'ಕಲ್ಕಿ' ಆರ್ಭಟ ಎಲ್ಲವೂ ಫೇಕ್..ಫೇಕ್? ಪ್ರಭಾಸ್ ಫುಲ್ ಟ್ರೋಲ್
ಸ್ಟಾರ್ ನಟರಿಗೆ ಸಿನಿಮಾಗಳಲ್ಲಿ ಡ್ಯೂಪ್ ಬಳಸುವುದು ಹೊಸದೇನು ಅಲ್ಲ. ಟೆಕ್ನಾಲಜಿ ಬೆಳೆದಂತೆ ಇದು ಹೆಚ್ಚಾಗುತ್ತಲೇ ಇದೆ. ಪ್ರಭಾಸ್ ತಮ್ಮ ಸಿನಿಮಾಗಳಲ್ಲಿ ಹೆಚ್ಚು ಡ್ಯೂಪ್ ಬಳಸುತ್ತಾರೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. 'ಕಲ್ಕಿ 2898 AD' ಚಿತ್ರದ ಮೇಕಿಂಗ್ ವೀಡಿಯೋ ತೋರಿಸಿ ಸಿಕ್ಕಾಪಟ್ಟೆ ಅಣಕವಾಡುತ್ತಿದ್ದಾರೆ.
ತಮ್ಮ ನೆಚ್ಚಿನ ನಟನನ್ನು ಹೊಗಳುವ ಭರದಲ್ಲಿ ಮತ್ತೊಬ್ಬ ನಟನನ್ನು ಹೀಯ್ಯಾಳಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾ ಅದಕ್ಕೆ ದೊಡ್ಡ ಬಲ ತಂದುಕೊಟ್ಟಿದೆ. ಸುಖಾಸುಮ್ಮನೆ ಏನಾದರೂ ಫೋಟೊ, ವೀಡಿಯೋ ತೋರಿಸಿ ಟ್ರೋಲ್ ಮಾಡುವ ಕೆಟ್ಟ ಸಂಸ್ಕೃತಿ ಹೆಚ್ಚಾಗಿದೆ. ಇದೀಗ ಪ್ರಭಾಸ್ ಅಭಿಮಾನಿಗಳನ್ನು ಇದೇ ರೀತಿ ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.

ರಿಸ್ಕಿ ಸ್ಟಂಟ್ಸ್ ಮಾಡುವಾಗ ನಟ, ನಟಿಯರಿಗೆ ಡ್ಯೂಪ್ ಬಳಸುವುದು ಗೊತ್ತೇಯಿದೆ. ಕಿರಣ್ ಎಂಬುವವರು ಪ್ರಭಾಸ್ ಸಿನಿಮಾಗಳಿಗೆ ಬಾಡಿ ಡಬಲ್ ಆಗಿ ಕೆಲಸ ಮಾಡುತ್ತಾರೆ. ಈ ಹಿಂದೆ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಕಿರಣ್ ಕೆಲಸ ಮಾಡಿದ ಬಗ್ಗೆ ವೇದಿಕೆಯಲ್ಲೇ ಪ್ರಭಾಸ್ ಮಾತನಾಡಿದ್ದರು. ಆತನಿಗೆ ಧನ್ಯವಾದ ತಿಳಿಸಿದ್ದರು. ಪ್ರಭಾಸ್ ಆಕ್ಷನ್ ಸನ್ನಿವೇಶಗಳಲ್ಲಿ ಹೆಚ್ಚು ಹೆಚ್ಚು ನಟಿಸುತ್ತಾರೆ. ಆದರೆ ಅವರಿಗಿಂತ ಅವರ ಡ್ಯೂಪ್ ಕೆಲಸ ಮಾಡುವುದೇ ಹೆಚ್ಚು ಎಂದು ಟ್ರೋಲ್ ಮಾಡಲಾಗ್ತಿದೆ.
ಪ್ರಶಾಂತ್ ನೀಲ್ ಹಾಗೂ ನಾಗ್ ಅಶ್ವಿನ್ ರೀತಿಯ ನಿರ್ದೇಶಕರಿಗೆ ಪ್ರಭಾಸ್ ಜೊತೆ ಕೆಲಸ ಮಾಡುವುದು ಸುಲಭ. ಕ್ಲೋಸ್‌ಅಪ್ ಶಾಟ್ಸ್ ತೆಗೆದುಕೊಂಡು ಬಿಟ್ಟರೆ ಮುಗೀತು. ಉಳಿದಿದ್ದು ಅವರ ಬಾಡಿ ಡಬಲ್ ಬಳಸಿ ಚಿತ್ರೀಕರಣ ಮಾಡಬಹುದು. ಗ್ರಾಫಿಕ್ಸ್, ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಸಿನಿಮಾದಲ್ಲಿ ಪ್ರಭಾಸ್ ನಟಿಸಿದಂತೆ, ಸ್ಟಂಟ್ ಮಾಡಿದಂತೆ ತೋರಿಸಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರಭಾಸ್ ಅಭಿಮಾನಿಗಳು ಕೂಡ ಇದಕ್ಕೆ ತಿರುಗೇಟು ನೀಡುತ್ತಿದ್ದಾರೆ. ಪ್ರಭಾಸ್ ಈ ಹಿಂದೆ ಸಿನಿಮಾಗಳಲ್ಲಿ ಕಷ್ಟಪಟ್ಟು ಸ್ಟಂಟ್ಸ್ ಮಾಡಿರುವುದನ್ನು ತೋರಿಸಿ ಪ್ರತ್ಯುತ್ತರ ನೀಡುತ್ತಿದ್ದಾರೆ. ಡ್ಯೂಪ್ ಎನ್ನುವುದು ಕಾಮನ್. ಎಲ್ಲಾ ಕಡೆಗಳಲ್ಲಿ ಬಳಸುವುದಿಲ್ಲ. ಪ್ರಭಾಸ್ ಸಾಧ್ಯವಾದಷ್ಟು ತಾವೇ ತಮ್ಮ ಸಿನಿಮಾಗಳಲ್ಲಿ ನಟಿಸುತ್ತಾರೆ. ಅದಕ್ಕೆ ಇಲ್ಲಿದೆ ಸಾಕ್ಷಿ ಎಂದು ತೋರಿಸುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಹೀಗೆ ಬಾಡಿ ಡಬಲ್ ಬಳಸಿ ಸಿನಿಮಾ ಚಿತ್ರೀಕರಣ ನಡೆಸುವುದು ಹೆಚ್ಚು ಚಾಲ್ತಿಯಲ್ಲಿ ಇತ್ತು. ಸಲ್ಮಾನ್ ಖಾನ್, ಶಾರುಖ್ ಖಾನ್ ಸಿನಿಮಾಗಳಲ್ಲಿ ಇದನ್ನು ನೋಡುತ್ತಿದ್ದೆವು. ಪ್ರಭಾಸ್ ಕೂಡ ಇದನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಎಷ್ಟರಮಟ್ಟಿಗೆ ಅವರ ಸಿನಿಮಾಗಳಲ್ಲಿ ಡ್ಯೂಪ್ ಬಳಸಿ ಚಿತ್ರೀಕರಣ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಸದ್ಯ ವೈರಲ್ ಆಗಿರುವ ವೀಡಿಯೋ ನಿಜಾನಾ? ಫೇಕಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಪ್ರಭಾಸ್ ಅಬ್ಬರಿಸುತ್ತಿದ್ದಾರೆ. 'ಸಲಾರ್' ಸಕ್ಸಸ್ ಬಳಿಕ 'ದಿ ರಾಜಾಸಾಬ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಫೌಜಿ' ಚಿತ್ರವನ್ನು ಸಹ ಆರಂಭಿಸಿದ್ದಾರೆ. ಹನು ರಾಘವಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಬಾಹುಬಲಿ' ಬಳಿಕ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿರುವ ಸಿನಿಮಾಗಳೆಲ್ಲಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸುತ್ತಿದೆ.
ಮುಂದೆ 'ಸಲಾರ್'-2 ಚಿತ್ರದಲ್ಲಿ ಪ್ರಭಾಸ್ ನಟಿಸಬೇಕಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ಚಿತ್ರ ನಿರ್ದೇಶಿಸಲಿದ್ದಾರೆ. ಬಳಿಕ ಹೊಂಬಾಳೆ ಸಂಸ್ಥೆಯ ಮತ್ತೆರಡು ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಈಗಾಗಲೇ ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾ ಲುಕ್ ಟೆಸ್ಟ್ ನಡೆದಿದೆ ಎನ್ನಲಾಗ್ತಿದೆ. 'ಫೌಜಿ' ಚಿತ್ರದ ನಿರ್ದೇಶಕನಿಗೆ ಹೊಂಬಾಳೆ ಸಂಸ್ಥೆಯಿಂದ ಪ್ರಭಾಸ್ ಅಡ್ವಾನ್ಸ್ ಕೊಡಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.


Click it and Unblock the Notifications











