"ನಮ್ಮ ಚಿತ್ರಗಳಿಗೆ ಆಸ್ಕರ್ ಸರ್ಟಿಫಿಕೇಟ್ ಬೇಕಾಗಿಲ್ಲ": ನಿಖಿಲ್ ಶಾಕಿಂಗ್ ಹೇಳಿಕೆ
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'RRR' ಸಿನಿಮಾ ಹಾಲಿವುಡ್ ಫಿಲ್ಮ್ ಮೇಕರ್ಸ್ ಮನಗೆದ್ದಿದ್ದು ಗೊತ್ತೇಯಿದೆ. ಈ ಬಾರಿ ಆಸ್ಕರ್ ಅವಾರ್ಡ್‌ಗೆ ಈ ಸಿನಿಮಾ ನಾಮಿನೇಟ್ ಅಗುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಗುಜರಾತಿ ಭಾಷೆಯ 'ಚೆಲ್ಲೋ ಶೋ' ಚಿತ್ರವನ್ನು ಆಯ್ಕೆ ಮಾಡಿ ಆಸ್ಕರ್ ನಾಮನಿರ್ದೇಶನಕ್ಕೆ ಕಳುಹಿಸಲಾಗಿದೆ. ಇದರಿಂದ ಅಭಿಮಾನಿಗಳೆಲ್ಲ ನಿರಾಸೆಗೊಂಡಿದ್ದರು. ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸ್ತಿದ್ದಾರೆ. 'ಕಾರ್ತಿಕೇಯ- 2' ಸಿನಿಮಾದಲ್ಲಿ ನಟಿಸಿ ಗೆದ್ದ ನಟ ನಿಖಿಲ್ ಸಿದ್ದಾರ್ಥ್ ಮಾತ್ರ 'RRR' ಚಿತ್ರಕ್ಕೆ ಆಸ್ಕರ್ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದಿದ್ದಾರೆ.
'RRR' ಚಿತ್ರಕ್ಕೆ ಈಗಲೂ ಆಸ್ಕರ್‌ಗೆ ಅವಕಾಶ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಹಾಗೂ ಸಾಯನ್ಸಸ್ ಜ್ಯೂರಿ ತಾನಾಗಿಯೇ ಈ ಚಿತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಇನ್ನು ರಾಜಮೌಳಿ ಕೂಡ ಹಾಲಿವುಡ್ ಹಾಗೂ ಓವರ್‌ಸೀಸ್ ಡಿಸ್ಟ್ರಿಬ್ಯೂಟರ್ಸ್ ಸಹಾಯದಿಂದ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 'RRR' ಆಯ್ಕೆ ಮಾಡದೇ ಇದ್ದಿದ್ದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ನಟ ನಿಖಿಲ್ ಸಿದ್ದಾರ್ಥ್ ಪ್ರತಿಕ್ರಿಯಿಸಿದ್ದಾರೆ. 'RRR' ಸಿನಿಮಾ ಆಸ್ಕರ್ ನಾಮಿನೇಷನ್‌ಗೆ ಆಯ್ಕೆ ಆಗದೇ ಇರುವುದರ ಬಗ್ಗೆ ಮಾತನಾಡಿರುವ ನಿಖಿಲ್, ನಮಗ್ಯಾಕೆ ಆಸ್ಕರ್? ನಮಗೆ ಆ ಪ್ರಶಸ್ತಿ ಬೇಕೆ? ಎಂದು ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ತಮ್ಮ ಹೇಳಿಕೆ ಬಗ್ಗೆ ವಿವರಣೆ ನೀಡಿರುವ ಯುವ ನಟ "ತಪ್ಪು ತಿಳಿಯಬೇಡಿ. ನಮಗೆ ಆಸ್ಕರ್ ಬೇಕಾಗಿಲ್ಲ ಎಂಬುದು ನನ್ನ ಭಾವನೆ. 'RRR' ಚಿತ್ರವನ್ನು ದೇಶ ವಿದೇಶದ ಸಿನಿರಸಿಕರು ಕೊಂಡಾಡಿದ್ದಾರೆ. ಅದೊಂದು ದೊಡ್ಡ ಸಾಧನೆ. ಇದಕ್ಕಿಂತ ದೊಡ್ಡ ಆಸ್ಕರ್ ಪ್ರಶಸ್ತಿ ಬೇಕೆ? ನಮ್ಮ ಚಿತ್ರಗಳಿಗೆ ಆಸ್ಕರ್ ಸರ್ಟಿಫಿಕೇಟ್ ಯಾಕೆ ಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ನಮಗೆ ರಾಷ್ಟ್ರೀಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಗಳಿವೆ. ಎಲ್ಲಾ ಪ್ರಶಸ್ತಿಗಳಂತೆ ಆಸ್ಕರ್ ಕೂಡ ವಿದೇಶದಲ್ಲಿ ನೀಡುವ ಪ್ರಶಸ್ತಿ. ಅದಕ್ಕೆ ನಾವೇಕೆ ಇಷ್ಟೆಲ್ಲಾ ರಾದ್ದಾಂತ ಮಾಡಬೇಕು, ಆಸ್ಕರ್ ಮುಖ್ಯವಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ" ಎಂದು ನಿಖಿಲ್ ಹೇಳಿದ್ದಾರೆ.

ನಿಖಿಲ್ ಅಭಿನಯದ 'ಕಾರ್ತಿಕೇಯ -2' ಸಿನಿಮಾ ಆಗಸ್ಟ್ 13ಕ್ಕೆ ರಿಲೀಸ್ ಆಗಿತ್ತು. ಮೀಡಿಯಂ ಬಜೆಟ್ಟಿನ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿ ಅಚ್ಚರಿ ತಂದಿತ್ತು 120 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಶ್ರೀಕೃಷ್ಣನ ಕುರಿತು ಮಾಡಿದ್ದ ಕಥೆ ಉತ್ತರ ಭಾರತದ ಪ್ರೇಕ್ಷಕರ ಮನಗೆದ್ದಿತ್ತು. ಆರಂಭದಲ್ಲಿ ಕೇವಲ 50 ಸ್ಕ್ರೀನ್‌ಗಳಲ್ಲಿ ಹಿಂದಿ ವರ್ಷನ್ ಸಿನಿಮಾ ರಿಲೀಸ್ ಆಗಿತ್ತು. ಆದರೆ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದ ಕಾರಣ ಸ್ಕ್ರೀನ್‌ಗಳ ಸಂಖ್ಯೆಯನ್ನು ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಒಂದು ತಿಂಗಳ ಕಾಲ ಸಿನಿಮಾ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿತ್ತು.


Click it and Unblock the Notifications











