ್‌ಗಳ ಮಧ್ಯ ಪ್ರವೇಶಿಸಿದ ನಟ ನಾಗಶೌರ್ಯಗೆ ಸಿಕ್ಕ ಮರ್ಯಾದೆ ಇದು!
ಸಿನಿಮಾ ನಟರು ಕೇವಲ ತೆರೆ ಮೇಲಿನ ತಮ್ಮ ಅಭಿನಯದಿಂದಾಗಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದರೆ ಸಾಕಾಗುವುದಿಲ್ಲ, ಬದಲಾಗಿ ತೆರೆ ಹಿಂದಿನ ತಮ್ಮ ನಿಜ ಜೀವನದಲ್ಲಿಯೂ ಸಹ ಆತ ಹೆಸರು ಹಾಳು ಮಾಡಿಕೊಳ್ಳದೇ ಇರಬೇಕಾಗುತ್ತದೆ. ಹೌದು, ಓರ್ವ ನಟನನ್ನು ಆತನ ನಿಜ ಜೀವನದ ನಡೆವಳಿಕೆ ನೋಡಿ ಜಡ್ಜ್ ಮಾಡುವವರ ಸಂಖ್ಯೆ ಸಹ ದೊಡ್ಡ ಮಟ್ಟದಲ್ಲಿದೆ.
ನಿಜ ಜೀವನದಲ್ಲಿ ಯಾವ ನಟ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಕಷ್ಟದಲ್ಲಿರುವವರ ಕೈ ಹಿಡಿಯುತ್ತಾನೋ ಆತನನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ನೋಡದ ಜನರೂ ಸಹ ಇಷ್ಟಪಡುತ್ತಾರೆ. ಇನ್ನು ತೆರೆ ಮೇಲೆ ಸಾಲು ಸಾಲು ಡೈಲಾಗ್ ಹೊಡೆದು ಸಂದೇಶ ನೀಡುವ ನಟ ಹೊರ ಜಗತ್ತಿನಲ್ಲಿ ಸರಿಯಾದ ರೀತಿ ನಡೆದುಕೊಳ್ಳದೇ ಇದ್ದರೆ ಈತ ತೆರೆಮೇಲೆ ಮಾತ್ರ ಸ್ಟಾರ್, ನಿಜ ಜೀವನದಲ್ಲಿ ವಿಲನ್ ಎಂದು ಕಾಮೆಂಟ್ ಮಾಡಿಬಿಡುತ್ತಾರೆ.

ಅದರಲ್ಲೂ ಮಹಿಳೆಯರನ್ನು ಗೌರವಿಸುವ ನಟರೆಂದರೆ ನಮ್ಮ ಜನ ನೀಡುವ ಮರ್ಯಾದೆಯೇ ಬೇರೆ. ಯಾವ ನಟ ಮಹಿಳೆಯರಿಗೆ ಒಳ್ಳೆಯ ಗೌರವ ನೀಡುತ್ತಾನೋ ಅಂತಹ ನಟನನ್ನು ಹೊಗಳುತ್ತಾರೆ. ಯಾವ ನಟ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೋ ಅಂತಹ ನಟನನ್ನು ಹೆಚ್ಚಾಗಿ ಇಷ್ಟಪಡದ ಸಿನಿ ರಸಿಕರು ಆ ನಟನ ಸಿನಿಮಾಗಳನ್ನು ಸಹ ನೋಡಲು ಇಚ್ಛಿಸುವುದಿಲ್ಲ. ಹೀಗಾಗಿ ನಟರು ಹೊರಗಿನ ಪ್ರಪಂಚದಲ್ಲಿ ತುಂಬಾ ಜಾಗರೂಕರಾಗಿ ಹೆಜ್ಜೆ ಇಡಬೇಕಾಗುತ್ತದೆ.
ಇನ್ನು ಕೆಲವೊಮ್ಮೆ ನಟರು ಹೊರಗಡೆ ಸಾರ್ವಜನಿಕರ ಜತೆ ನಡೆದುಕೊಳ್ಳುವ ರೀತಿ ತಪ್ಪಾಗಿ ಬಿಂಬಿತವಾಗಿದ್ದ ಉದಾಹರಣೆಯೂ ಸಹ ಇದೆ. ಈ ಸಾಲಿಗೆ ಇದೀಗ ತೆಲುಗು ನಟ ನಾಗಶೌರ್ಯ ಸಹ ಸೇರ್ಪಡೆಗೊಂಡಿದ್ದಾರೆ. ಸಾಮಾಜಿಕ ಜಾಲತಾಣದ್ಲಲಿ ವಿಡಿಯೊವೊಂದು ಹರಿದಾಡುತ್ತಿದ್ದು, ಈ ವಿಡಿಯೊದಲ್ಲಿ ನಾಗಶೌರ್ಯ ಯುವಕನೋರ್ವನ ಜತೆ ಮಾತಿನ ಚಕಮಕಿ ನಡೆಸಿದ್ದಾರೆ.

ಹೌದು, ರಸ್ತೆಯಲ್ಲಿ ಯುವಕನೋರ್ವನ ಜತೆ ನಾಗಶೌರ್ಯ ಮಾತಿ ಚಕಮಕಿ ನಡೆಸಿದ್ದ ದೃಶ್ಯ ವೈರಲ್ ಆಗಿದ್ದು, ನಟನ ನಡೆ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರಿದ್ದರು. ಆದರೆ ವಿಡಿಯೊ ಸತ್ಯಾಂಶವೇ ಬೇರೆ ಇದ್ದು, ಆ ಯುವಕ ತನ್ನ ಜತೆ ಇದ್ದ ಯುವತಿಯೋರ್ವಳಿಗೆ ಹಲ್ಲೆ ನಡೆಸುತ್ತಿದ್ದ ಎಂಬ ಕಾರಣಕ್ಕೆ ನಾಗಶೌರ್ಯ ಮಧ್ಯ ಪ್ರವೇಶಿಸಿ ಯುವಕನ ವರ್ತನೆ ವಿರುದ್ಧ ಮಾತನಾಡಿದ್ದಾರೆ. ನೀನು ಆ ಹುಡುಗಿಯ ಮೇಲೆ ಕೈ ಮಾಡಿದ್ದನ್ನು, ನಾನೇ ನೋಡಿದ್ದೇನೆ, ಆ ಹುಡುಗಿಗೆ ಕ್ಷಮೆ ಕೇಳು ಎಂದು ನಾಗಶೌರ್ಯ ಆ ಹುಡುಗನ ಕೈ ಹಿಡಿದು ಹೇಳಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಆ ಯುವಕ ಆಕೆ ನನ್ನ ಪ್ರಿಯತಮೆ ಎಂದು ಉತ್ತರ ನೀಡಿ ಕ್ಷಮೆ ಯಾಕೆ ಕೇಳಬೇಕು ಎಂದಿದ್ದಾನೆ. ಪ್ರಿಯತಮೆ ಆದರೆ ಏನು ಓರ್ವ ಹುಡುಗಿ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೈ ಮಾಡಲು ನೀನು ಯಾರು, ಸುಮ್ಮನೆ ಕ್ಷಮೆ ಕೇಳು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಯುವಕನ ಜತೆ ಇದ್ದ ಯುವತಿಯೇ ಬಿಡಿ ಸರ್ ಎಂದು ಆ ಯುವಕನನ್ನು ಅಲ್ಲಿಂದ ಕರೆದೊಯ್ದಿದ್ದಾಳೆ. ಇನ್ನು ಅಕ್ಕಪಕ್ಕ ನೆರೆದಿದ್ದವರೂ ಸಹ ಆ ಯುವಕನನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರೂ ಸಹ ಯುವತಿಯೇ ಆತನನ್ನು ಅಲ್ಲಿಂದ ಕರೆದೊಯ್ದ ಕಾರಣ ಪ್ರೇಮಿಗಳ ಜಗಳದಲ್ಲಿ ಮಧ್ಯ ಪ್ರವೇಶಿಸಿದವರಿಗೆ ಹಿನ್ನಡೆಯನ್ನುಂಟುಮಾಡಿದೆ.
ಇನ್ನು ನಾಗ ಶೌರ್ಯ ಅವರ ಈ ನಡೆ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಸಹ ಮಹಿಳೆಯರ ಮೇಲೆ ನಡೆಯುವ ಹಲ್ಲೆ ಮಾಡುವ ಕಿಡಿಗೇಡಿಗಳ ವಿರುದ್ಧ ದನಿ ಎತ್ತಿದ ಇವರು ನಿಜವಾದ ಹೀರೊ ಎಂದು ಹೊಗಳಿದ್ದಾರೆ.


Click it and Unblock the Notifications











