ನ್ಯೂಜಿಲೆಂಡ್‌ನಲ್ಲಿ 7000 ಎಕರೆ ಭೂಮಿ ಖರೀದಿಸಿದ್ದೀನಿ ಎಂದ ತೆಲುಗು ನಟ!
ಕೋಟಿ ಕೋಟಿ ಸಂಭಾವನೆ ಪಡೆಯುವ ಕಲಾವಿದರು ಅದನ್ನು ಉದ್ಯಮದಲ್ಲಿ ತೊಡಗಿಸಿ ಮತ್ತಷ್ಟು ಆದಾಯ ಗಳಿಸುತ್ತಾರೆ. ರಿಯಲ್ ಎಸ್ಟೇಟ್ ಮೇಲೆ ಹಣ ಹೂಡುವವರು ಇದ್ದಾರೆ. ದೇಶ ವಿದೇಶಗಳಲ್ಲಿ ಆಸ್ತಿ ಸಂಪಾದಿಸಿದ್ದಾರೆ. ತೆಲುಗು ನಟ ಪ್ರಭಾಸ್ ಇಟಲಿಯಲ್ಲಿ ಐಷಾರಾಮಿ ಬಂಗಲೆ ಕೊಂಡುಕೊಂಡಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು.
ತೆಲುಗಿನ ಮತ್ತೊಬ್ಬ ನಟ ಇದೀಗ ನ್ಯೂಜಿಲೆಂಡ್‌ನಲ್ಲಿ ಬರೋಬ್ಬರಿ 7000 ಎಕರೆ ಭೂಮಿ ಖರೀದಿಸಿರುವುದಾಗಿ ಹೇಳಿದ್ದಾರೆ. ಕಪ್ಪು ಹಣದಿಂದ ನಾನು ಇದನ್ನು ಕೊಂಡುಕೊಂಡಿದ್ದೇನೆ ಎಂದು ಮಾತನಾಡಿದ್ದಾರೆ. ಅವರು ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಎಲ್ಲಿಂದ ಹಣ ತಂದು ಇಷ್ಟು ಮೊತ್ತದ ಆಸ್ತಿ ಖರೀದಿಸಿದ್ರಿ? ನ್ಯೂಜಿಲೆಂಡ್‌ನಲ್ಲಿ 7000 ಎಕರೆ ಜಾಗ ಅಂದರೆ ತಮಾಷೆನಾ? ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

ಟಾಲಿವುಡ್ ಹಿರಿಯ ನಟ ಮೋಹನ್ ಬಾಬು ನ್ಯೂಜಿಲೆಂಡ್‌ನಲ್ಲಿ ತಾವು 7000 ಎಕರೆ ಜಾಗ ಖರೀದಿಸಿರುವುದಾಗಿ ಹೇಳಿದ್ದಾರೆ. ಆ ಜಾಗದಿಂದಲೇ ವೀಡಿಯೋ ಮಾಡಿದ್ದಾರೆ. ಸುತ್ತಾಮುತ್ತ ಕಾಣುವ ಬೆಟ್ಟಗಳೆಲ್ಲಾ ನಮ್ಮದೇ ಎಂದಿದ್ದಾರೆ. ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲೇ ನಡೀತು. ವಿಷ್ಣು ತಂದೆ ನಟ ಮೋಹನ್ ಬಾಬು 200 ಕೋಟಿ ರೂ. ಬಜೆಟ್‌ನಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ 'ಕಣ್ಣಪ್ಪ' ಚಿತ್ರದ ಚಿತ್ರೀಕರಣದ ವೇಳೆ ತಾವು ಉಳಿದುಕೊಂಡಿದ್ದ ಫಾರ್ಮ್‌ಹೌಸ್‌ನಲ್ಲಿ ನಿಂತು ವೀಡಿಯೋ ಮಾಡಿದ್ದಾರೆ. "ಈ ಜಾಗವೆಲ್ಲಾ ನನ್ನದು ಹಾಗೂ ನನ್ನ ಮಗ ವಿಷ್ಣುಗೆ ಸೇರಿದ್ದು" ಎಂದಿದ್ದಾರೆ. ವೀಡಿಯೋ ಮಾಡುತ್ತಿದ್ದ ಹಾಸ್ಯನಟ ಬ್ರಹ್ಮಾಜಿ "ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳು ಕೇಳಿಸಿಕೊಳ್ಳುತ್ತಿದ್ದಾರೆ. ಕಪ್ಪು ಹಣ ತಂದು ಇಲ್ಲಿ ಹೂಡಿಕೆ ಮಾಡಿದ್ದೀರಂತೆ" ಎಂದಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ನಟ ಮೋಹನ್ ಬಾಬು "ನಮ್ಮ ಬಳಿ ಯಾವುದೇ ಬ್ಲ್ಯಾಕ್ ಮನಿ ಇಲ್ಲ. ನ್ಯೂಜಿಲೆಂಡ್‌ನಲ್ಲಿರುವ ವನಾಕದಲ್ಲಿ 7000 ಎಕರೆ ಜಾಗ ತಗೊಂಡಿದ್ದೀವಿ. ಇದೆಲ್ಲಾ ನಮ್ದೇ ಎಂದು ಹೇಳಿದ್ದಾರೆ. ಆ ಬೆಟ್ಟ, ಸಹೋವರ ಎಲ್ಲಾ ನಮ್ಮದೇ" ಎಂದಿದ್ದಾರೆ. ಅದೇ ಸಮಯದಲ್ಲಿ ಕೊರಿಯೊಗ್ರಫರ್ ಪ್ರಭುದೇವಾ ಅಲ್ಲಿಗೆ ಬಂದಿದ್ದಾರೆ. ಕೂಡಲೇ "ಪ್ರಭುದೇವಾ ಜೊತೆ ಸೇರಿ 7000 ಸಾವಿರ ಎಕರೆ ಖರೀದಿಸಿದೆ" ಎಂದು ಮೋಹನ್ ಬಾಬು ಹೇಳಿದ್ದಾರೆ. ಸದ್ಯ ಈ ವೀಡಿಯೋಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೋಹನ್ ಬಾಬು ತಮಾಷೆಯಾಗಿ ಮಾಡಿರುವ ವೀಡಿಯೋ ಇದು ಎನ್ನಲಾಗುತ್ತಿದೆ.
ಸಹ ಕಲಾವಿದರಾಗಿ, ಖಳನಟನಾಗಿ ತೆಲುಗು ಚಿತ್ರರಂಗ ಪ್ರವೇಶಿಸಿದ್ದ ಮೋಹನ್ ಬಾಬು ಬಳಿಕ ಹೀರೊ ಆಗಿ ಸಕ್ಸಸ್ ಕಂಡಿದ್ದರು. ಒಂದ್ಕಾಲದಲ್ಲಿ ನಟ ಮೋಹನ್ ಬಾಬು ಕಲೆಕ್ಷನ್ ಕಿಂಗ್ ಎಂದೇ ಖ್ಯಾತರಾಗಿದ್ದರು. ಕನ್ನಡ ನಟ ಅಂಬರೀಶ್ ಜೊತೆ ಮೋಹನ್ ಬಾಬು ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಅಂಬಿ ಸಂಭ್ರಮ ಕಾರ್ಯಕ್ರಮದಲ್ಲಿ ಕೂಡ ಭಾಗಿ ಆಗಿದ್ದರು. ಇವತ್ತಿಗೂ ಎರಡೂ ಕುಟುಂಬಗಳ ನಡುವೆ ಉತ್ತಮ ಒಡನಾಟ ಮುಂದುವರೆದಿದೆ.
ಈ ವಾರವೇ 'ಕಣ್ಣಪ್ಪ' ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಪ್ರಭಾಸ್, ಮೋಹನ್ ಲಾಲ್ ಸಂಭಾವನೆ ಪಡೆಯದೇ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮಿಂಚಿದ್ದಾರೆ. ಅಣ್ಣಾವ್ರು ನಟಿಸಿದ್ದ 'ಬೇಡರ ಕಣ್ಣಪ್ಪ' ಚಿತ್ರದ ಕಥೆಯನ್ನೇ ಈ ಚಿತ್ರದಲ್ಲೂ ಹೇಳಲಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.


Click it and Unblock the Notifications











