ರೇಣುಕಾಸ್ವಾಮಿ ಪ್ರಕರಣದ ನಡುವೆ ತೆಲುಗು ನಟ ಸಾಯಿ ಧರಂ ತೇಜ್ ಪೋಸ್ಟ್ ವೈರಲ್
ಸೋಶಿಯಲ್ ಮೀಡಿಯಾ ಬಳಕೆ ಒಂದು ಗೀಳಾಗಿ ಪರಿಣಮಿಸಿದೆ. ಸೋಶಿಯಲ್ ಮೀಡಿಯಾ ಮೂಲಕ ಲಕ್ಷಾಂತರ ಜನರನ್ನು ಕ್ಷಣಗಳಲ್ಲಿ ತಲುಪುವುದು ಮಾತ್ರವಲ್ಲ ಅಭಿಪ್ರಾಯ ಮೂಡಿಸಲು ಸಾಧ್ಯವಾಗುತ್ತಿದೆ. ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ. ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಇದನ್ನು ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಸದ್ಯ ಸೋಶಿಯಲ್ ಮೀಡಿಯಾವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತೇಯಿದೆ. ಇಷ್ಟವಾಗದವರ ಮೇಲೆ ದ್ವೇಷ ಹರಡುವುದು, ನೆಗೆಟಿವಿಟಿ ಹೆಚ್ಚಿಸುವುದು, ಹೆಣ್ಣು ಮಕ್ಕಳ ಬಗ್ಗೆ ಇಷ್ಟಪಟ್ಟಂತೆ ಪೋಸ್ಟ್‌ಗಳು ಮಾಡುವುದು, ಸಿನಿಮಾ ತಾರೆಯರನ್ನು ಕೆಟ್ಟದಾಗಿ ಬೈಯುವುದು ಹೀಗೆ ಸೋಶಿಯಲ್ ಮೀಡಿಯಾ ವಿಕೃತಿಗೆ ಎಲ್ಲೆ ಎನ್ನುವಂತಾಗಿದೆ. ಡೀಪ್ ಫೇಕ್ ಫೋಟೊ, ವಿಡಿಯೋಗಳನ್ನು ಪೋಸ್ಟ್ ಮಾಡುವುದು ಹೆಚ್ಚಾಗುತ್ತಿದೆ.

ಇತ್ತೀಚೆಗೆ ನಟಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಫೋಟೊಗಳನ್ನು ಕಳುಹಿಸಿ, ಕೆಟ್ಟದಾಗಿ ಮೆಸೇಜ್ ಮಾಡಿದ ಪರಿಣಾಮ ಏನೆಲ್ಲಾ ಆಯಿತು ಎನ್ನುವುದು ಕಣ್ಣಮುಂದಿದೆ. ಆದರೂ ಕೆಲವರು ಸೋಶಿಯಲ್ ಮೀಡಿಯಾವನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವೇ ಆಗುತ್ತಿಲ್ಲ. ಸೈಬಲ್ ಕ್ರೈಂ ಪೊಲೀಸರ ಬಗ್ಗೆ ಇಂತಹ ಸಾಕಷ್ಟು ದೂರುಗಳು ಪ್ರತಿದಿನ ಬರುತ್ತಲೇ ಇವೆ. ಇನ್ನು ಚಿಕ್ಕ ಮಕ್ಕಳನ್ನು ಬಿಡದೇ ಕೆಟ್ಟ ಮೀಮ್ಸ್, ಡಬಲ್ ಮೀನಿಂಗ್ ಟ್ರೋಲ್ಸ್ ಮಾಡುವ ಕಿಡಿಗೇಡಿಗಳು ಇದ್ದಾರೆ. ತೆಲುಗು ನಟ ಸಾಯಿ ಧರಂ ತೇಜ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸೋಷಲ್ ಮೀಡಿಯಾ ತುಂಬಾ ಕ್ರೂರವಾಗಿ, ಅಪಾಯಕಾರಿಯಾಗಿ ಬದಲಾಗಿದೆ. ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಹಾಗಾಗಿ ನೀವು ನಿಮ್ಮ ಮಕ್ಕಳ ವೀಡಿಯೋ, ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಾಗ ದಯವಿಟ್ಟು ಸ್ವಲ್ಪ ಯೋಚಿಸಿ. ಇದು ಪೋಷಕರಿಗೆ ನನ್ನ ಮನವಿ. ಯಾಕಂದರೆ ಸೋಶಿಯಲ್ ಮೀಡಿಯಾದಲ್ಲಿರುವ ಕೆಲವರು ಮೃಗಗಳ ರೀತಿ ವರ್ತಿಸುತ್ತಿದ್ದಾರೆ. ಅಂತಹವರಿಗೆ ಮಕ್ಕಳನ್ನು ರಕ್ಷಿಸಿಕೊಳ್ಳುವ ಅವಸರ, ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ದಯವಿಟ್ಟು ನಿಮ್ಮ ಮಕ್ಕಳ ಫೋಟೋಗಳು, ವೀಡಿಯೊಗಳನ್ನು ಪೋಸ್ಟ್ ಮಾಡುವ ಮೊದಲು ಎಚ್ಚರಿಕೆಯಿಂದಿರಿ. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ನೀಚವಾಗಿ ವರ್ತಿಸುವ ಮೃಗಗಳಿಗೆ ಸಂತ್ರಸ್ತ ಪೋಷಕರ ನೋವು ಅರ್ಥವಾಗಲ್ಲ." ಎಂದು ಸಾಯಿ ಧರಮ್ ತೇಜ್ ಪೋಸ್ಟ್ ಮಾಡಿದ್ದಾರೆ.
ಸದ್ಯ ಸಾಯಿ ಧರಂ ತೇಜ್ ಪೋಸ್ಟ್ ವೈರಲ್ ಆಗುತ್ತಿದೆ. ಸಾಕಷ್ಟು ಜನ ಅವರನ್ನು ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಅಷ್ಟಕ್ಕೂ ಏನಾಯ್ತು ಎಂದು ಕೇಳುತ್ತಿದ್ದಾರೆ. ಇದಕ್ಕೆ ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ರಿಪ್ಲೇ ಮಾಡಿ ಮಕ್ಕಳ ಮೇಲೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ, ಯೂಬರ್‌ಗಳು ಮಾಡುತ್ತಿರುವ ವಲ್ಗರ್ ಕಾಮೆಡಿ ಬಗ್ಗೆ ವಿವರಿಸಿದ್ದಾರೆ. ಬಳಿಕ ಸ್ವತಃ ಸಾಯಿ ಧರಂ ಒಂದಷ್ಟು ವೀಡಿಯೋ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಸೆಲಬ್ರೆಟಿ ಮಕ್ಕಳು, ಸಾಮಾನ್ಯರ ಫೋಟೋಗಳನ್ನು ವಲ್ಗರ್ ಆಗಿ ತೋರಿಸುತ್ತಾ, ಮಾರ್ಫಿಂಗ್ ಮಾಡುತ್ತಾ ಅದರ ಬಗ್ಗೆ ಚರ್ಚಿಸುತ್ತಾ ಕೆಲವರು ವೀಡಿಯೊಗಳನ್ನು ಹಾಕುತ್ತಿದ್ದಾರೆ.
ಈ ಹಿಂದೆ ರಸ್ತೆ ಅಪಘಾತದಲ್ಲಿ ನಟ ಸಾಯಿ ಧರಂ ತೇಜ್ ಗಂಭೀರವಾಗಿ ಗಾಯಗೊಂಡು ಕೋಮಾಗೆ ಹೋಗಿದ್ದರು. ಹಲವು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಬದುಕಿ ಬಂದಿದ್ದರು. ನಟ ಚಿರಂಜೀವಿ ಸಹೋದರಿ ಪುತ್ರ ಸಾಯಿ ಧರಂ ತೇಜ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











