ಜ್ಯೂ. ಎನ್‌ಟಿಆರ್ ಬಳಿಕ ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಚಿತ್ರಕ್ಕೆ ರುಕ್ಮಿಣಿ ವಸಂತ್ ಆಯ್ಕೆ!
ಕನ್ನಡದ ಭರವಸೆಯ ನಟಿಯರು ಸದ್ಯ ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ಸದ್ದು ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಸಾಲು ಸಾಲಾಗಿ ಬೆಂಗಳೂರು ಬೆಡಗಿಯರು ಅಕ್ಕ ಪಕ್ಕದ ಚಿತ್ರರಂಗದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಬಾಲಿವುಡ್ ಗಲ್ಲಿಗಳಲ್ಲಿ ಕೂಡ ಈಗ ರುಕ್ಮಿಣಿ ವಸಂತ್ ಕ್ರೇಜ್ ಶುರುವಾಗಿದೆ.
ತೆಲುಗು, ತಮಿಳಿನ ದೊಡ್ಡ ದೊಡ್ಡ ನಟರ ಸಿನಿಮಾಗಳಿಗೆ ರುಕ್ಮಿಣಿ ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಜೋಡಿಯ 'ಡ್ರ್ಯಾಗನ್' ಚಿತ್ರದ ನಾಯಕಿಯಾಗಿ ರುಕ್ಕು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಫಸ್ಟ್ ಗ್ಲಿಂಪ್ಸ್‌ನಲ್ಲಿ ಆಕೆಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದೀಗ ಮತ್ತೊಂದು ತೆಲುಗು ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ.

ಟಾಲಿವುಡ್ ಸ್ಟಾರ್ ನಟ ನಾನಿ ನಿರ್ಮಾಣದ ಮುಂದಿನ ಚಿತ್ರದಲ್ಲಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. ಮುರಳಿಕಾಂತ್ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಾಲ್ ಪೋಸ್ಟರ್ ಸಿನಿಮಾ ಬ್ಯಾನರ್ ಅಡಿಯಲ್ಲಿ ನಾನಿ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ 'ಹಿಟ್: ದಿ ಥರ್ಡ್ ಕೇಸ್' ಸಿನಿಮಾ ನಿರ್ಮಿಸಿ ನಟಿಸಿದ್ದರು ನಾನಿ. ಈಗ ತಮ್ಮ ಬ್ಯಾನರ್ ಮುಂದಿನ ಚಿತ್ರಕ್ಕೆ ರುಕ್ಮಿಣಿ ವಸಂತ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಚರ್ಚೆಯಲ್ಲಿದ್ದಾರೆ.
ಈಗಾಗಲೇ ಈ ಬಗ್ಗೆ ರುಕ್ಮಿಣಿ ವಸಂತ್ ಬಳಿ ಚಿತ್ರತಂಡ ಮಾತುಕತೆ ನಡೆಸುತ್ತಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಮಾಹಿತಿ ಹೊರಬರಲಿದೆ. 'ದಂಡೋರ' ಎಂಬ ಸಿನಿಮಾ ಮಾಡಿ ಮುರಳಿಕಾಂತ್ ಭರವಸೆ ಮೂಡಿಸಿದ್ದಾರೆ. ಹಾಗಾಗಿ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ನಾನಿ ಮುಂದಾಗಿದ್ದಾರೆ. ಚಿತ್ರಕ್ಕೆ ರುಕ್ಮಿಣಿ ನಾಯಕಿ ಎನ್ನಲಾಗ್ತಿದೆ. ನಾಯಕ ಯಾರು? ಕಥೆ ಏನು? ಇದು ಮಹಿಳಾ ಪ್ರಧಾನ ಸಿನಿಮಾನಾ? ಎನ್ನುವುದನ್ನು ಕಾದು ನೋಡಬೇಕಿದೆ.

'ಕಾಂತಾರ: ಚಾಪ್ಟರ್- 1' ಬಳಿಕ ಕನ್ನಡದಲ್ಲಿ ರುಕ್ಮಿಣಿ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಯಶ್ ಜೊತೆ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ರುಕ್ಮಿಣಿ ಮಿಂಚಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಆದರೆ ಯಾವಾಗ ಎನ್ನುವುದು ಮಾತ್ರ ಗೊತ್ತಿಲ್ಲ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ಯಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮೆಲಿಸ್ಸಾ ಎಂಬ ಜಬರ್ದಸ್ತ್ ಪಾತ್ರದಲ್ಲಿ ರುಕ್ಕು ಮಿಂಚಿದ್ದಾರೆ.
ರುಕ್ಮಿಣಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಭೈರತಿ ರಣಗಲ್' ಬಳಿಕ 'ಕಾಂತಾರ- 1' ಸಿನಿಮಾ ಬಂತು. ಚಿತ್ರರಂಗಕ್ಕೆ ಬಂದ 7 ವರ್ಷಗಳಲ್ಲಿ ಕನ್ನಡದ 7 ಚಿತ್ರಗಳಲ್ಲಿ ಮಾತ್ರ ಬಣ್ಣ ಹಚ್ಚಿದ್ದಾರೆ. ಆದರೆ ತೆಲುಗು, ತಮಿಳು ಫಿಲ್ಮ್ ಮೇಕರ್ಸ್ ಕಣ್ಣಿಗೆ ಆಕೆ ಬಿದ್ದಿದ್ದಾರೆ. ಮುಂದೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಯಿದೆ. ಇತ್ತೀಚೆಗೆ ಧನುಷ್ ನಟನೆಯ ಚಿತ್ರಕ್ಕೂ ರುಕ್ಮಿಣಿ ನಾಯಕಿ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಅದು ನಿಜವಾಗಲಿಲ್ಲ.
ಬಾಲಿವುಡ್‌ನಲ್ಲಿ ಕೂಡ ಕೆಲ ಕಥೆಗಳನ್ನು ರುಕ್ಮಿಣಿ ಕೇಳುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಚಿತ್ರದಲ್ಲಿ ಕೂಡ ನಟಿಸ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬಳಿಕ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಸಿನಿಮಾ ಮಾತುಕತೆಗಾಗಿ ಆಗಾಗ್ಗೆ ಮುಂಬೈ ಫ್ಲೈಟ್ ಹತ್ತಿ ಇಳಿಯುತ್ತಿದ್ದಾರೆ. ಈ ವರ್ಷ ಕೊನೆಗೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ ಈ ಚಿತ್ರದಲ್ಲಿ ನಾಯಕಿ ಪಾತ್ರ ಅಲ್ಲ ಎನ್ನಲಾಗ್ತಿದೆ. 'ಡ್ರ್ಯಾಗನ್' ಸಿನಿಮಾ ಮುಂದಿನ ವರ್ಷ ಜೂನ್‌ನಲ್ಲಿ ತೆರೆಗೆ ಬರಲಿದೆ. ಈ ನಡುವೆ ನಾನಿ ನಿರ್ಮಾಣದ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯಿದೆ.


Click it and Unblock the Notifications