ತೆಲುಗು ನಟ ನಿತೀನ್ ಮದುವೆ: 'ಭೀಷ್ಮ'ನ ಕೈಹಿಡಿಯುವ ಆ ಹುಡುಗಿ ಯಾರು?
ತೆಲುಗಿನ ಖ್ಯಾತ ನಟ ನಿತೀನ್ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. 36 ವರ್ಷದ ನಟ, ನಿರ್ಮಾಪಕ ತನ್ನ ಸ್ನೇಹಿತೆಯೊಂದಿಗೆ ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ.
ಭೀಷ್ಮ ಸಿನಿಮಾದ ಬಿಡುಗಡೆಗೆಗೆ ಸಜ್ಜಾಗುತ್ತಿರುವ ನಿತೀನ್ ಗೆ ಈ ವರ್ಷ ಡಬಲ್ ಸಂಭ್ರಮ. ಒಂದು ಕಡೆ ಭೀಷ್ಮ ಸಿನಿಮಾದ ಬಿಡುಗಡೆ ಇನ್ನೊಂದು ಕಡೆ ನಿತೀನ್ ವಿವಾಹ ಸಮಾರಂಭ. ಅಷ್ಟಕ್ಕೂ, ನಿತೀನ್ ಮದುವೆಯಾಗುತ್ತಿರುವ ಆ ಹುಡುಗಿ ಯಾರು? ಯಾವಾಗ ವಿವಾಹ? ಮುಂದೆ ಓದಿ....

ಏಪ್ರಿಲ್ ತಿಂಗಳಲ್ಲಿ ಮದುವೆ
ಸದ್ಯದ ಮಾಹಿತಿ ಪ್ರಕಾರ, ನಿತೀನ್ ಅವರ ವಿವಾಹ ಏಪ್ರಿಲ್ ತಿಂಗಳಲ್ಲಿ ನೆರವೇರಲಿದೆ. ಏಪ್ರಿಲ್ 16 ರಂದು ದುಬೈನಲ್ಲಿ ಮದುವೆ ಮಹೋತ್ಸವ ನಡೆಯಲಿದೆ. ಒಂದು ದಿನದ ಮುಂಚೆ ಏಪ್ರಿಲ್ 15 ರಂದು ಪ್ರೀ ವೆಡ್ಡಿಂಗ್ ಸಮಾರಂಭ ಆಯೋಜಿಸಿದ್ದಾರಂತೆ.

ಪ್ರೇಮ ವಿವಾಹ
ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಎಂಬ ಯುವತಿಯ ಜೊತೆ ಸ್ನೇಹ ಹೊಂದಿರುವ ನಟ ನಿತೀನ್, ಈಗ ಅದೇ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲಿದ್ದಾರಂತೆ. ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ತಿಳಿಸಿ, ಅವರಿಂದಲೂ ಸಮ್ಮತಿ ಪಡೆದು ಮದುವೆಯಾಗುತ್ತಿದ್ದಾರೆ.

ಹೈದರಾಬಾದ್ ಆರತಕ್ಷತೆ
ದುಬೈನಲ್ಲಿ ಮದುವೆ ನಡೆಯಲಿದೆ. ಸಂಗೀತ ಕಾರ್ಯಕ್ರಮವೂ ಅಲ್ಲಿ ಆಯೋಜಿಸಲಾಗಿದೆ. ಅದಾದ ಸ್ವಲ್ಪ ದಿನದ ಬಳಿಕ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಳ್ಳುವ ಯೋಚನೆ ಇದೆ. ಈಗಾಗಲೇ ಎರಡು ಕುಟುಂಬದವರು ಮದುವೆಗಾಗಿ ಎಲ್ಲ ತಯಾರಿ ಆರಂಭಿಸಿದ್ದಾರೆ. ದುಬೈನಲ್ಲಿ ಹೋಟೆಲ್ ಕೂಡ ಬುಕ್ ಆಗಿದೆ.

ಭೀಷ್ಮ ಬಿಡುಗಡೆ ಯಾವಾಗ?
ವೆಂಕಿ ಕುಡುಮುಲಾ ನಿರ್ದೇಶನದಲ್ಲಿ ಬರುತ್ತಿರುವ ಭೀಷ್ಮ ಸಿನಿಮಾ ಫೆಬ್ರವರಿ 21 ರಂದು ತೆರೆಕಾಣಲಿದೆ. ನಿತೀನ್, ರಶ್ಮಿಕಾ ಮಂದಣ್ಣ ಮತ್ತು ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ಮದುವೆ ಮಾಡಿಕೊಳ್ಳಲಿದ್ದಾರೆ.


Click it and Unblock the Notifications











